ಮೊದಲನೇ ವಾಚನ: 1 ಯೊವಾನ್ನ 2:12-17
ಬರೆಯುತ್ತಿಹೆನು ಪ್ರಿಯ ಮಕ್ಕಳಿರಾ, ಇದನ್ನು ಏಕೆನೆ, ಕ್ರಿಸ್ತನಾಮದ ನಿಮಿತ್ತ ಕ್ಷಮಿಸಲಾಯಿತು ನಿಮ್ಮ ಪಾಪಗಳನ್ನು, ಬರೆಯುತ್ತಿಹೆನು ತಂದೆಗಳಿರಾ, ಇದನ್ನು ಏಕೆನೆ, ಬಲ್ಲವರಾದಿರಿ ಆದಿಯಿಂದಿರುವಾತನನ್ನು. ಬರೆಯುತ್ತಿಹೆನು ಯುವಜನರಿರಾ, ಇದನ್ನು ಏಕೆನೆ, ನೀವು ಜಯಿಸಿದ್ದಾಯಿತು ಆ ಕಡುಗೇಡಿಗನನ್ನು. ಬರೆದಿಹೆನು ಮಕ್ಕಳಿರಾ, ಇದನ್ನು ಏಕೆನೆ, ಬಲ್ಲವರಾದಿರಿ ಪರಮ ಪಿತನನ್ನು. ಬರೆದಿಹೆನು ಶಕ್ತಿಯುತ ಯುವಜನರಿರಾ, ಇದನ್ನು ಏಕೆನೆ, ನೆಲೆಗೊಳಿಸಿರುವಿರಿ ನಿಮ್ಮಲ್ಲಿ ದೈವವಾಕ್ಯವನ್ನು, ಮಾತ್ರವಲ್ಲ, ನೀವು ಜಯಿಸಿದ್ದಾಯಿತು ಆ ಕಡುಗೇಡಿಗನನ್ನು. ಲೋಕಕ್ಕೂ ಲೌಕಿಕವಾದವುಗಳಿಗೂ ನೀವು ಒಲಿಯಬಾರದು. ಈ ಲೋಕವನ್ನು ಒಲಿದರೆ ಪಿತನಲ್ಲಿ ನಿಮಗೆ ಒಲವಿಲ್ಲವೆಂದಾಯಿತು. ಲೋಕಸಂಬಂಧವಾದ ದೈಹಿಕ ದುರಿಚ್ಛೆ, ಕಣ್ಣಿನ ಕಾಮುಕತೆ, ಐಶ್ವರ್ಯದ ಅಹಂಭಾವ - ಇಂಥವು ಪಿತನಿಂದ ಬಂದುದಲ್ಲ. ಲೋಕದಿಂದಲೇ ಬಂದವು. ಲೋಕವೂ ಅದರ ವ್ಯಾಮೋಹವೂ ಗತಿಸಿ ಹೋಗುವುವು. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಚಿರಂಜೀವಿಯಾಗಿ ಬಾಳುವನು.
ಕೀರ್ತನೆ: 96: 7-8, 8-9, 10
ಶ್ಲೋಕ: ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು
ಶುಭಸಂದೇಶ: ಲೂಕ 2:36-40
ಅಶೇರನ ವಂಶಕ್ಕೆ ಸೇರಿದ ಘನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿ ಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು. ಅವಳಿಗೆ ಸುಮಾರು ಎಂಭತ್ತನಾಲ್ಕು ವರ್ಷ ವಯಸ್ಸು. ಮಹಾ ದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು. ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರುನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು. ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನಸಂಪೂರ್ಣರೂ ಆದರು. ಇದಲ್ಲದೆ ದೈವಾನುಗ್ರಹ ಅವರ ಮೇಲಿತ್ತು.
No comments:
Post a Comment