ಮೊದಲನೇ ವಾಚನ: 1 ಸಮುವೇಲ 1:9-20
ಶಿಲೋವಿನಲ್ಲಿ ಅವರು ಅನ್ನ ಪಾನಗಳನ್ನು ತೆಗೆದುಕೊಂಡ ಮೇಲೆ ಹನ್ನಳು ಎದ್ದು ಸರ್ವೇಶ್ವರನ ಮಂದಿರಕ್ಕೆ ಬಂದಳು. ಯಾಜಕ ಏಲಿಯನು ಆ ಮಂದಿರದ ದ್ವಾರದ ನಿಲುವು ಪಟ್ಟಿಗಳ ಬಳಿ ಬಂದು ಪೀಠದ ಮೇಲೆ ಕುಳಿತ್ತಿದ್ದನು. ಹನ್ನಳು ಬಹು ದುಃಖದಿಂದ ಕಣ್ಣೀರಿಡುತ್ತಾ ಸರ್ವೇಶ್ವರನಲ್ಲಿ ಹೀಗೆಂದು ಪ್ರಾರ್ಥಿಸಿದಳು: "ಸರ್ವಶಕ್ತರಾದ ಸರ್ವೇಶ್ವರ, ನಿಮ್ಮ ದಾಸಿಯಾದ ನನ್ನ ದುಃಖವನ್ನು ನೀಗಿಸಿರಿ; ನನ್ನನ್ನು ಪರಾಂಬರಿಸಿರಿ; ನನ್ನನ್ನು ತಿರಸ್ಕರಿಸದೆ ಕನಿಕರ ಪಟ್ಟು ನನಗೊಬ್ಬ ಮಗನನ್ನು ಅನುಗ್ರಹಿಸಿರಿ. ಅವನನ್ನು ಅಮರಣಾಂತರ ನಿಮಗೆ ಸರ್ಮಪಿಸುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಬರಗೊಡುವುದಿಲ್ಲ ಎಂದು ಹರಕೆ ಮಾಡುತ್ತೇನೆ." ಹನ್ನಳು ಬಹಳ ಹೊತ್ತಿನವರೆಗೆ ಸರ್ವೇಶ್ವರನ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾ ಇದ್ದಳು. ಏಲಿ ಆಕೆಯ ಬಾಯನ್ನು ಗಮನಿಸಿದನು. ಆಕೆ ಹೃದಯಾಂತರಾಳದಿಂದ ಪ್ರಾರ್ಥಿಸುತ್ತಾ ಇದ್ದಳು; ತುಟಿಗಳು ಅಲುಗಾಡುತ್ತಿದ್ದವು. ಶಬ್ಧ ಮಾತ್ರ ಕೇಳಿಸುತ್ತಿರಲಿಲ್ಲ. ಆದುದ್ದರಿಂದ ಇವಳು ಕುಡಿದಿರಬೇಕೆಂದು ತಿಳಿದು, "ನಿನ್ನ ಕುಡಿತದ ಅಮಲು ಇನ್ನು ಇಳಿಯಲಿಲ್ಲವೇ? ದ್ರಾಕ್ಷಾರಸದ ನಿಶೆ ನಿನ್ನನ್ನು ಬಿಟ್ಟು ಹೋಗಲಿ". ಎಂದನು. ಆಕೆ, "ಇಲ್ಲ ಸ್ವಾಮಿ, ನಾನು ಕುಡಿದಿಲ್ಲ, ನಾನು ಬಹಳ ದುಃಖಪೀಡಿತಳು; ದ್ರಾಕ್ಷರಸವನ್ನಾಗಲಿ ಬೇರೆ ಯಾವ ಮದ್ಯಯವನ್ನಾಗಲಿ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಸರ್ವೇಶ್ವರನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ. ನಿಮ್ಮ ದಾಸಿಯಾದ ನನ್ನ ಅಯೋಗ್ಯಳೆಂದು ನೆನೆಸಬೇಡಿ. ಈವರೆಗೂ ನನ್ನ ಅತಿಯಾದ ಚಿಂತೆಯನ್ನು ವ್ಯಥೆಯನ್ನು ಅರಿಕೆ ಮಾಡುಕೊಳ್ಳುತ್ತಿದ್ದೆ," ಎಂದು ಹೇಳಿದಳು. ಆಗ ಏಲಿ ಆಕೆಗೆ, "ಸಮಾಧಾನದಿಂದ ಹೋಗು. ಇಸ್ರಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ಈಡೇರಿಸಲಿ," ಎಂದನು. "ನಿಮ್ಮ ದಾಸಿಯಾದ ನನ್ನ ಮೇಲೆ ಕರುಣೆ ಇರಲಿ," ಎಂದು ಹೇಳಿ ಆಕೆ ಅಲ್ಲಿಂದ ಹೊರಟು ಹೋಗಿ ಊಟ ಮಾಡಿದಳು. ಬಳಿಕ ಅವಳ ದುಃಖ ದೂರವಾಯಿತು. ಮಾರನೆಯ ದಿನ ಬೆಳಿಗ್ಗೆ ಅವರೆಲ್ಲರು ಎದ್ದು ಸರ್ವೇಶ್ವರನನ್ನು ಆರಾಧಿಸಿ ರಾಮಾದಲ್ಲಿದ್ದ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಾಳನ್ನು ಕೂಡಲು ಆಕೆ ಸರ್ವೇಶ್ವರನ ಅನುಗ್ರಹದಿಂದ ಗರ್ಭಿಣಿಯಾದಳು. ದಿನ ತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು, "ನಾನು ಇವನನ್ನು ಸರ್ವೇಶ್ವರನಿಂದ ಬೇಡಿ ಪಡೆದೆ," ಎಂದು ಹೇಳಿ ಆ ಮಗುವಿಗೆ ’ಸಮುವೇಲ’ ಎಂದು ಹೆಸರಿಟ್ಟಳು.
ಕೀರ್ತನೆ: 1 ಸಮುವೇಲ 2:1, 4-5, 6-7, 8-10
ಶ್ಲೋಕ: ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ.
ಶುಭಸಂದೆಷ: ಮಾರ್ಕ: 1: 21-28
ಯೇಸುಸ್ವಾಮಿಯು ಶಿಷ್ಯರೊಂದಿಗೆ ಕಫೆರ್ನವುಮ್ ಎಂಬ ಊರನ್ನು ಸೇರಿದರು. ಸಬ್ಬತ್ ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಬಂದು ಹೀಗೆ ಬೋಧಿಸತೊಡಗಿದರು. ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು. ಏಕೆಂದರೆ ಯೇಸು, ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು. ಅವನು, "ನಜ಼ರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಪೂಜ್ಯರು ನೀವು," ಎಂದು ಕಿರುಚಿದನು. ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, "ಸುಮ್ಮನಿರು, ಇವನನ್ನು ಬಿಟ್ಟು ತೊಲಗು," ಎಂದು ಆ ದೆವ್ವಕ್ಕೆ ಆಜ್ಞಾಪಿಸಿದರು. ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ ಗಟ್ಟಿಯಾಗಿ ಚೀರುತ್ತಾ ಅವನನ್ನು ಬಿಟ್ಟು ಹೋಯಿತು. ಜನರೆಲ್ಲರು ಆಶ್ವರ್ಯಚಕಿತರಾದರು. "ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ’ ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ!" ಎಂದು ಪರಸ್ಪರ ಮಾತಾಡಿಕೊಂಡರು. ಕೂಡಲೇ ಗಲಿಲೇಯ ಪ್ರಾಂತ್ಯದ ಎಲ್ಲೆಡೆಗೂ ಯೇಸುವಿನ ಸಮಾಚಾರ ಹಬ್ಬಿ ಹರಡಿತು.
Please send today gospel readings.
ReplyDeletePlease send today gospel readings
ReplyDelete