ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

06.10.24 - " ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ."

ಮೊದಲನೆಯ ವಾಚನ: ಆದಿಕಾಂಡ 2:18-24

ಅನಂತರ ದೇವರಾದ ಸರ್ವೇಶ್ವರ, " ಮುನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ, ಅವನಿಗೆ ಸರಿಬೀಳುವ ಸಹಕಾರಿಯನ್ನು ಸೃಷ್ಟಿಮಾಡುವೆನು, " ಎಂದರು. ಎಲ್ಲ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿದ ಅವರು, ಮನುಷ್ಯನು ಇವುಗಳಿಗೆ ಏನೇನು ಹೆಸರಿಡುವನೋ ನೋಡೋಣವೆಂದು ಅವನ ಬಳಿಗೆ ಅವುಗಳನ್ನು ಬರಮಾಡಿದರು. ಆ ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳಿಗೆ ಹೆಸರಾಯಿತು. ಹೀಗೆ ಮನುಷ್ಯನು ಎಲ್ಲ ಸಾಕುಪ್ರಾಣಿಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಹೆಸರಿಟ್ಟನು, ಆದರೆ ಅವನಿಗೆ ಸರಿಬೀಳುವ ಜೊತೆಗಾತಿ ಅವುಗಳಲ್ಲಿ ಕಾಣಿಸಲಿಲ್ಲ. ಹೀಗಿರುವಲ್ಲಿ ದೇವರಾದ ಸರ್ವೇಶ್ವರ ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿದರು. ಅವನು ನಿದ್ರಿಸುತ್ತಿರುವಾಗ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು. ಆ ಎಲುಬನ್ನು ಮಹಿಳೆಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಬರಮಾಡಿದರು. ಅವನು ಆಕೆಯನ್ನು ನೋಡಿ ಹೀಗೆಂದನು: ' ಸರಿ, ನನಗೀಗ ಇವಳು ನನ್ನೆಲುಬಿನ ಎಲುಬು, ನನ್ನೊಡಲಿನ ಒಡಲು ನರನಿಂದ ಉತ್ಪತ್ತಿಯಾದಿವಳನ್ನು ನಾರಿಯೆಂದೇ ಕರೆವರು." ಈ ಕಾರಣ, ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಒಡಲಾಗಿ ಬಾಳುವರು.

ಕೀರ್ತನೆ 128:1-6
ಶ್ಲೋಕ: ಪ್ರಭು ನಿನ್ನನ್ನು ಆಶೀರ್ವದಿಸಲಿ ಇಡೀ ಜೀವಮಾನವೆಲ್ಲ.

ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು|
ಧನ್ಯನು, ಆತನ ಮಾರ್ಗಗಳಲೇ ನಡೆಯುವವನು||
ನಿನ್ನ ಕೈ ಕೆಸರಾದರೆ ಬಾಯಿ ಮೊಸರಾಗುವುದು|
ಧನ್ಯನಾಗುವೆ ನೀನು, ನಿನಗೆ ಶುಭವಾಗುವುದು||

ಇರುವಳು ನಿನ್ನ ಪತ್ನಿ ಮನೆಯಲಿ ಫಲಭರಿತ ದ್ರಾಕ್ಷಲತೆಯಂತೆ|
ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ ಓಲಿವ್ ಸಸಿಗಳಂತೆ||
ಹೊಂದುವನು ಅಂತಹ ಆಶೀರ್ವಾದವನು|
ಪ್ರಭುವಿನಲಿ ಭಯಭಕ್ತಿಯುಳ್ಳವನು||

ಸಿಯೋನಿನಲ್ಲಿರುವ ಪ್ರಭು ನಿನ್ನನ್ನು ಆಶೀರ್ವದಿಸಲಿ|
ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಜೀವಮಾನದಲಿ||
ಮಕ್ಕಳ ಮಕ್ಕಳನು ನೀನು ಕಾಣುವಂತಾಗಲಿ|
ಇಸ್ರಯೇಲಿನ ಮಕ್ಕಳಿಗೆ ಸುಖಶಾಂತಿ ಲಭಿಸಲಿ||

ಎರಡನೆಯ ವಾಚನ: ಹಿಬ್ರಿಯರಿಗೆ  2:9-11

ಸಹೋದರರೇ, ದೇವದೂತರಿಗಿಂತ ಕೊಂಚಕಾಲವೇ ತುಸು ತಗ್ಗಿಸಲಾದ ಒಬ್ಬರನ್ನು, ಅಂದರೆ, ಯೇಸುವನ್ನು ಮಾತ್ರ ನಾವು ಕಾಣುತ್ತೇವೆ. ಇವರು ಯಾತನಾಮರಣವನ್ನು ಅನುಭವಿಸಿದ್ದರಿಂದ ಘನಗೌರವವನ್ನೂ ಸಿರಿಮಹಿಮೆಯನ್ನೂ ಮುಕುಟವಾಗಿ ಪಡೆದುದನ್ನು ನಾವು ಕಾಣುತ್ತೇವೆ. ದೈವಾನುಗ್ರಹದಿಂದ ಎಲ್ಲಾ ಮಾನವರ ಕಲ್ಯಾಣಕ್ಕಾಗಿ ಅವರು ಸಾವನ್ನು ಅನುಭವಿಸಬೇಕಾಗಿತ್ತು. ಸಮಸ್ತವನ್ನೂ ಸೃಷ್ಟಿಸಿ ಪರಿಪಾಲಿಸಿಕೊಂಡುಬರುವ ದೇವರು ತಮ್ಮ ಮಹಿಮೆಯಲ್ಲಿ ಪಾಲುಗೊಳ್ಳಲು ಮಕ್ಕಳನೇಕರನ್ನು ಕರೆತರುವಂತೆ ಉದ್ಧಾರ ಪ್ರವರ್ತಕರಾದ ಯೇಸುವನ್ನು ಹಿಂಸೆಬಾಧೆಗಳ ಮೂಲಕ ಪರಿಪೂರ್ಣವಾಗಿಸಿದ್ದು ಯುಕ್ತವೇ ಸರಿ. ಪವಿತ್ರಗೊಳಿಸುವವನಿಗೂ ಪವಿತ್ರರಾಗುವವರಿಗೂ ಒಬ್ಬನೇ ತಂದೆ. ಈ ಕಾರಣ, ಪವಿತ್ರಗೊಳಿಸುವ ಯೇಸು, ಪವಿತ್ರರಾಗುವವರನ್ನು ' ಸಹೋದರರು ' ಎಂದು ಕರೆಯಲು ನಾಚಿಕೆಪಡಲಿಲ್ಲ.

ಶುಭಸಂದೇಶ ವಾಚನ: ಮಾರ್ಕ 10:2-16

ಆ ಕಾಲದಲ್ಲಿ ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, " ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೇ? " ಎಂದು ಕೇಳಿದರು. ಯೇಸು, " ಈ ವಿಷಯವಾಗಿ ಮೋಶೆ ನಿಮಗೆ ಏನೆಂದು ವಿಧಿಸಿದ್ದಾನೆ? " ಎಂದು ಅವರನ್ನೇ ಪುನಃ ಪ್ರಶ್ನಿಸಿದರು. ಅದಕ್ಕೆ ಅವರು, ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿ ಇತ್ತಿದ್ದಾನೆ, " ಎಂದರು. ಆಗ ಯೇಸು, " ನಿಮ್ಮ ಹೃದಯ ಕಲ್ಲಾಗಿದ್ದುದರಿಂದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು. ಆದರೆ ಸೃಷ್ಟಿಯ ಆರಂಭದಿಂದಲೇ ' ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ. ಈ ಕಾರಣದಿಂದ ಗಂಡನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು ' ಎನ್ನುತ್ತದೆ ಪವಿತ್ರಗ್ರಂಥ. ಹೀಗಿರುವಲ್ಲಿ ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ. ಆದುದರಿಂದ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ, " ಎಂದರು. ಅಂದು, ಮನೆಗೆ ಹೋದ ಬಳಿಕ ಶಿಷ್ಯರು, ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು. ಅದಕ್ಕೆ ಅವರು, " ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹ ಬಗೆದು ವ್ಯಭಿಚಾರಿಯಾಗುತ್ತಾನೆ. ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ, " ಎಂದರು. ಮತ್ತೆ ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುಸ್ವಾಮಿಯ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು. ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, " ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ, ದೇವರ ಸಾಮ್ರಾಜ್ಯ ಇಂಥವರದೇ. ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ, " ಎಂದರು. ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನ್ನಿರಿಸಿ ಹರಸಿದರು.

No comments:

Post a Comment