ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.11.24 - "ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು"

ಮೊದಲನೆಯ ವಾಚನ: ಧರ್ಮೋಪದೇಶಕಾಂಡ 6:2-6

ಮೋಶೆಯು ಜನರಿಗೆ ಇಂತೆಂದನು: ನೀವು ಹಾಗು ನಿಮ್ಮ ಪುತ್ರಪೌತ್ರೌದಿ ಸಂತತಿಯವರು ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿರಬೇಕು, ನಾನು ಈಗ ಬೋಧಿಸುವ ಅವರ ವಿಧಿನಿರ್ಣಯಗಳನ್ನೆಲ್ಲಾ ಅನುಸರಿಸಬೇಕು, ಆಗ ನೀವು ದಿರ್ಘಕಾಲ ಬಾಳುವಿರಿ. ಅದಕ್ಕಾಗಿಯೇ ಇವುಗಳನ್ನು ಆಜ್ಞಾಪಿಸಿದ್ದಾರೆ. ಆದುದರಿಂದ ಇಸ್ರಾಯೇಲರೇ, ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ವಾಗ್ದಾನ ಮಾಡಿದ ಪ್ರಕಾರ, ಹಾಲೂ ಜೇನೂ ಹರಿಯುವ ಆ ನಾಡಿನಲ್ಲಿ ನಿಮಗೆ ಶುಭವುಂಟಾಗುವಂತೆ, ನೀವು ಬಹಳವಾಗಿ ಹೆಚ್ಚಿ ಅಭಿವೃದ್ಧಿಯಾಗುವಂತೆ ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಿರಿ. ಇಸ್ರಯೇಲ್ ಜನಾಂಗವೇ ಕೇಳು: ನಿನ್ನ ದೇವರಾದ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು. ನಿನ್ನ ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು. ಈ ದಿನ ನಾನು ನಿನಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿ ನಾಟಿರಲಿ.

ಕೀರ್ತನೆ 138:1-3, 6, 8
ಶ್ಲೋಕ: ಪ್ರಭೂ, ಶಾಶ್ವತವಾಗಿಸು ನಿನ್ನ ಅಚಲ ಪ್ರೀತಿಯನು.


ಹೃದಯಪೂರ್ವಕ ವಂದನೆ ಪ್ರಭೂ ನಿನಗೆ|
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ|
ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ||

ನಿನ್ನ ಪ್ರೀತಿ ಸತ್ಯತೆಗಳ, ನಾಮ ನುಡಿಗಳ ಮಹತ್ವದ ಪ್ರಯುಕ್ತ|
ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು|
ಅಧಿಕಮಾಡಿದೆ ನೀನು ನನಾತ್ಮಶಕ್ತಿಯನು||

ಉನ್ನತವಾದರೂ ಗಮನಿಸುವನು ಪ್ರಭು ದೀನರನು|
ದೂರದಿಂದಲೇ ಗುರುತಿಸುವನಾತನು ಗರ್ವಿಷ್ಠರನು||
ಶಾಶ್ವತವಾಗಿಸು ನಿನ್ನ ಅಚಲ ಪ್ರೀತಿಯನು|
ಮರೆತುಬಿಡಬೇಡ ನಿನ್ನಯ ಕೈಕೃತಿಯನು||

ಎರಡನೆಯ ವಾಚನ: ಹಿಬ್ರಿಯರಿಗೆ 7:23-28


ಲೇವಿಯರ ಯಾಜಕಸೇವೆಯನ್ನು ಮರಣವು ಮೊಟಕುಗೊಳಿಸುತ್ತಿದ್ದುದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು. ಯೇಸುವಾದರೋ ಚಿರಂಜೀವಿಯಾದುದರಿಂದ ಅವರ ಯಾಜಕತ್ವವು ಶಾಶ್ವತವಾಗಿ ಉಳಿಯುವಂಥಾದ್ದು. ಆದಕಾರಣ, ತಮ್ಮ ಮುಖಾಂತರ ದೇವರನ್ನು ಅರಸುವವರನ್ನು ಯೇಸು ಸಂಪೂರ್ಣವಾಗಿ ಉದ್ಧಾರಮಾಡಬಲ್ಲರು. ಅಂಥವರ ಪರವಾಗಿ ವಿಜ್ಞಾಪಿಸಲೆಂದೇ ಯೇಸು ಸದಾ ಬದುಕಿರುವರು. ನಮಗೆ ಬೇಕಾಗಿದ್ದ ಪ್ರಧಾನ ಯಾಜಕರು ಯೇಸುವೇ. ಇವರು ಪರಿಶುದ್ದರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರು, ಗಗನಮಂಡಲಗಳಿಗಿಂತಲೂ ಉನ್ನತದಲ್ಲಿರುವವರು. ಇವರು ಮಿಕ್ಕ ಪ್ರಧಾನ ಯಾಜಕರಂತೆ ಮೊದಲು ಸ್ವಂತ ಪಾಪಗಳಿಗಾಗಿಯೂ ಅನಂತರ ಜನರ ಪಾಪಗಳಿಗಾಗಿಯೂ ದಿನಂಪ್ರತಿ ಪರಿಹಾರಬಲಿಯನ್ನು ಒಪ್ಪಿಸಬೇಕಾಗಿಲ್ಲ. ಏಕೆಂದರೆ, ಜನರ ಪಾಪಪರಿಹಾರಕ್ಕಾಗಿ ಒಮ್ಮೆಗೇ ಶ್ವಾಶ್ವತವಾಗಿ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಂಡರು. ಧರ್ಮಶಾಸ್ತ್ರ ನೇಮಿಸಿರುವ ಪ್ರಧಾನ ಯಾಜಕರು ಕುಂದುಕೊರತೆಯುಳ್ಳ ಮಾನವರು. ಆದರೆ, ಧರ್ಮಶಾಸ್ತ್ರದ ತರುವಾಯ ಬಂದ ಹಾಗೂ ಶಪಥದಿಂದ ಕೂಡಿದ ದೈವವಾಕ್ಯವು ಸದಾ ಸರ್ವಸಂಪೂರ್ಣರಾದ ಪುತ್ರನನ್ನೇ ಪ್ರಧಾನ ಯಾಜಕರನ್ನಾಗಿ ನೇಮಿಸುತ್ತದೆ.

ಶುಭಸಂದೇಶ: ಮಾರ್ಕ 12:28-34


ಆ ಕಾಲದಲ್ಲಿ ಪುನರುತ್ಥಾನದ ಬಗ್ಗೆ ತರ್ಕವನ್ನು ಕೇಳುತ್ತಿದ್ದ ಧರ್ಮಶಾಸ್ತ್ರಿಯೊಬ್ಬನು, ಯೇಸು ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು," ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು? " ಎಂದು ಕೇಳಿದನು. ಯೇಸು ಅವನಿಗೆ, "ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ, ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದಿಲ್ಲ, " ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, " ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ, ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದು. ಇವು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದವು, " ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, "ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ, " ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ

No comments:

Post a Comment