ಮೊದಲನೆಯ ವಾಚನ: ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ವಾಚನ: 26:1-6
ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಕಾರ. ತೆರೆಯಿರಿ ನಗರ ದ್ವಾರಗಳನ್ನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು. ನಿನ್ನ ನೆಚ್ಚಿದವರಿಗೆ, ಸ್ಥಿರಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ ಶಾಶ್ವತ ಆಶ್ರಯಗಿರಿ. ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ. ತಗ್ಗಿಸುವನಾತ ಎತ್ತರದಲಿ ವಾಸಿಸುವವರನ್ನು; ಕೆಡವಿ ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವ ಉನ್ನತ ನಗರವನು. ಈಡಾಗುವುದದು ಕಾಲ ತುಳಿತಕ್ಕೆ, ದೀನದಲಿತರ ಪಾದ ತುಳಿತಕೆ.
ಕೀರ್ತನೆ 118:1,8-9,19-21,25-27
ಶ್ಲೋಕ: ಪ್ರಭುವಿನ ನಾಮದಲ್ಲಿ ಬರುವವನಿಗೆ ಜಯಮಂಗಳ.
ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ|
ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ||
ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ,|
ರಾಜನಲ್ಲಿ ಭರವಸೆಯಿಡುವುದಕ್ಕಿಂತ ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ||
ತೆರೆಯಿರಿ ಎನಗೆ ನೀತಿದ್ವಾರಗಳನು, ಒಳನುಗ್ಗಿ ಹೊಗಳುವೆನು ಪ್ರಭುವನು|
ಇದುವೇ ದ್ವಾರ ಪ್ರಭುವಿನ ಮಂದಿರಕೆ||
ಇದುವೇ ಪ್ರವೇಶಮಾರ್ಗ ಸಜ್ಜನರಿಗೆ|
ಸದುತ್ತರ ಪಾಲಿಸಿದೆ ಪ್ರಭೂ, ನಿನಗೆ ವಂದನೆ|
ಉದ್ಧಾರಮಾಡಿದೆ, ನಿನಗೆ ಕೃತಜ್ಞತಾ ವಂದನೆ||
ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು, ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು|
ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ||
ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ||
ಪ್ರಭುವೇ ದೇವನು, ನಮ್ಮ ಮೇಲೆ ಜ್ಯೋತಿಯ ಬೆಳಗಿದವನು|
ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ ಹಿಡಿದು ರೆಂಬೆಗಳನು||
ಘೋಷಣೆ ಯೆಶಾಯ 40:9-10
ಅಲ್ಲೆಲೂಯ, ಅಲ್ಲೆಲೂಯ!
ಧ್ವನಿಯೇರಿಸು, ಶುಭವಾರ್ತೆಸಾರಬಲ್ಲ ಜೆರುಸಲೇಮೇ | ಇಗೋ, ಬರುತಿಹನು ಸ್ವಾಮಿಸರ್ವೇಶ್ವರ ಶೂರನಂತೆ ||
ಶುಭಸಂದೇಶ: ಸಂತ ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 7:21,24-27
"ನನ್ನನ್ನು"ಸ್ವಾಮೀ, ಸ್ವಾಮೀ, "ಎನ್ನುವ ಪ್ರತಿಯೊಬ್ಬನೂ ಸ್ವರ್ಗ ಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ನನ್ನ ಈ ಮಾತುಗಳನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ಧಿವಂತನನ್ನು ಹೋಲುತ್ತಾನೆ. ಮಳೆ ಬಂತು ನೆರೆ ಬಂತು ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ಧಿಹೀನನನ್ನು ಹೋಲುತ್ತಾನೆೆ. ಮಳೆ ಬಂತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!
Please send gospel readings.
ReplyDeletePlease send gospel readings
ReplyDeleteDaily Reading not updated
ReplyDelete