ಮೊದಲನೇ ವಾಚನ: 2 ಕೊರಿಂಥಿಯರಿಗೆ 11:1--11
ತನ್ನನ್ನು ನಾನೇ ಹೊಗಳಿಕೊಳ್ಳುವ ಹುಚ್ಚುತನವನ್ನು ನೀವು ಸ್ವಲ್ಪ ಸಹಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ನಿಮ್ಮ ಬಗ್ಗೆ ದೇವರಿಗಿರುವ ಪ್ರೇಮಾಸೂಹೆ ನನಗೂ ಇದೆ. ನಿಷ್ಕಳಂಕ ಕನ್ನಿಕೆಯೊಬ್ಬಳನ್ನು ಅವಳ ಏಕೈಕ ಪುರುಷನಿಗೆ ನಿಮ್ಮನ್ನು ನಿಶ್ಚಯಮಾಡಿದ್ದೇನೆ. ಆದರೂ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿ ಮೋಸಹೋದಂತೆ ನೀವೂ ಕೂಡ ಕ್ರಿಸ್ತ ಯೇಸುವಿನ ವಿಷಯದಲ್ಲಿ ಇರಬೇಕಾದ ಶುದ್ಧ ಪಾತಿವ್ರತ್ಯಯನ್ನು ಕಳೆದುಕೊಂಡು ಕೆಟ್ಟುಹೋದಿರಿ ಎಂಬ ಭಯ ನನಗುಂಟು. ಏಕೆಂದರೆ, ಯಾರಾದರೂ ಬಂದು, ನಾವು ಬೋಧಿಸದೆ ಇರುವ ಬೇರೊಬ್ಬ ಯೇಸುವನ್ನು ಬೋಧಿಸಿದರೆ ನೀವು ಸ್ವೀಕರಿಸುತ್ತೀರಿ. ನೀವು ಹೊಂದಿರುವ ಪವಿತ್ರಾತ್ಮರಿಗೆ ಬದಲಾಗಿ ಬೇರೊಬ್ಬ ಆತ್ಮವನ್ನು ಪಡೆಯುವಂತೆ ಮಾಡಿದರೆ, ನೀವು ಸ್ವಾಗತಿಸುತ್ತೀರಿ. ನಿಮಗೆ ಈಗಾಗಲೇ ದೊರಕಿರುವ ಶುಭಸಂದೇಶವಲ್ಲದೆ ಬೇರೊಂದು ಸಂದೇಶವನ್ನು ನಿಮಗೆ ಸಾರಿದರೆ, ನೀವು ಒಮ್ಮೆಗೇ ಒಪ್ಪಿಕೊಳ್ಳುತ್ತೀರಿ. ಇದು ನಿಜಕ್ಕೂ ಆಶ್ಚರ್ಯವೇ ಸರಿ.ಮಹಾ ಪ್ರೇಷಿತರು" ಎನ್ನಿಸಿಕೊಳ್ಳುವ ಆ ಜನರಿಗಿಂತ ನಾನು ಯಾವುದರಲ್ಲೂ ಕಡಿಮೆಯಿಲ್ಲ. ಮಾತಿನಲ್ಲಿ ಚತುರನಲ್ಲದಿದ್ದರೂ ಜ್ಞಾನದಲ್ಲಿ ಅಲ್ಪನಲ್ಲ. ಇದನ್ನು ನಿಮಗೆ ಎಲ್ಲಾ ಸಮಯ ಸಂಧರ್ಭಗಳಲ್ಲೂ ಸ್ಪಷ್ಟಪಡಿಸಿದ್ದೇನೆ. ನಿಮಗೆ ದೇವರ ಶುಭಸಂದೇಶವನ್ನು ಉಚಿತವಾಗಿಯೇ ಬೋಧಿಸಿದೆನು. ನಿಮ್ಮನ್ನು ಮೇಲಕ್ಕೇರಿಸಲು ನನ್ನನ್ನೇ ತಗ್ಗಿಸಿಕೊಂಡೆನು. ಹೀಗೆ ಮಾಡಿದ್ದು ತಪ್ಪಾಯಿತೇ? ನಿಮಗೆ ಸೇವೆಮಾಡುವುದಕ್ಕೋಸ್ಕರ ನಾನು ಬೇರೆ ಸಭೆಗಳಿಂದ ನೆರವು ಪಡೆಯುತ್ತಿದ್ದೆ, ನಿಮಗೋಸ್ಕರ ಇತರ ಸಭೆಗಳಿಂದ ಹಣ ವಸೂಲಿಮಾಡುತ್ತಿದ್ದೆ. ನಾನು ನಿಮ್ಮೊಂದಿಗಿದ್ದಾಗ ನನಗೆ ಹಣದ ಕೊರತೆ ಇದ್ದರೂ ನಿಮ್ಮಲ್ಲಿ ಯಾರಿಗೂ ಹೊರೆಯಾಗಲಿಲ್ಲ. ಮಕೆದೋನಿಯಾದಿಂದ ಬಂದ ಸಹೋದರರು ನನ್ನ ಕೊರತೆಯನ್ನೆಲ್ಲಾ ನೀಗಿಸಿದರು. ನಿಮಗೆ ಯಾವುದರಲ್ಲೂ ಹೊರೆಯಾಗಬಾರದೆಂದು ಎಚ್ಚರಿಕೆ ವಹಿಸಿದ್ದೆ; ಇನ್ನೂ ಮುಂದಕ್ಕೂ ಎಚ್ಚರಿಕೆಯಿಂದ ಇರುತ್ತೆನೆ. ಈ ನನ್ನ ಹೊಗಳಿಕೆಯನ್ನು ಅಖಾಯ ಪ್ರಾಂತ್ಯದ ಯಾರೂ ಅಡಗಿಸುವಂತಿಲ್ಲವೆಂದು ಕ್ರಿಸ್ತಯೇಸುವಿನ ಮುಂದೆ ಸತ್ಯವಾಗಿ ನುಡಿಯುತ್ತೇನೆ. ನಿಮ್ಮಿಂದ ನಾನು ಏನನ್ನೂ ತೆಗೆದುಕೊಳ್ಳುತ್ತಿಲ್ಲವೇಕೆ? ನಿಮ್ಮ ಮೇಲೆ ಪ್ರೀತಿ ಇಲ್ಲದ್ದಿರಿಂದಲೋ? ಇಲ್ಲ, ನಿಮ್ಮ ಮೇಲೆ ನಮಗಿರುವ ಪ್ರೀತಿ ಎಷ್ಟೆಂದು ದೇವರೇ ಬಲ್ಲರು.
ಕೀರ್ತನೆ: 111:1--2, 3--4, 7--8
ಶ್ಲೋಕ: ನೀತಿ ಸತ್ಯತೆಯುಳ್ಳವು ಪ್ರಭುವಿನ ಸತ್ಕಾರ್ಯಗಳು.
ಶುಭಸಂದೇಶ: ಮತ್ತಾಯ 6:7--15
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು:ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ: ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ನಮಗಿಂದುಕೊಡಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ, ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ," ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು."
No comments:
Post a Comment