ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.01.24

ಮೊದಲನೇ ವಾಚನ: ಯೆಶಾಯ 55: 1-11

ಎಲೈ ಬಾಯಾರಿದ ಜನರೇ, ನೀರಿನ ಬಳಿಗೆ ಬನ್ನಿ ಹಣವಿಲ್ಲದವರೇ ಬನ್ನಿ, ಅನ್ನವನ್ನು ತೆಗೆದು ಕೊಂಡು ತಿನ್ನಿ. ಹಾಲನು, ದ್ರಾಕ್ಷಾರಸವನು ಕ್ರಯವಿಲ್ಲದೆ ಕೊಂಡುಕೊಳ್ಳಿ. ಆಹಾರವಲ್ಲದ್ದಕ್ಕೆ ಹಣವನು ವ್ಯಯಮಾಡುವುದೇಕೆ? ತೃಪ್ತಿ ತರದ ಪದಾರ್ಥಕ್ಕೆ ನಿಮ್ಮ ದುಡಿತದ ವೆಚ್ಚವೇಕೆ? ಕಿವಿಗೊಡಿ ನನಗೆ, ಒಳಿತನ್ನು ತಿಂದು ಆನಂದಪಡಿ ಆ ಮೃಷ್ಟಾನ್ನವನುಂಡು. ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ. ನೇಮಿಸಿರುವೆ ಆತನನು ಜನಗಳಿಗೆ ಸಾಕ್ಷಿಯನ್ನಾಗಿ ಜನಾಂಗಗಳಿಗೆ ನಾಯಕನನ್ನಾಗಿ, ಅಧಿಪತಿಯನ್ನಾಗಿ. ಎಲೈ ಇಸ್ರಯೇಲೇ, ನಿನ್ನ ದೇವರಾದ ಸರ್ವೇಶ್ವರನಿಗೋಸ್ಕರ ನಿನ್ನ ಮಹಿಮೆಪಡಿಸಿದ ಇಸ್ರಯೇಲಿನ ಪರಮಪಾವನನಿಗೋಸ್ಕರ ನೀ ಕರೆಗೊಡುವೆ ನಿನಗೆ ಗೊತ್ತಿಲ್ಲದ ಜನಾಂಗಕೆ. ಆಗ ಅಪರಿಚಿತರೂ ಓಡಿಬರುವರು ನಿನ್ನಾಶ್ರಯಕೆ. ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ. ಬಿಟ್ಟುಬಿಡಲಿ ದುಷ್ಟನು ತನ್ನ ದುರ್ಮಾರ್ಗವನು ತೊರೆದುಬಿಡಲಿ ದುರುಳನು ದುರಾಲೋಚನೆಗಳನು. ಹಿಂದಿರುಗಿ ಬರಲಿ ಸರ್ವೇಶ್ವರನ ಬಳಿಗೆ ಕರುಣೆ ತೋರುವನು ಆತನು ಅವನಿಗೆ. ಆಶ್ರಯಪಡೆಯಲಿ ಅವನು ನಮ್ಮ ದೇವರಿಂದ ಕ್ಷಮಿಸುವನಾತನು ಮಹಾಕೃಪೆಯಿಂದ. “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಂಥಲ್ಲ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಂಥಲ್ಲ” ಎಂದಿಹನು ಸರ್ವೇಶ್ವರ. “ಎಷ್ಟೋ ಉನ್ನತ ಆಕಾಶವು ಭೂಮಿಯಿಂದ ಅಷ್ಟೂ ಉನ್ನತ ನನ್ನ ಮಾರ್ಗ ನಿಮ್ಮ ಮಾರ್ಗಗಳಿಗಿಂತ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ. ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಕೀರ್ತನೆ: 12:2-6, v.3
ಶ್ಲೋಕ: ಉದ್ಧರಿಸುವಾ ಒರತೆಗಳಿಂದ ಸೇದುವಿರಿ ನೀರನು ಹರುಷದಿಂದ. 

ಎರಡನೇ ವಾಚನ: 1 ಯೊವಾನ್ನ 5:1-9

ಪ್ರಿಯರೇ, ಯೇಸುವೇ ‘ಕ್ರಿಸ್ತ’ ಎಂದು ವಿಶ್ವಾಸಿಸುವ ಪ್ರತಿಯೊಬ್ಬನೂ ದೇವರ ಮಗು. ತಂದೆಯನ್ನು ಪ್ರೀತಿಸುವವನು ಆತನ ಮಗುವನ್ನೂ ಪ್ರೀತಿಸುತ್ತಾನೆ. ದೇವರನ್ನು ಪ್ರೀತಿಸಿ, ಅವರ ಆಜ್ಞೆಗಳನ್ನು ಪಾಲಿಸುವುದರಿಂದ ನಾವು ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದು ನಿಶ್ಚಯ ಆಗುತ್ತದೆ. ದೇವರನ್ನು ಪ್ರೀತಿಸುವುದು ಎಂದರೆ ಅವರು ಕೊಟ್ಟ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ. ಅವರ ಆಜ್ಞೆಗಳು ನಮಗೆ ಹೊರೆಯೇನೂ ಅಲ್ಲ. ದೇವರಿಂದ ಜನಿಸಿದ ಪ್ರತಿ ಒಬ್ಬನೂ ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದು ನಮ್ಮ ವಿಶ್ವಾಸವೇ. ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಜಲದಿಂದ ಮಾತ್ರವಲ್ಲ, ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಇದಕ್ಕೆ ಪವಿತ್ರಾತ್ಮ ಸಾಕ್ಷಿ. ಏಕೆಂದರೆ, ಪವಿತ್ರಾತ್ಮ ಸತ್ಯಸ್ವರೂಪಿ. ಹೀಗೆ ಪವಿತ್ರಾತ್ಮ, ಜಲ ಮತ್ತು ರಕ್ತವೆಂಬ ಮೂರು ಸಾಕ್ಷಿಗಳು ಇವೆ. ಈ ಮೂರೂ ಕೊಡುವ ಸಾಕ್ಷ್ಯ ಒಂದೇ. ಮನುಷ್ಯರು ಕೊಡುವ ಸಾಕ್ಷ್ಯವನ್ನು ನಾವು ಅಂಗೀಕರಿಸುತ್ತೇವೆ. ದೇವರು ನೀಡುವ ಸಾಕ್ಷ್ಯ ಅದಕ್ಕಿಂತಲೂ ಶ್ರೇಷ್ಠವಾದುದು. ದೇವರ ಈ ಸಾಕ್ಷ್ಯ ಅವರ ಪುತ್ರನನ್ನು ಕುರಿತದ್ದಾಗಿದೆ.

ಶುಭಸಂದೇಶ: ಮಾರ್ಕ: 1: 7-11

ಆ ಕಾಲದಲ್ಲಿ ಯೊವಾನ್ನನು ಜನರಿಗೆ ಭೋಧಿಸುತ್ತಾ “ನನ್ನಾನಂತರ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ; ಬಗ್ಗಿ ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಟ್ಟೆನು; ಅವರಾದರೋ ನಿಮಗೆ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಕೊಡುವರು,” ಎಂದು ಘೋಷಿಸುತ್ತಿದ್ದನು. ಹೀಗಿರುವಲ್ಲಿ, ಒಂದು ದಿನ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಿಂದ ಬಂದು, ಜೋರ್ಡನ್ ನದಿಯಲ್ಲಿ ಯೊವಾನ್ನನಿಂದ ದೀಕ್ಷಾಸ್ನಾನ ಪಡೆದುಕೊಂಡರು ನೀರಿನಿಂದ ಅವರು ಮೇಲಕ್ಕೆ ಬರುತ್ತಿರುವಾಗಲೇ ಆಕಾಶವು ತೆರೆದು, ಪವಿತ್ರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿಯುತ್ತಿರುವುದನ್ನು ಕಂಡರು ಇದಲ್ಲದೆ, “ನೀನೇ ನನ್ನ ಪುತ್ರ, ನನಗೆ ಪರಮ ಪ್ರಿಯನು; ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎನ್ನುವ ದೈವವಾಣಿ ಕೇಳಿಸಿತು.

No comments:

Post a Comment