23.12.24 - ಈ ಮಗು ಮುಂದೆ ಎಂಥವನಾಗುವನೋ!

ಪ್ರವಾದಿ ಮಲಾಕಿಯ ಗ್ರಂಥದಿಂದ ಇಂದಿನ ವಾಚನ 3:1-4, 23-24


ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು  ಕೇಳಿ: “ನಾನು  ನನ್ನ ದೂತನನ್ನು  ಮುಂದಾಗಿ ಕಳುಹಿಸುತ್ತೇನೆ.  ನಾನು ಬರಲು  ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು  ಎದುರು ನೋಡುತ್ತಿರುವ ಸರ್ವೇಶ್ವರ  ಇದ್ದಕ್ಕಿದ್ದಂತೆ  ತಮ್ಮ  ಆಲಯಕ್ಕೆ  ಬರುವರು.  ಇಗೋ, ನಿಮಗೆ  ಪ್ರಿಯನಾದ  ದೂತನು ಬರುವನು.  ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.” “ಆದರೆ  ಆತನು ಬರುವಾಗ  ಆತನನ್ನು ಎದುರುಗೊಳ್ಳಬಲ್ಲವನು  ಯಾರು?  ಆತನ ದರ್ಶನವನ್ನು  ಪಡೆದು ಬದುಕಬಲ್ಲವನು ಯಾರು?  ಆತನು ಅಕ್ಕಸಾಲಿಗನ ಕುಲುಮೆಯ  ಬೆಂಕಿಗೂ  ಅಗಸನ  ಚೌಳಿಗೂ  ಸಮಾನನು.  ಬೆಳ್ಳಿಯನ್ನು ಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು.  ಆಗ  ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು. ಪೂರ್ವದಿನಗಳಲ್ಲಿ, ಪುರಾತನ  ಕಾಲದಲ್ಲಿ ಇದ್ದಂತೆ  ಜೂದಾ ಮತ್ತು  ಜೆರುಸಲೇಮಿನ  ಜನರ ಕಾಣಿಕೆಗಳು  ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.  ಇಗೋ, ಸರ್ವೇಶ್ವರಸ್ವಾಮಿಯ ಆಗಮನದ  ಭಯಂಕರ  ಮಹಾದಿನ ಬರುವುದಕ್ಕೆ  ಮುಂಚೆ  ಪ್ರವಾದಿ  ಎಲೀಯನನ್ನು  ನಿಮ್ಮಲ್ಲಿಗೆ ಕಳುಹಿಸುವೆನು.   ನಾನು  ಬಂದು   ಲೋಕವನ್ನು  ಶಪಿಸಿ ನಾಶಗೊಳಿಸದಂತೆ  ಆತನು  ಹೆತ್ತವರ  ಮನಸ್ಸನ್ನು  ಮಕ್ಕಳ  ಕಡೆಗೂ,  ಮಕ್ಕಳ  ಮನಸ್ಸನ್ನು  ಹೆತ್ತವರ  ಕಡೆಗೂ  ಒಲಿಸಿ  ಅವರನ್ನು  ಒಂದಾಗಿಸುವನು.”
ಪ್ರಭುವಿನ ವಾಕ್ಯ

ಕೀರ್ತನೆ: 25:4-5,8-9,10,14;ಲೂಕ 21:28
ಶ್ಲೋಕ:  ನೀವು  ನಿರೀಕ್ಷಿಸುತ್ತಾ  ತಲೆಯೆತ್ತಿ  ನಿಲ್ಲಿರಿ | ಏಕೆಂದರೆ,  ನಿಮ್ಮ  ಉದ್ಧಾರವು  ಸಮೀಪಿಸಿತು ||

1.  ನಿನ್ನ ಮಾರ್ಗವನು ಪ್ರಭೂ ನನಗೆ ತೋರಿಸು|
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು||
ಸನ್ಮಾರ್ಗದಲ್ಲಿ ಮುನ್ನಡೆಸೆನ್ನ  ದೇವಾ, ಮುಕ್ತಿದಾತ|
ಕಲಿಸೆನಗೆ ನಿನಗಾಗಿ ಕಾದಿರುವೆ ಸತತ||
ಶ್ಲೋಕ

2.  ಸತ್ಯಸ್ವರೂಪನು, ದಯಾವಂತನು ಪ್ರಭು|
ದಾರಿತಪ್ಪಿದವರಿಗೆ ಬೋಧಕನು ಪ್ರಭು||
ದೀನರನು ನಡೆಸುವನು ತನ್ನ ವಿಧಿಗನುಸಾರ|
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ||
ಶ್ಲೋಕ

3.  ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ|
ಆತನ ವಿಧಿನಿಬಂಧನೆಗಳ ಪರಿಪಾಲಕರಿಗೆ ಅವುಗಳು ಸುಪ್ರೀತ||
ಪ್ರಭುವಿನ ಮೈತ್ರಿ, ಭಯಭಕ್ತಿಯುಳ್ಳವರಿಗೆ|
ಅಂಥವರಿಗೆ ವ್ಯಕ್ತ, ಆತನ ಒಡಂಬಡಿಕೆ||
ಶ್ಲೋಕ

ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ!
ಓ  ಜನಾಂಗಗಳ  ಅರಸರೇ,  ಮತ್ತು  ಧರ್ಮಸಭೆಯ  ಮೂಲೆಗಲ್ಲೇ,  ಬನ್ನಿ | ಮಣ್ಣಿನಿಂದ  ಉಂಟುಮಾಡಿದ  ಈ  ಮನುಷ್ಯರನ್ನು  ರಕ್ಷಿಸಲು  ಬನ್ನಿ ||
ಅಲ್ಲೆಲೂಯ!

ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:57-66


ದಿನ ತುಂಬಿದಾಗ ಎಲಿಜಬೇತಳು ಗಂಡು ಮಗುವಿಗೆ ಜನ್ಮವಿತ್ತಳು.  ಸರ್ವೇಶ್ವರ  ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು.  ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು.  ಆದರೆ ಮಗುವಿನ ತಾಯಿ, "ಇಲ್ಲ, ಅದು ಕೂಡದು, ಅವನಿಗೆ 'ಯೊವಾನ್ನ' ಎಂಬ ಹೆಸರಿಡಬೇಕು, "ಎಂದಳು.  ಅದಕ್ಕೆ ಅವರು, "ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ, " ಎಂದು ಹೇಳಿ,  "ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ? "ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು.  ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, 'ಇವನ ಹೆಸರು ಯೊವಾನ್ನ'  ಎಂದು ಬರೆದನು.  ಎಲ್ಲರೂ ಬೆರಗಾದರು.  ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಬಿಸಿ ದೇವರನ್ನು ಸ್ತುತಿಸಿದನು.  ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು.  ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು.  ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು,  'ಈ ಮಗು ಮುಂದೆ ಎಂಥವನಾಗುವನೋ! 'ಎಂದುಕೊಂಡರು.  ನಿಶ್ಚಿಯವಾಗಿಯೂ ಸರ್ವೇಶ್ವರನ ಅಭಯಹಸ್ತವು  ಈ  ಮಗುವಿನ  ಮೇಲಿತ್ತು.
ಪ್ರಭುಕ್ರಿಸ್ತರ ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...