24.10.24 - “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ.

ಮೊದಲನೇ ವಾಚನ: ಎಫೆಸಿಯರಿಗೆ  3:14-21 

ಸಹೋದರರೇ, ಈ ಕಾರಣ ನಾನು ಮೊಣಕಾಲೂರಿ ಪಿತನಲ್ಲಿ ಪ್ರಾರ್ಥಿಸುತ್ತೇನೆ:  ಸ್ವರ್ಗಲೋಕದಲ್ಲೂ ಭೂಲೋಕದಲ್ಲೂ ಪ್ರತಿ ಕುಟುಂಬವು ತನ್ನ ಹೆಸರನ್ನು ಪಡೆದಿರುವುದು ಅವರಿಂದಲೇ.  ಅವರು ತಮ್ಮ ಮಹಿಮೆಯ ಸಂಪನ್ಮೂಲಗಳಿಂದ ಪವಿತ್ರಾತ್ಮ ಅವರ ಮುಖಾಂತರ ನಿಮ್ಮ ಅಂತರಂಗವನ್ನು ಬಲಗೊಳಿಸಲಿ;  ನಿಮ್ಮ ವಿಶ್ವಾಸದ ಫಲವಾಗಿ, ಯೇಸುಕ್ರಿಸ್ತರು ನಿಮ್ಮ ಹೃದಯಗಳಲ್ಲಿ ಸದಾ ವಾಸಿಸಲಿ ಮತ್ತು ನಿಮ್ಮ ಜೀವನವು ಪ್ರೀತಿಯಲ್ಲಿ ಬೇರೂರಿ ಸದೃಢವಾಗಿ ನಿಲ್ಲಲಿ.  ಹೀಗೆ ದೇವಜನರೆಲ್ಲರೊಡನೆ, ಕ್ರಿಸ್ತಯೇಸುವಿನ ಅಗಾಧ ಪ್ರೀತಿಯ ಉದ್ದ-ಅಗಲ, ಆಳ-ಎತ್ತರ ಎಷ್ಟೆಂಬುದನ್ನು ನೀವು ಗ್ರಹಿಸಿಕೊಳ್ಳುವಂತಾಗಲಿ.  ಹೌದು, ಜ್ಞಾನವನ್ನು ಮೀರಿದ ಈ ಪ್ರೀತಿಯನ್ನು ಅರಿತುಕೊಳ್ಳಲು ಆಸಕ್ತರಾಗಬೇಕು, ದೇವರ ಪರಿಪೂರ್ಣತೆಯಿಂದ ತುಂಬಿದವರಾಗಬೇಕು ಎಂದು ನಾನು ಬೇಡಿಕೊಳ್ಳುತ್ತೇನೆ. ನಮ್ಮಲ್ಲಿ ಕಾರ್ಯಸಾಧಿಸುವ ಹಾಗೂ ನಮ್ಮ ಆಶೆ-ಆಕಾಂಕ್ಷೆಗಿಂತಲೂ ಬೇಡಿಕೆ-ಕೋರಿಕೆಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರು. ಅವರಿಗೆ ಧರ್ಮಸಭೆಯಲ್ಲೂ ಕ್ರಿಸ್ತಯೇಸುವಿನಲ್ಲೂ ಯುಗಯುಗಾಂತರಕ್ಕೂ ತಲತಲಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್!

ಕೀರ್ತನೆ: 33:1-2, 4-5, 11-12, 18-19 

ಶ್ಲೋಕ: ಪ್ರಭು ಅಚಲ ಪ್ರೀತಿಯಿಂದ ಜಗವನು ತುಂಬಿಹನು 

ಶುಭಸಂದೇಶ: ಲೂಕ 12:49-53 

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ.  ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ.  ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ.  ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು.  ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು. 

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...