ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ವಾಚನ 30: 19-21, 23-26
ಜೆರುಸಲೇಮಿನಲ್ಲಿ ವಾಸಿಸುವ ಸಿಯೋನಿನ ಜನರೇ, ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆತೋರಿಸುವರು. ನಿಮ್ಮ ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು. ಅವರು ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ ನಿಮ್ಮ ಬೋಧಕರು ಇನ್ನು ನಿಮಗೆ ಮರೆಯಾಗಿ ಇರುವುದಿಲ್ಲ. ನೀವು ಅವರನ್ನು ಕಣ್ಣಾರೆ ಕಾಣುವಿರಿ.
ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ 'ಇದೇ ಮಾರ್ಗ, ಇದರಲ್ಲೇ ನಡೆಯಿರಿ’ಎಂಬ ಮಾತು ಹಿಂದಿನಿಂದ ನಿಮ್ಮ ಕಿವಿಗೆ ಕೇಳಿಸುವುದು. ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.
ಹೊಲಗೇಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು. ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು.
ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು.
ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ
ಕೀರ್ತನೆ
147: 1-2,3-4,5-6
ಶ್ಲೋಕ:
ಪ್ರಭುವಿನಲ್ಲಿ
ವಿಶ್ವಾಸವಿಡುವವರು
ಉಲ್ಲಾಸಿಸುತ್ತಾರೆ.
1. ನಮ್ಮ ದೇವರನು
ಹೊಗಳಿ ಹಾಡುವುದು ಉಚಿತ|
ಆತನ
ಸ್ತುತಿ ಮನೋಹರ, ಅದು ಬಲು ಸೂಕ್ತ||
ನಿರ್ಮಿಸುತಿಹರು
ಪ್ರಭು ಮರಳಿ ಜೆರುಸಲೇಮನು|
ಬಂದು
ಸೇರಿಸುತಿಹನು ಚದುರಿದ ಇಸ್ರಯೇಲರನು||
ಶ್ಲೋಕ
2. ವಾಸಿಮಾಡುವನು ಮುರಿದ
ಮನಸ್ಸುಳ್ಳವರನು|
ಕಟ್ಟಿ
ಗುಣಪಡಿಸುವನು ಅವರ ಗಾಯಗಳನು||
ನಿಯಮಿಸಿಹನು
ತಾರೆಗಳ ಸಂಖ್ಯೆಯನು|
ಇಟ್ಟಿಹನು
ಪ್ರತಿಯೊಂದಕೂ ಹೆಸರನು||
ಶ್ಲೋಕ
3. ನಮ್ಮ ಪ್ರಭು
ಘನವಂತ, ಪರಾಕ್ರಮಿ|
ಅಪರಿಮಿತವಾದುದು
ಆತನ ಜ್ಞಾನನಿಧಿ||
ಆಧಾರವಾಗಿಹನು
ಪ್ರಭು ದೀನರಿಗೆ|
ತುಳಿದುಬಿಡುವನು
ದುರ್ಜನರನು ನೆಲಕೆ||
ಶ್ಲೋಕ
ಘೋಷಣೆ ಯೆಶಾಯ 33:22
ಅಲ್ಲೆಲೂಯ, ಅಲ್ಲೆಲೂಯ!
ಸರ್ವೇಶ್ವರಸ್ವಾಮಿಯೇ ನಮ್ಮ ನ್ಯಾಯಾಧಿಪತಿ, ಸರ್ವೇಶ್ವರಸ್ವಾಮಿಯೇ ನಮಗೆ ಶಾಸನದಾಯಕ | ಸರ್ವೇಶ್ವರಸ್ವಾಮಿಯೇ ನಮ್ಮ ಅರಸ ಅವರೇ ನಮ್ಮ ಉದ್ಧಾರಕ ||
ಅಲ್ಲೆಲೂಯ!
ಶುಭಸಂದೇಶ
ಸಂತ ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 9:35-10:1,6-8
ಆ ಕಾಲದಲ್ಲಿ ಯೇಸು, ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾ ಮಂದಿರಗಳಲ್ಲಿ ಬೋಧಿಸಿದರು. ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು. ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ, "ಎಂದರು. ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸು ಅವರಿಗೆ ಕೊಟ್ಟ ಆದೇಶವೇನೆಂದರೆ : ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, 'ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ' ಎಂದು ಬೋಧನೆಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿರಿ.
ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ
No comments:
Post a Comment