ಮೊದಲನೆಯ ವಾಚನ: ಯಶಾಯ 53:10-11
ಸರ್ವೇಶ್ವರನ ಚಿತ್ತದಂತೆ ಜರ್ಜರಿತನಾದ ಹಿಂಸೆಬಾಧೆಗಳಿಂದ ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸಂತಾನವನು, ಪಡೆಯುವನು ಚಿರಜೀವವನು ತಾನೇ ನೆರವೇರಿಸುವನು ಸರ್ವೇಶ್ವರನ ಸಂಕಲ್ಪವನು. ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹು ಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು.
ಕೀರ್ತನೆ 33:4-5, 18-19, 20, 22
ಶ್ಲೋಕ: ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ.
ಸತ್ಯವಾದುದು ಆತನ ಪವಿತ್ರ ವಾಕ್ಯ|
ಸತ್ಯವಾದುದು ಆತನ ಪುನೀತ ಕಾರ್ಯ||
ಸತ್ಯಸಂಧನು, ನ್ಯಾಯಪ್ರಿಯನು ಆತನು|
ಅಚಲ ಪ್ರೀತಿಯಿಂದ ಜಗವನು ತುಂಬಿಹನು||
ಪ್ರಭುವಾದರೋ ಕಟಿಕ್ಷಿಸುವನು ತನಗಂಜಿ ನಡೆದವರನು|
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು||
ತಪ್ಪಿಸವನವನು ಪ್ರಾಣವನು ಮರಣದಿಂದ|
ಉಳಿಸುವನು ಜೀವವನು ಕ್ಷಾಮಡಾಮರದಿಂದ||
ಕಾದಿದೆ ಎನ್ನ ಮನ ಪ್ರಭುವಿಗಾಗಿ|
ಆತನಿಹನು ಎನಗೆ ಗುರಾಣಿಯಾಗಿ||
ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ|
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ||
ಎರಡನೆಯ ವಾಚನ: ಹಿಬ್ರಿರಿಯರಿಗೆ 4:14-16
ಸಹೋದರರೇ, ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ -- ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.
ಶುಭಸಂದೇಶ: ಮಾರ್ಕ 10:35-45
ಆ ಕಾಲದಲ್ಲಿ ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, " ಗುರುವೇ, ನಮ್ಮದೊಂದು ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು, " ಎಂದು ವಿಜ್ಞಾಪಿಸಿಕೊಂಡರು." ನನ್ನಿಂದ ನಿಮಗೇನಾಗಬೇಕು? " ಎಂದು ಯೇಸು ಕೇಳಿದರು. " ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು, " ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು. ಅದಕ್ಕೆ ಯೇಸು, " ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕೂಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ನಾನವನ್ನು ಪಡೆಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ನಾನವನ್ನು ಪಡೆಯಲು ನಿಮ್ಮಿಂದಾದೀತೆ? ಎಂದು ಪ್ರಶ್ನಿಸಿದರು. " ಹೌದು ಆಗುತ್ತದೆ, " ಎಂದು ಅವರು ಮರು ನುಡಿದರು. ಆಗ ಯೇಸು, " ನಾನು ಕುಡಿಯುವ ಪಾತ್ರೆಯಿಂದ ನೀವೂ ಕುಡಿಯುವಿರಿ, ನಾನು ಪಡೆಯಲಿರುವ ಸ್ನಾನವನ್ನು ನೀವೂ ಪಡೆಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧ ಮಾಡಲಾಗಿದೆಯೋ ಅವರಿಗೇ ಸಿಗುವುದು, " ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ ಯೊವಾನ್ನರ ಮೇಲೆ ಸಿಟ್ಟುಗೊಂಡರು. ಆಗ ಯೇಸು ಶಿಷ್ಯರೆಲ್ಲರನ್ನು ತಮ್ಮ ಬಳಿಗೆ ಕರೆದು, " ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೇತನ ಮಾಡುತ್ತಾರೆ, ಇದು ನಿಮಗೆ ಗೊತ್ತು. ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ, ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. ನರಪುತ್ರನು ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೋಡುವುದಕ್ಕೂ ಬಂದಿದ್ದಾನೆ, " ಎಂದು ಬೋಧಿಸಿದರು.
No comments:
Post a Comment