ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.12.24 - “ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ,”

ಮೊದಲನೆಯ ವಾಚನ : ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ವಾಚನ 7:10-14

ಸರ್ವೇಶ್ವರಸ್ವಾಮಿ  ಆಹಾಜನಿಗೆ  ಹೇಳಿದ್ದೇನೆಂದರೆ:  "ನಿನ್ನ  ದೇವರಾದ  ಸರ್ವೇಶ್ವರನಿಂದ  ಒಂದು  ಗುರುತನ್ನು  ಕೇಳಿಕೊ,  ಅದು  ಪಾತಾಳದಷ್ಟು  ಆಳದಲ್ಲೇ  ಇರಲಿ,   ಆಕಾಶದಷ್ಟು  ಎತ್ತರದಲ್ಲೇ  ಇರಲಿ,  ಕೇಳು "ಎಂದರು.  ಅದಕ್ಕೆ  ಆಹಾಜನು  "ಇಲ್ಲ,  ನಾನು  ಗುರುತನ್ನು  ಕೇಳುವುದಿಲ್ಲ.  ಸರ್ವೇಶ್ವರನನ್ನು  ಪರೀಕ್ಷಿಸುವುದಿಲ್ಲ "ಎಂದನು.  ಆಗ  ಯೆಶಾಯನು:

"ದಾವೀದ  ವಂಶಜರೇ,  ಕೇಳಿರಿ,  ಮಾನವರನ್ನು  ಕೆಣಕಿದ್ದು  ಸಾಲದೆಂದು  ದೇವರನ್ನೇ  ಕೆಣಕುತ್ತಿರುವಿರಾ?  ಆಗಲಿ,  ಸರ್ವೇಶ್ವರ  ನಿಮಗೊಂದು  ಗುರುತನ್ನು  ಕೊಡುವರು.  ಇಗೋ, ಕನ್ಯೆಯೊಬ್ಬಳು  ಗರ್ಭತಳೆದು  ಪುತ್ರನೊಬ್ಬನನ್ನು  ಪ್ರಸವಿಸುವಳು.  'ಇಮ್ಮಾನುವೇಲ್'  ಎಂದು  ಆತನಿಗೆ  ಹೆಸರಿಡುವಳು, "ಎಂದರು.

- ಪ್ರಭುವಿನ ವಾಕ್ಯ

ಕೀರ್ತನೆ:            24: 1-4,5-6

ಶ್ಲೋಕ:  ಆಗಮಿಸುತಿಹನಿದೋ  ಮಹಿಮಾವಂತ  ರಾಜಾದಿರಾಜನು  ಇವನೇ  ಪ್ರಭು,  ಯುದ್ಧವೀರನು,  ಶಕ್ತಿಸಮರ್ಥನು,,

1.  ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ|

ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ||
ಕಡಲನು ತಳಪಾಯವನಾಗಿಸಿದವನು ಆತನೇ|
ಜಲರಾಶಿನಡುವೆ ಅದನು ಸ್ಥಿರಗೊಳಿಸಿದವನಾತನೇ||
ಶ್ಲೋಕ

2.  ಪ್ರಭುವಿನ ಶಿಖರವನ್ನು ಏರಬಲ್ಲವನಾರು?|
ಆ ನಿವಾಸದಲಿ ನಿಲ್ಲಲು ಯೋಗ್ಯನಾರು||
ಅಂಥವನಿರಬೇಕು ಶುದ್ದ ಹಸ್ತನು, ಸುಮನಸ್ಕನು|
ಅನಾಚಾರಕೆ ಅಪ್ರಾಮಾಣಿಕತೆಗೆ, ಒಲಿಯನವನು||
ಶ್ಲೋಕ

3.  ಲಭಿಸುವುದಾತನಿಗೆ ಶುಭ ಪ್ರಭುವಿನಿಂದ|
ನೀತಿಯ ಸತ್ಫಲ ರಕ್ಷಕ ದೇವನಿಂದ||
ಇಂಥವರೇ ದೇವರ ದರ್ಶನಾಭ್ಯರ್ಥಿಗಳು|
ಇಂಥವರೇ ಯಕೋಬ ದೇವನ ಭಕ್ತಾದಿಗಳು||
ಶ್ಲೋಕ

ಘೋಷಣೆ : ಅಲ್ಲೆಲೂಯ, ಅಲ್ಲೆಲೂಯ!

ನಮ್ಮ  ಅರಸರೂ,  ನಮಗೆ  ನ್ಯಾಯಾಧಿಪತಿಯೂ  ಆದ  ಓ  ಇಮ್ಮಾನುವೇಲ್ | ನಮ್ಮ  ಕರ್ತರಾದ  ದೇವರೇ,  ನಮ್ಮನ್ನು  ರಕ್ಷಿಸಲು  ಬನ್ನಿ ||

ಅಲ್ಲೆಲೂಯ!

ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1: 26-38

ಎಲಿಜಬೇತಳು ಗರ್ಭಿಣಿಯಾದ  ಆರನೇ  ತಿಂಗಳಲ್ಲಿ,  ದೇವರು ಗಬ್ರಿಯೇಲ್ ದೂತನನ್ನು  ಗಲಿಲೇಯ  ಪ್ರಾಂತ್ಯದ  ನಜರೇತೆಂಬ ಊರಿನಲ್ಲಿದ್ದ  ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು.  ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು  ಆಕೆಯ  ಬಳಿಗೆ  ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ  ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು  ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು  ಆಕೆಗೆ, “ಮರಿಯಾ,  ನೀನು ಅಂಜಬೇಕಾಗಿಲ್ಲ; ದೇವರ  ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ  ಒಬ್ಬ ಮಗನನ್ನು  ಹೆರುವೆ. ಆತನಿಗೆ ‘ಯೇಸು’ ಎಂಬ  ಹೆಸರಿಡಬೇಕು; ಆತನು  ಮಹಾ ಪುರುಷನಾಗುವನು; ಪರಾತ್ಪರ  ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು  ಆತನಿಗೆ ಕೊಡುವರು. ಯಕೋಬನ ವಂಶವನ್ನು  ಆತನು ಚಿರಕಾಲ  ಆಳುವನು; ಆತನ  ರಾಜ್ಯಭಾರಕ್ಕೆ ಅಂತ್ಯವೇ  ಇರದು,” ಎಂದನು.  ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ?  ನನಗೆ  ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ  ನಿನ್ನ ಮೇಲೆ  ಬರುವರು; ಪರಾತ್ಪರ  ದೇವರ  ಶಕ್ತಿ ನಿನ್ನನ್ನು ಆವರಿಸುವುದು;  ಈ ಕಾರಣದಿಂದ,  ನಿನ್ನಲ್ಲಿ ಹುಟ್ಟುವ  ಆ  ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ  ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು  ಕೇಳು: ಆಕೆ  ತನ್ನ  ಮುಪ್ಪಿನಲ್ಲೂ ಒಬ್ಬ  ಮಗನನ್ನು ಹೆರಲಿದ್ದಾಳೆ;  ಬಂಜೆ ಎನಿಸಿಕೊಂಡಿದ್ದ  ಆಕೆ ಈಗ  ಆರು  ತಿಂಗಳ ಗರ್ಭಿಣಿ.  ದೇವರಿಗೆ ಅಸಾಧ್ಯವಾದುದು ಯಾವುದೂ  ಇಲ್ಲ,” ಎಂದನು.  ಆಗ ಮರಿಯಳು, “ಇಗೋ,  ನಾನು ದೇವರ  ದಾಸಿ,  ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು  ಬೀಳ್ಕೊಟ್ಟು ಅದೃಶ್ಯನಾದನು.

- ಪ್ರಭುಕ್ರಿಸ್ತರ ಶುಭಸಂದೇಶ


1 comment: