ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

04.12.23 - " ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. - ಸಂತ ಫ್ರಾನ್ಸಿಸ್ ಕ್ಸೇವಿಯರ್ (ಧರ್ಮಗುರು ಹಾಗೂ ಭಾರತದ ಪಾಲಕರು) ಮಹೋತ್ಸವ

ಮೊದಲನೇ ವಾಚನ: ಪ್ರವಾದಿ  ಯೆರೆಮೀಯನ  ಗ್ರಂಥದಿಂದ  ಇಂದಿನ  ಮೊದಲನೆಯ  ವಾಚನ 1:4


ಸರ್ವೇಶ್ವರಸ್ವಾಮಿ  ಈ  ವಾಣಿಯನ್ನು  ನನಗೆ  ದಯಪಾಲಿಸಿದರು:  "ನಿನ್ನನ್ನು  ತಾಯಿಯ  ಗರ್ಭದಲ್ಲಿ  ರೂಪಿಸುವುದಕ್ಕೆ  ಮುಂಚೆಯೇ  ನಿನ್ನನ್ನು  ನಾನು  ತಿಳಿದಿದ್ದೆ ; ನೀನು  ಉದರದಿಂದ  ಹೊರ  ಬರುವುದಕ್ಕೆ  ಮೊದಲೇ  ನಿನ್ನನ್ನು  ಪವಿತ್ರೀಕರಿಸಿದ್ದೆ ;  ನಿನ್ನನ್ನು  ರಾಷ್ಟ್ರಗಳಿಗೆ  ಪ್ರವಾದಿಯನ್ನಾಗಿ  ನೇಮಿಸಿದ್ದೇನೆ." ಅದಕ್ಕೆ  ನಾನು,  "ಅಯ್ಯೋ,  ಸ್ವಾಮಿ  ಸರ್ವೇಶ್ವರಾ,  ನಾನು  ಮಾತುಬಲ್ಲವನಲ್ಲ,  ಇನ್ನೂ  ತರುಣ, " ಎಂದು  ಬಿನ್ನವಿಸಿದೆ. ಆಗ  ಸರ್ವೇಶ್ವರ  ನನಗೆ,  "ನಾನೊಬ್ಬ  ತರುಣ  ಎನ್ನಬೇಡ ; ಯಾರ  ಬಳಿಗೆ  ನಿನ್ನನ್ನು  ಕಳಿಸುತ್ತೇನೋ,  ಅವರೆಲ್ಲರ  ಬಳಿಗೆ  ನೀನು  ಹೋಗಲೇಬೇಕು ;  ಅವರಿಗೆ  ಅಂಜಬೇಡ ; ನಿನ್ನನ್ನು  ಕಾಪಾಡಲು  ನಾನೇ  ನಿನ್ನೊಂದಿಗೆ  ಇರುತ್ತೇನೆ ;  ಇದು  ಸರ್ವೇಶ್ವರನಾದ  ನನ್ನ  ಮಾತು, "ಎಂದರು.

- ಪ್ರಭುವಿನ  ವಾಕ್ಯ

ಕೀರ್ತನೆ:   

ಶ್ಲೋಕ:  ನೀವು  ವಿಶ್ವದ  ಎಲ್ಲೆಡೆಗಳಿಗೂ  ಹೋಗಿ,  ಜಗತ್ತಿಗೆಲ್ಲಾ  ಶುಭಸಂದೇಶವನ್ನು  ಪ್ರಬೋಧಿಸಿರಿ |

1.  ಸ್ತುತಿ  ಮಾಡಿ  ಪ್ರಭುವನು  ಸಮಸ್ತ  ರಾಷ್ಟ್ರಗಳೇ|
ಆತನನು  ಹೊಗಳಿ  ಹಾಡಿ  ಸರ್ವಜನಾಂಗಗಳೇ||

ಶ್ಲೋಕ

2.  ನಮ್ಮ  ಮೇಲೆ  ಆತನಿಗಿರುವ  ಪ್ರೀತಿ  ಅಚಲ|
ಆತನ  ಸತ್ಯಪರತೆ  ಇರುವುದು  ಅನಂತ  ಕಾಲ||

ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ಹೋಗಿ, ಸಕಲ ದೇಶಗಳ  ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ | ಲೋಕಾಂತ್ಯದವರೆಗೂ ಸದಾ  ನಾನು ನಿಮ್ಮೊಡನೆ ಇರುತ್ತೇನೆ|| 
ಅಲ್ಲೆಲೂಯ!

ಶುಭಸಂದೇಶ: ಮಾರ್ಕನು  ಬರೆದ ಪವಿತ್ರ ಶುಭಸಂದೇಶದಿಂದ ವಾಚನ 16:15-20


ಯೇಸು  ಹನ್ನೆರಡು  ಮಂದಿ  ಶಿಷ್ಯರಿಗೆ  ಹೀಗೆಂದರು: " ನೀವು  ವಿಶ್ವದ  ಎಲ್ಲೆಡೆಗಳಿಗೂ  ಹೋಗಿ  ಜಗತ್ತಿಗೆಲ್ಲಾ  ಶುಭಸಂದೇಶವನ್ನು  ಪ್ರಬೋಧಿಸಿರಿ.  ವಿಶ್ವಾಸವಿಟ್ಟು  ದೀಕ್ಷಾಸ್ನಾನ  ಪಡೆಯುವವನು  ಜೀವೋದ್ಧಾರ  ಹೊಂದುವನು.   ವಿಶ್ವಾಸಿಸದೇ  ಇರುವವನು  ಖಂಡನೆಗೆ  ಗುರಿಯಾಗುವನು.  ವಿಶ್ವಾಸಿಸುವುದರಿಂದ  ಈ  ಅದ್ಭುತ  ಕಾರ್ಯಗಳು  ಆಗುವುವು.  ಅವರು  ನನ್ನ  ಹೆಸರಿನಲ್ಲಿ  ದೆವ್ವಗಳನ್ನು  ಬಿಡಿಸುವರು ;  ಹೊಸ  ಭಾಷೆಗಳಲ್ಲಿ  ಮಾತಾಡುವರು;  ಕೈಗಳಿಂದ  ಸರ್ಪಗಳನ್ನು  ಎತ್ತಿದರೂ  ವಿಷ  ಪದಾರ್ಥಗಳನ್ನೇನಾದರು  ಕುಡಿದರೂ  ಯಾವ  ಹಾನಿಯೂ  ಅವರಿಗಾಗದು.  ಅವರು  ರೋಗಿಗಳ  ಮೇಲೆ  ಕೈ  ಇಟ್ಟರೆ  ರೋಗಿಗಳು  ಗುಣಹೊಂದುವರು, " ಎಂದರು.  ಯೇಸುಸ್ವಾಮಿ  ಶಿಷ್ಯರೊಡನೆ  ಮಾತನಾಡಿದ  ಮೇಲೆ  ಸ್ವರ್ಗಾರೋಹಣವಾಗಿ  ದೇವರ  ಬಲಪಾರ್ಶ್ವದಲ್ಲಿ  ಆಸೀನರಾದರು.  ಇತ್ತ  ಶಿಷ್ಯರು  ಹೊರಟುಹೋಗಿ,  ಎಲ್ಲೆಡೆಗಳಲ್ಲಿಯೂ  ಶುಭಸಂದೇಶವನ್ನು  ಬೋಧಿಸತೊಡಗಿದರು.  ಪ್ರಭು  ಯೇಸು  ಅವರೊಂದಿಗೆ  ಕಾರ್ಯಸಾಧಿಸುತ್ತಾ,  ಮಹತ್ಕಾರ್ಯಗಳಿಂದ  ಶುಭಸಂದೇಶವನ್ನು  ಸಮರ್ಥಿಸುತ್ತಾ  ಇದ್ದರು.

ಪ್ರಭುಕ್ರಿಸ್ತರ  ಶುಭಸಂದೇಶ

No comments:

Post a Comment