ಮೊದಲನೇ ವಾಚನ: ಆದಿಕಾಂಡ 16:1-12, 15-16
ಅಬ್ರಾಮನ ಹೆಂಡತಿ ಸಾರಳಿಗೆ ಮಕ್ಕಳಿರಲಿಲ್ಲ. ಆಕೆಗೆ ಈಜಿಪ್ಟ್ ದೇಶವಳಾದ ಹಾಗರಳೆಂಬ ಒಬ್ಬ ದಾಸಿ ಇದ್ದಳು. ಎಂದೇ ಸಾರಯಳು ಅಬ್ರಾಮನಿಗೆ, "ನೋಡಿ, ನನಗೇನೋ ಸರ್ವೇಶ್ವರಸ್ವಾಮಿ ಮಕ್ಕಳನ್ನು ದಯಪಾಲಿಸಲಿಲ್ಲ; ನೀವು ನನ್ನ ದಾಸಿಯನ್ನು ಸೇರಬೇಕು. ಬಹುಶಃ ಅವಳ ಮೂಲಕವಾದರೂ ನನಗೆ ಮಕ್ಕಳಾದೀತು," ಎಂದು ಹೇಳಿದಳು. ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು. ಹೀಗೆ ಹತ್ತು ವರ್ಷ ಕಾನಾನ್ ನಾಡಿನಲ್ಲಿ ವಾಸಮಾಡಿದ ಮೇಲೆ ಅಬ್ರಾಮನ ಹೆಂಡತಿ ಸಾರಯಳು ಈಜಿಪ್ಟಿನ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಉಪಪತ್ನಿಯಾಗಿ ಒಪ್ಪಿಸಿದಳು. ಅಬ್ರಾಮನು ಹಾಗರಳನ್ನು ಕೂಡಿದನು ಅವಳು ಗರ್ಭಿಣಿಯಾದಳು ತಾನು ಗರ್ಭಿಣಿಯಾದೆನೆಂದು ತಿಳಿದು ಅವಳು, ತನ್ನ ಯಜಮಾನಿಯನ್ನೇ ತಾತ್ಸಾರ ಮಾಡತೊಡಗಿದಳು. ಆಗ ಸಾರಯಳು ಅಬ್ರಾಮನಿಗೆ, "ನನಗೆ ಅನ್ಯಾಯವಾಗುತ್ತಿದೆ; ಇದಕ್ಕೆ ನೀವೇ ಹೊಣೆ. ನನ್ನ ದಾಸಿಯನ್ನು ನಿಮಗೆ ಉಪಪತ್ನಿಯಾಗಿ ಕೊಟ್ಟೆನಷ್ಟೆ; ಇವಳೋ, ತಾನು ಗರ್ಭಿಣಿಯಾದೆನೆಂದು ತಿಳಿದದ್ದೆ, ನನ್ನನ್ನು ತಾತ್ಸಾರ ಮಾಡುತ್ತಿದ್ದಾಳೆ. ಈಗ ಸರ್ವೇಶ್ವರಸ್ವಾಮಿಯೇ ನಿಮಗೂ ನನಗೂ ನ್ಯಾಯ ತೀರಿಸಬೇಕು," ಎಂದು ದೂರಿದಳು. ಅದಕ್ಕೆ ಅಬ್ರಾಮನು, "ನಿನ್ನ ದಾಸಿ ನಿನ್ನ ಕೈಯಲ್ಲೇ ಇದ್ದಾಳೆ. ನಿನಗಿಷ್ಟಬಂದಂತೆ ಮಾಡು," ಎಂದುಬಿಟ್ಟನು. ಬಳಿಕ ಸಾರಯಳು ಕೊಡುತ್ತಿದ್ದ ಕಿರುಕುಳವನ್ನು ತಾಳಲಾರದೆ ಹಾಗರಳು ಓಡಿಹೋದಳು. ಮರಳುಗಾಡಿನಲ್ಲಿ ಶೂರಿಗೆ ಹೋಗುವ ಹಾದಿಪಕ್ಕದಲ್ಲಿದ್ದ ಒಂದು ಒರತೆಯ ಬಳಿ ಸ್ವಾಮಿಯ ದೂತನು ಅವಳನ್ನು ಕಂಡನು. "ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?" ಎಂದು ವಿಚಾರಿಸಿದನು. "ನನ್ನ ಯಜಮಾನಿ ಸಾರಯಳ ಬಳಿಯಿಂದ ಓಡಿಹೋಗುತ್ತಿದ್ದೇನೆ," ಎಂದು ಉತ್ತರಕೊಟ್ಟಳು. ಅದಕ್ಕೆ ಆ ದೂತನು, "ನಿನ್ನ ಯಜಮಾನಿಯ ಬಳಿಗೆ ಹಿಂತಿರುಗು, ಅವಳಿಗೆ ತಗ್ಗಿ ನಡೆದುಕೊ," ಎಂದು ತಿಳಿಸಿದನು. ಅದೂ ಅಲ್ಲದೆ ಸ್ವಾಮಿಯ ದೂತನು, "ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ದೊಡ್ಡದಾಗಿಸುವೆನು," ಎಂದು ಹೇಳಿ ಇಂತೆಂದನು: ಹುಟ್ಟುವನು ಮಗನೊಬ್ಬನು ಗರ್ಭಿಣಿಯಾದ ನಿನಗೆ, ಇಷ್ಮಾಯೇಲೆಂಬ ಹೆಸರನಿಡು ಅವನಿಗೆ, ಕಾರಣ - ಸರ್ವೇಶ್ವರ ಕಿವಿಗೊಟ್ಟಿಹನು ನಿನ್ನ ಮೊರೆಗೆ, ಬಾಳುವನವನು ಕಾಡುಗತ್ತೆಯಂತೆ, ಎತ್ತುವನು ಕೈಯನ್ನು ಎಲ್ಲರ ಮೇಲೆ, ಎತ್ತುವರೆಲ್ಲರು ಕೈ ಅವನ ಮೇಲೆ ಬಾಳುವನು ಸೋದರರಿಗೆ ಎದುರುಬದುರಾಗಿ," ಹಾಗರಳು ಅಬ್ರಾಮನಿಗೆ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. ಆಗ ಅಬ್ರಾಮನಿಗೆ ಎಂಬತ್ತಾರು ವರ್ಷವಾಗಿತ್ತು.
ಕೀರ್ತನೆ: 106:2, 3-4, 5
ಶ್ಲೋಕ: ಪ್ರಭು ದಯಾಪೂರಿತ, ತೋರಿ ಆತನಿಗೆ ನಿಮ್ಮ ಕೃತಜ್ಞತಾಸ್ತೋತ್ರ
ಶುಭಸಂದೇಶ: ಮತ್ತಾಯ 7:21-29
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು "ಸ್ವಾಮೀ, ಸ್ವಾಮೀ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ತೀರ್ಪಿನ ದಿನದಂದು, 'ಸ್ವಾಮೀ, ಸ್ವಾಮೀ ನಿಮ್ಮ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ಹಲವಾರು ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?" ಎಂದು ಅನೇಕರು ನನಗೆ ಹೇಳುವರು. ಆಗ ನಾನು ಅವರಿಗೆ "ಇಂದಿಗೂ ನಿಮ್ಮ ಗುರುತೇ ನನಗಿಲ್ಲ. ಅಧರ್ಮಿಗಳೇ, ನನ್ನಿಂದ ತೊಲಗಿರಿ," ಎಂದು ಬಹಿರಂಗವಾಗಿ ಹೇಳಿಬಿಡುವೆನು. ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು. ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!" ಯೇಸುಸ್ವಾಮಿ ಇದೆಲ್ಲವನ್ನು ಹೇಳಿ ಮುಗಿಸಿದರು. ಅವರ ಬೋಧನೆ ಜನರಲ್ಲಿ ಅಮೋಗ ಪ್ರಭಾವವನ್ನು ಬೀರಿತು. ಏಕೆಂದರೆ, ಅವರ ಧರ್ಮಶಾಸ್ತ್ರಿಗಳಂತೆ ಭೋಧಿಸದೆ ಯೇಸು ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು.
No comments:
Post a Comment