ಮೊದಲನೇ
ವಾಚನ: 2 ಕೊರಿಂಥಿಯರಿಗೆ
6:1--10
ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ "ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು," ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ.
ಇದೇ ಆ ಉದ್ಧಾರದ ಸುದಿನ.
ನಮ್ಮ ಸೇವಾಕಾರ್ಯವು ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಯಾವ ತೆರನಾದ ಅಡ್ಡಿಯನ್ನೂ ಒಡ್ಡಲಿಲ್ಲ. ಬದಲಿಗೆ, ಎಲ್ಲ ವಿಷಯಗಳಲ್ಲೂ ದೇವರ ದಾಸರೆಂದು ತೋರಿಸಿಕೊಳ್ಳುತ್ತೇವೆ. ಕಷ್ಟಸಂಕಟಗಳಲ್ಲೂ ದುಃಖದುರಿತಗಳಲ್ಲೂ
ತಾಳ್ಮೆಯಿಂದ ವರ್ತಿಸಿದ್ದೇವೆ. ಏಟು ಪೆಟ್ಟುಗಳನ್ನು ತಿಂದಿದ್ದೇವೆ, ಸೆರೆಮನೆವಾಸ
ಅನುಭವಿಸಿದ್ದೇವೆ, ಕೋಪ ಕ್ರಾಂತಿಗಳಿಗೆ ಗುರಿಯಾಗಿದ್ದೇವೆ, ಮೈಮುರಿಯೆ ದುಡಿದಿದ್ದೇವೆ, ನಿದ್ದೆಗೆಟ್ಟು ಬಳಲಿದ್ದೇವೆ, ಊಟವಿಲ್ಲದೆ ಸೊರಗಿದ್ದೇವೆ. ನಿರ್ಮಲ ಮನಸ್ಸು, ಸನ್ಮತಿ, ಸಹನೆ, ಸದಯತೆಯಿಂದಲೂ, ಪವಿತ್ರಾತ್ಮ, ನಿಷ್ಕಪಟ, ಪ್ರೆಮ, ಸತ್ಯೋಕ್ತಿ, , ದೈವಶಕ್ತಿ ಇವುಗಳಿಂದಲೂ ನಾವು ದೇವರ ದಾಸರೆಂದು ತೋರ್ಪಡಿಸುತ್ತೇವೆ. ರಕ್ಷಿಸಲೂ ಎದುರಿಸಲೂ ಧರ್ಮವೆಂಬ ಅಯುಧವನ್ನು ಕೈಯಲ್ಲಿ ಹಿಡಿದಿದ್ದೇವೆ. ಮಾನ--ಅವಮಾನ, ಕೀರ್ತಿ--ಅಪಕೀರ್ತಿ ಎರಡನ್ನೂ ಅನುಭವಿಸುತ್ತಿದ್ದೇವೆ. ಸತ್ಯವಾದಿಗಳು ನಾವಾದರೂ ಮಿಥ್ಯವಾದಿಗಳು ಎಂದೆನಿಸಿಕೊಂಡಿದ್ದೇವೆ. ಪ್ರಖ್ಯಾತರಾಗಿದ್ದರೂ ಖ್ಯಾತಿರಹಿತರಾಗಿದ್ದೇವೆ. ಬದುಕಿದ್ದರೂ ಸತ್ತವರೆನಿಸಿಕೊಂಡಿದ್ದೇವೆ. ಶಿಕ್ಷೆಗೆ ಗುರಿಯಾಗಿದ್ದರೂ ಇನ್ನೂ ಕೊಲೆಗೆ ಈಡಾಗದೆ ಇದ್ದೇವೆ. ದುಃಖಪಡುತ್ತಿದ್ದರೂ ಸದಾ ಸಂತೋಷದಿಂದ ಇದ್ದೇವೆ. ದರಿದ್ರರಾಗಿದ್ದರೂ ಅನೇಕರನ್ನು ಧನವಂತರನ್ನಾಗಿಸುತ್ತಿದ್ದೇವೆ. ನಾವು ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಂತೆ ಇದ್ದೇವೆ.
ಕೀರ್ತನೆ: 98:1, 2, 3, 3--4
ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು
ಶುಭಸಂದೇಶ:
ಮತ್ತಾಯ 5:38--42
ಯೇಸುಸ್ವಾಮಿ
ತಮ್ಮ ಶಿಷ್ಯರಿಗೆ ಹೀಗೆಂದರು: "ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು" ಎಂಬುದನ್ನು ನೀವು ಕೇಳಿದ್ದೀರಿ. ಆದರೆ ನನ್ನ ಬೋಧನೆ ಇದು: ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನು ಒಡ್ಡು. ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ
ಹೊರ ಅಂಗಿಯನ್ನೂ ಕೊಟ್ಟುಬಿಡು. ಯಾರಾದರೂ ಒಂದು ಕಿಲೋಮೀಟರ್ ದೂರ ಬಾ ಎಂದು ನಿನ್ನನ್ನು
ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೋಮೀಟರ್ ಹೋಗು; ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ."
ಮನಸಿಗೊಂದಿಷ್ಟು : ಯೇಸುವಿನ ಮೌಲ್ಯಗಳನ್ನು ಒಪ್ಪಿಕೊಳ್ಳುವವರು, ಒಪ್ಪಿಕೊಳ್ಳಲಾಗದವರ ನಡುವಿನ ಗೆರೆಯನ್ನು ಇಂದಿನ ಶುಭ ಸಂದೇಶವು ಸ್ಪಷ್ಟಪಡಿಸುತ್ತದೆ. ಯೇಸುವನ್ನು ದೇವರೆಂದು ಒಪ್ಪಿಕೊಳ್ಳುವವರು ಅವರ ಮಾತನ್ನು ಕೇಳಬೇಕಾಗುತ್ತದೆ, ಅದು ಅದೆಷ್ಟೇ ಕಷ್ಟವೆಂದೆನಿಸಿದರೂ. ಅವರ ಮಾತುಗಳನ್ನು ಅಳವಡಿಸಿಕೊಳ್ಳಲು ಪರಿಶ್ರಮಬೇಕು. ಯೇಸುವಿನ ಮೇಲಿನ ಪ್ರೀತಿಯೇ ಆ ಪರಿಶ್ರಮದ ಮೊದಲ ಹೆಜ್ಜೆ.
ಪ್ರಶ್ನೆ : ವ್ಯಾಜ್ಯ ಮಾಡಿಕೊಂಡವರ ಬಗ್ಗೆ ನಮ್ಮ ನಡುವಳಿಕೆ ಎಂಥದ್ದು?
ಪ್ರಶ್ನೆ : ವ್ಯಾಜ್ಯ ಮಾಡಿಕೊಂಡವರ ಬಗ್ಗೆ ನಮ್ಮ ನಡುವಳಿಕೆ ಎಂಥದ್ದು?
No comments:
Post a Comment