ಮೊದಲನೆಯ ವಾಚನ: ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ವಾಚನ 25:6-10
ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಠವಾದ ದ್ರಾಕ್ಷರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು. ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು. ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವರು. ಸರ್ವೇಶ್ವರಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿ ಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರ ಸ್ವಾಮಿಯೇ ಇಂತೆಂದು ನುಡಿದಿದ್ದಾರೆ. ಇದು ನೆರವೇರಿದಾಗ ಜನರು "ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೆ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ ! "ಎಂದು ಹೇಳಿಕೊಳ್ಳುವರು. ಸರ್ವೇಶ್ವರಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.
ಕೀರ್ತನೆ: 23:1-2,3-4,5-6
ಶ್ಲೋಕ: ದೇವಮಂದಿರದಲ್ಲಿ ನಾ ವಾಸಿಸುವೆ ಚಿರಕಾಲವೆಲ್ಲ.
ಪ್ರಭು ಕುರಿಗಾಹಿಯಾಗಿರಲು ನನಗೆ|
ಕುಂದುಕೊರತೆಗಳೆಲ್ಲಿಯವು ಎನಗೆ?||
ಹಸಿರುಗಾವಲುಗಳಲೆನ್ನ ತಂಗಿಸುವನು|
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು||
ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ|
ಸನ್ಮಾರ್ಗದಲ್ಲಿ ನಡೆಸುವನು ತನ್ನ ನಾಮ ನಿಮಿತ್ತ||
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ|
ನಿನ್ನ ಕುರಿಗೋಲು ಊರುಗೋಲು ಧೈರ್ಯವನ್ನು ತರುವುದೆನಗೆ|
ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ||
ಸಜ್ಜುಗೊಳಿಸಿರುವೆ ನೀ ಶತ್ರುಗಳ ಕಣ್ಣುಂದೆಯೇ ನನಗೌತಣವನು|
ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವ ಪಾನಪಾತ್ರೆಯನು||
ಶುಭಕಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ|
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ||
ಘೋಷಣೆ ಯೆಶಾಯ 33:22
ಅಲ್ಲೆಲೂಯ, ಅಲ್ಲೆಲೂಯ!
ಸರ್ವೇಶ್ವರಸ್ವಾಮಿಯೇ ನಮ್ಮ ನ್ಯಾಯಾಧಿಪತಿ, ಸರ್ವೇಶ್ವರಸ್ವಾಮಿಯೇ ನಮಗೆ ಶಾಸನದಾಯಕ | ಸರ್ವೇಶ್ವರಸ್ವಾಮಿಯೇ ನಮ್ಮ ಅರಸ, ಅವರೇ ನಮ್ಮ ರಾಜ, ಅವರೇ ನಮ್ಮ ಉದ್ಧಾರಕ ||
ಶುಭಸಂದೇಶ: ಸಂತ ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 15:29-37
ಆ ಕಾಲದಲ್ಲಿ ಯೇಸು ಆ ಸ್ಥಳವನ್ನು ಬಿಟ್ಟು, ಗಲಿಲೇಯ ಸರೋವರದ ತೀರದಲ್ಲೇ ನಡೆದು, ಒಂದು ಗುಡ್ಡವನ್ನು ಹತ್ತಿ ಅಲ್ಲಿ ಕುಳಿತುಕೊಂಡರು. ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಕುಂಟರು, ಕುರುಡರು, ಮೂಕರು, ಅಂಗವಿಕಲರು ಮುಂತಾದ ಅನೇಕರನ್ನು ತಮ್ಮೊಡನೆ ಕರೆತಂದು ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಯೇಸು ಅವರನ್ನು ಗುಣಪಡಿಸಿದರು. ಮೂಕರು ಮಾತನಾಡುವುದನ್ನೂ ಅಂಗವಿಕಲರು ಸ್ವಸ್ತರಾಗುವುದನ್ನೂ ಕುಂಟರು ನಡೆಯುವುದನ್ನೂ ಕುರುಡರು ನೋಡುವುದನ್ನೂ ಈ ಜನರು ಕಂಡು ಆಶ್ಚರ್ಯ ಚಕಿತರಾಗಿ ಇಸ್ರಯೇಲಿನ ದೇವರನ್ನು ಕೊಂಡಾಡಿದರು. ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು, " ಈ ಜನಸ್ತೋಮ ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದೆ. ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡು ನನ್ನ ಹೃದಯ ಕರಗುತ್ತದೆ. ಇವರನ್ನು ಹಸಿದ ಹೊಟ್ಟೆಯಲ್ಲಿ ಕಳಿಸಿಬಿಡಲು ನನಗೆ ಇಷ್ಟವಿಲ್ಲ, ದಾರಿಯಲ್ಲಿ ಬಳಲಿ ಬಿದ್ದಾರು, "ಎಂದರು. ಅದಕ್ಕೆ ಶಿಷ್ಯರು, "ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ? "ಎಂದು ಕೇಳಿದರು. "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? "ಎಂದು ಯೇಸು ಕೇಳಿದರು. "ಏಳು ರೊಟ್ಟಿಗಳು ಮತ್ತು ಕೆಲವು ಮೀನುಗಳಿವೆ, "ಎಂದು ಶಿಷ್ಯರು ಉತ್ತರಕೊಟ್ಟರು. ಆಗ ಜನಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಯೇಸು ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನೂ ಮೀನುಗಳನ್ನೂ ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಟ್ಟರು; ಶಿಷ್ಯರು ಜನರಿಗೆ ಬಡಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ತುಂಡುಗಳನ್ನು ಶಿಷ್ಯರು ಏಳು ಕುಕ್ಕೆಗಳ ತುಂಬ ತುಂಬಿಸಿಕೊಂಡರು.
No comments:
Post a Comment