ಮೊದಲನೇ ವಾಚನ: ೨ ಕೊರಿಂಥಿಯರಿಗೆ 1:1-7
ಕೊರಿಂಥದಲ್ಲಿರುವ ದೇವರ ಸಭೆಗೂ ಅಖಾಯ ಸೀಮೆಯಲ್ಲಿರುವ ಎಲ್ಲಾ ದೇವಜನರಿಗೂ - ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಪ್ರೇಷಿತನಾದ ಪೌಲನು ಸಹೋದರ ತಿಮೋಥೇಯನೊಡನೆ ಸೇರಿ ಬರೆಯುವ ಪತ್ರ, ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಆಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ! ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣಾಭರಿತ ತಂದೆ; ಸಕಲ ಸಾಂತ್ವನವನ್ನೀಯುವ ದೇವರು. ನಮಗೆ ಒದಗುವ ಎಲ್ಲಾ ಸಂಕಷ್ಟಗಳಲ್ಲಿ ಅವರು ನಮ್ಮನ್ನು ಸಂತೈಸುತ್ತಾರೆ. ಹೀಗೆ ದೇವರಿಂದ ದೊರೆತ ಆದರಣೆಯಿಂದ ವಿವಿಧ ಸಂಕಷ್ಟಗಳಲ್ಲಿ ನರಳುತ್ತಿರುವವರನ್ನು ಸಂತೈಸುವುದಕ್ಕೆ ನಾವು ಶಕ್ತರಾಗುತ್ತೇವೆ. ಕ್ರಿಸ್ತ ಯೇಸುವಿನ ಯಾತನೆಯು ನಮ್ಮ ಬಾಳಿನಲ್ಲಿ ತುಂಬಿರುವಂತೆ ಅವರ ಮುಖಾಂತರ ಲಭಿಸುವ ಸಾಂತ್ವನವೂ ನಮ್ಮಲ್ಲಿ ತುಂಬಿರುತ್ತದೆ. ನಾವು ಕಷ್ಟಸಂಕಟಗಳನ್ನು ಸಹಿಸಬೇಕಾಗುವುದು ಸಹ ನಿಮ್ಮ ಉಪಶಮನ ಹಾಗೂ ಸಾಂತ್ವನಕ್ಕಾಗಿಯೇ. ನಮ್ಮ ಕಷ್ಟಸಂಕಟಗಳು ನಿವಾರಣೆಯಾದರೆ ಅದು ನಿಮ್ಮ ಆದರಣೆಯಾಗಿಯೇ. ನಾವು ಪಡುವ ಯಾತನೆಯನ್ನು ನೀವು ಸಹನೆಯಿಂದ ಅನುಭವಿಸುವಂತೆ ಅದು ಹುರಿದುಂಬಿಸುತ್ತದೆ. ನಿಮ್ಮಲ್ಲಿ ನಮಗೆ ಅಚಲವಾದ ಭರವಸೆಯಿದೆ. ಏಕೆಂದರೆ, ನಮ್ಮ ಯಾತನೆಗಳಲ್ಲಿ ನೀವು ಪಾಲುಗೊಳ್ಳುವಂತೆ ನಾವು ಪಡೆಯುವ ಸಾಂತ್ವನದಲ್ಲಿಯೂ ನೀವು ಸಹಭಾಗಿಗಳಾಗಿದ್ದೀರಿ, ಎಬುದು ನಮಗೆ ಗೊತ್ತಿದೆ.
ಕೀರ್ತನೆ: 34: 2-3, 4-5, 6-7, 8-9
ಶ್ಲೋಕ: ಸವಿದು ನೋಡು ಪ್ರಭುವಿನ ಮಾಧುರ್ಯವನು
ಶುಭಸಂದೇಶ: ಮತ್ತಾಯ 5:1-12
ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು. ಆಗ ಯೇಸು ಇಂತೆಂದು ಪ್ರಬೋಧಿಸಿದರು: "ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು. ದುಃಖಿಗಳು ಭಾಗ್ಯವಂತರು ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು. ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು. ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು, ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು. ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು.
No comments:
Post a Comment