03.12.23 - ಎಚ್ಚರವಾಗಿರಿ; ಯಜಮಾನನು, ಸಂಜೆಯಲ್ಲೋ ಮಧ್ಯರಾತ್ರಿಯಲ್ಲೋ ಕೋಳಿಕೂಗುವಾಗಲೋ ಬೆಳಕುಹರಿಯುವಾಗಲೋ, ಯಾವಾಗ ಬರುವನೆಂಬುದು ನಿಮಗೆ ತಿಳಿಯದು.

ಮೊದಲನೆಯ  ವಾಚನ : ಪ್ರವಾದಿ  ಯೆಶಾಯನ  ಗ್ರಂಥದಿಂದ  ಇಂದಿನ  ಮೊದಲನೆಯ  ವಾಚನ  63:16-17, 64:1,3-8


"ನೀವೇ  ನಮ್ಮ  ತಂದೆ.  ಅಬ್ರಹಾಮನು  ನಮ್ಮನ್ನು  ಅರಿಯದೆ  ಇರಬಹುದು,  ಇಸ್ರಯೇಲನು  ನಮ್ಮನ್ನು  ಗುರುತಿಸದೆ  ಇರಬಹುದು.  ಆದರೆ  ಸರ್ವೇಶ್ವರಾ,  ನೀವೇ  ನಮ್ಮ  ತಂದೆ.  ನಮ್ಮ  ಉದ್ಧಾರಕ;  ಆದಿಯಿಂದ  ಇರಲು  ಅದುವೇ  ನಿಮ್ಮ  ನಾಮಾಂಕಿತ.  ಸ್ವಾಮೀ  ನಾವು  ನಿಮ್ಮ  ಮಾರ್ಗ  ತಪ್ಪಿ  ಅಲೆಯುವಂತೆ  ಮಾಡುತ್ತೀರಿ,  ಏಕೆ ?  ನಿಮಗೆ  ಭಯಪಡದ  ಹಾಗೆ  ನಮ್ಮ  ಹೃದಯವನ್ನು  ಕಠಿಣ  ಪಡಿಸುವುದು  ಏಕೆ ?  ನಿಮ್ಮ  ಶರಣರ  ನಿಮಿತ್ತ,  ನಿಮಗೆ  ಬಾಧ್ಯರಾದ  ಕುಲಗಳ  ನಿಮಿತ್ತ,  ನಮಗೆ  ಪ್ರಸನ್ನಚಿತ್ತರಾಗಿರಿ.  ಸ್ವಾಮೀ,  ಆಕಾಶವನ್ನು  ಸೀಳಿ  ಇಳಿದು  ಬರಲಾರಿರಾ?  ನಿಮ್ಮ  ದರ್ಶನವನ್ನು  ಕಂಡು  ಬೆಟ್ಟಗುಡ್ಡಗಳು  ಗಡಗಡನೆ  ನಡುಗಬಾರದೇ?  ನಮ್ಮ ನಿರೀಕ್ಷೆಗೆ  ಮೀರದ  ಮಹತ್ಕಾರ್ಯಗಳನ್ನು  ನಡೆಸಿ, ನಿಮ್ಮ  ನಾಮ  ಮಹಿಮೆಯನ್ನು  ನಿಮ್ಮ  ಶತ್ರುಗಳಿಗೆ  ಪ್ರದರ್ಶಿಸಿ  ಅನ್ಯ  ರಾಷ್ಟ್ರಗಳನ್ನು  ನಡುಗಿಸಲಾರಿರಾ?  ಹೌದು,  ನೀವು  ಇಳಿದುಬಂದು,  ಬೆಟ್ಟಗುಡ್ಡಗಳು  ನಡುಗಿದರೆ  ಎಷ್ಟೋ  ಲೇಸು.  ತಮ್ಮನ್ನು  ಕಾದು  ಎದುರು  ನೋಡುವವರ  ಪರವಾಗಿ  ಕಾರ್ಯಗತರಾಗುವಂಥ  ದೇವರು,  ನಿಮ್ಮನ್ನು  ಬಿಟ್ಟರೆ  ಯಾರಿದ್ದಾರೆ?  ಅಂಥಾ  ದೇವರನ್ನು  ಲೋಕಾದಿಯಿಂದ  ಯಾರೂ  ಕಂಡಿಲ್ಲ,  ಅಂಥವರು  ಯಾರ  ಕಿವಿಗೂ  ಬೀಳಲಿಲ್ಲ.  ಯಾವ  ಕಣ್ಣಿಗೂ  ಕಾಣಿಸಲಿಲ್ಲ.  ಸದಾಚಾರದಲ್ಲೇ  ಸಂತೋಷ  ಪಡುತ್ತಾ,  ನಿಮ್ಮ  ಮಾರ್ಗದಲ್ಲಿ  ನಡೆಯುತ್ತಾ  ನಿಮ್ಮನ್ನು  ಸ್ಮರಿಸುತ್ತಾ  ಬಂದವರಿಗೆ  ಪ್ರತ್ಯಕ್ಷರಾಗುತ್ತೀರಿ.  ನಮ್ಮ  ಮೇಲಾದರೋ  ಕೋಪಗೊಂಡಿರಿ.  ಆದರೂ  ನಾವು  ಪಾಪದಲ್ಲೇ  ಮುನ್ನಡೆದೆವು.  ಬಹುಕಾಲದಿಂದ  ಪಾಪದಲ್ಲಿ  ಮುಳುಗಿಹೋದೆವು.  ನಮ್ಮಂಥವರಿಗೆ  ರಕ್ಷಣೆ  ಇದೆಯೇ?  ನಾವೆಲ್ಲರೂ  ಅಶುದ್ದರು,  ನಮ್ಮ  ಸತ್ಕಾರ್ಯಗಳೆಲ್ಲ  ಕೊಳಕು,  ತರಗೆಲೆಯಂತೆ  ಒಣಗಿ  ಹೋಗಿದ್ದೇವೆ.  ಬಿರುಗಾಳಿಯಂತೆ  ನಮ್ಮನ್ನು  ತಳ್ಳಿಕೊಂಡು  ಬಂದಿದೆ,  ನಮ್ಮ  ಅಪರಾಧಗಳು.  ನಿಮ್ಮ  ನಾಮ  ಸ್ಮರಣೆ  ಮಾಡುವವನು  ಯಾರು  ಇಲ್ಲ.  ನಿಮ್ಮ  ಆಶ್ರಯ  ಕೋರುವ  ಆಸಕ್ತನು  ಎಲ್ಲಿಯೂ  ಇಲ್ಲ.  ಏಕೆಂದರೆ  ನೀವು  ನಮಗೆ  ವಿಮುಖರಾಗಿದ್ದೀರಿ.  ನಮ್ಮ  ಪಾಪಗಳ  ವಶಕ್ಕೆ  ನಮ್ಮನ್ನು  ಬಿಟ್ಟುಬಿಟ್ಟಿದ್ದೀರಿ.  ಆದರೂ  ಸ್ವಾಮಿ  ಸರ್ವೇಶ್ವರಾ,  ನೀವು  ನಮ್ಮ  ತಂದೆ,  ನಾವು  ಜೇಡಿಮಣ್ಣು,  ನೀವೇ  ಕುಂಬಾರ;  ನಾವೆಲ್ಲರು  ನಿಮ್ಮ  ಕೈಯ  ಕೃತಿಗಳು.

- ಪ್ರಭುವಿನ  ವಾಕ್ಯ

ಕೀರ್ತನೆ:         80:1-2,14-18

ಶ್ಲೋಕ:  ಓ  ದೇವಾ,  ಪುನರುದ್ದಾರ  ಮಾಡೆಮ್ಮನು|  ಬೆಳಗಲಿ  ನಿನ್ನ  ಮುಖಕಾಂತಿ!  ಪಡೆದೆವು  ರಕ್ಷಣೆಯನು ||

ಕಿವಿಗೊಟ್ಟು  ಆಲಿಸು  ಇಸ್ರಯೇಲಿನ  ಮೇಷಪಾಲನೇ|
ಜೋಸೆಫನ  ವಂಶಜರನ್ನು  ಕುರಿಹಿಂಡಂತೆ  ಕರೆತಂದವನೇ||
ವಿರಾಜಿಸು  ಕೆರುಬೀಯರ  ಮಧ್ಯೆ  ಆಸೀನನಾದವನೇ|
ತೋರ್ಪಡಿಸು  ನಿನ್ನ  ಶೌರ್ಯವನು|
ಬಂದು  ಜಯಪ್ರದನಾಗು  ನಮಗೆ||

ಸರ್ವಶಕ್ತನಾದ  ದೇವಾ,  ಮರಳಿ  ಮುಖ  ತೋರಿಸು|
ಪರದಿಂದೀಕ್ಷಿಸಿ  ಆ  ದ್ರಾಕ್ಷಾಲತೆಯನು  ಪರಾಮರಿಸು||
ಕಾಪಾಡು  ನಿನ್ನ  ಬಲಗೈ  ನೆಟ್ಟು  ಸಾಕಿದ  ಸಸಿಯನು|
ಕಾದಿರಿಸು  ನಿನಗೆಂದೇ  ನೀ  ಬೆಳೆಸಿದಾ  ಬಳ್ಳಿಯನು||

ಕೈಹಿಡಿದು  ಕಾಪಾಡು  ನಿನ್ನ  ಬಲಗೈ  ಉದ್ದರಿಸಿದ  ಪುರುಷನನು|
ನಿನಗೆಂದೇ  ನೀ  ಸಾಕಿ  ಬೆಳೆಸಿದಾ  ವರಪುತ್ರನನು||
ಆಗ  ಬಿಟ್ಟಗಲುವುದಿಲ್ಲ  ನಾವೆಂದೆಂದಿಗು  ನಿನ್ನನು|
ಪುನರ್ಜೀವಗೊಳಿಸು  ಮಾಳ್ಪೆವು  ನಿನ್ನ  ನಾಮಸ್ಮರಣೆಯನು||

ಎರಡನೆಯ  ವಾಚನ : ಪೌಲನು  ಕೊರಿಂಥಿಯರಿಗೆ  ಬರೆದ  ಮೊದಲನೆಯ  ಪತ್ರದಿಂದ  ಇಂದಿನ  ಎರಡನೆಯ  ವಾಚನ 1:3-9



ಸಹೋದರರೇ,  ನಮ್ಮ  ತಂದೆಯಾದ  ದೇವರಿಂದಲೂ  ಪ್ರಭುವಾದ  ಯೇಸುಕ್ರಿಸ್ತರಿಂದಲೂ  ನಿಮಗೆ  ಅನುಗ್ರಹ  ಮತ್ತು  ಶಾಂತಿಸಮಾಧಾನ  ಲಭಿಸಲಿ !  ಕ್ರಿಸ್ತ  ಯೇಸುವಿನಲ್ಲಿ  ನಿಮಗೆ  ಕೊಡಲಾಗಿರುವ  ದೇವಾನುಗ್ರಹದ  ಸಲುವಾಗಿ  ನಾನು  ನಿಮಗೋಸ್ಕರ  ನನ್ನ  ದೇವರಿಗೆ  ಸತತವಾಗಿ  ಕೃತಜ್ಞತೆಯನ್ನು  ಸಲ್ಲಿಸುತ್ತೇನೆ.  ಏಕೆಂದರೆ,  ಕ್ರಿಸ್ತ  ಯೇಸುವಿನಲ್ಲಿ  ನೀವು  ಎಲ್ಲ  ದೃಷ್ಟಿಯಿಂದಲೂ  ಶ್ರೀಮಂತರು,  ಜ್ಞಾನಸಂಪನ್ನರು  ಮತ್ತು  ವಾಕ್ಚತುರರು  ಆಗಿದ್ದೀರಿ.  ಇದಲ್ಲದೇ,  ಕ್ರಿಸ್ತ  ಯೇಸುವನ್ನು  ಕುರಿತ  ಸಾಕ್ಷ್ಯವು  ನಿಮ್ಮಲ್ಲಿ  ನೆಲೆಗೊಂಡಿದೆ.  ಇದರಿಂದಾಗಿ  ನಮ್ಮ  ಪ್ರಭು  ಯೇಸುಕ್ರಿಸ್ತರು  ಪ್ರತ್ಯಕ್ಷವಾಗುವುದನ್ನೇ  ಎದುರುನೋಡುತ್ತಿರುವ  ನಿಮಗೆ  ಯಾವ  ಕೃಪಾರ್ಶಿವಾದಗಳ  ಕೊರೆತೆಯೂ  ಇಲ್ಲ.  ನಮ್ಮ  ಪ್ರಭು  ಯೇಸುಕ್ರಿಸ್ತರ  ದಿನದಂದು  ನಿರ್ದೋಷಿಗಳಾಗಿರುವಂತೆ  ಆ  ದೇವರೇ  ನಿಮ್ಮನ್ನು  ಕಡೆವರೆಗೂ  ಸ್ಥಿರವಾಗಿ  ಕಾಪಾಡುವರು.  ತಮ್ಮ  ಪುತ್ರನೂ  ನಮ್ಮ  ಪ್ರಭುವೂ  ಆದ  ಯೇಸುಕ್ರಿಸ್ತರ  ಅನ್ಯೋನ್ಯತೆಗೆ  ನಿಮ್ಮನ್ನು  ಕರೆದಿರುವ  ದೇವರು  ನಿಜಕ್ಕೂ  ವಿಶ್ವಾಸಪಾತ್ರರು.

- ಪ್ರಭುವಿನ  ವಾಕ್ಯ

ಘೋಷಣೆ                    ಕೀರ್ತನೆ 85:7

ಅಲ್ಲೆಲೂಯ, ಅಲ್ಲೆಲೂಯ!
ತೋರಿಸೆಮಗೆ  ಪ್ರಭು  ಕರುಣೆಯನು | ಅನುಗ್ರಹಿಸೆಮಗೆ  ರಕ್ಷಣೆಯನು||
ಅಲ್ಲೆಲೂಯ!

ಶುಭಸಂದೇಶ : ಮಾರ್ಕನು  ಬರೆದ  ಪವಿತ್ರ  ಶುಭಸಂದೇಶದಿಂದ  ವಾಚನ 13:33-37


ಆ  ಕಾಲದಲ್ಲಿ  ಯೇಸು  ತಮ್ಮ  ಶಿಷ್ಯರಿಗೆ  ಹೀಗೆಂದರು:  "ಆ  ಕಾಲ  ಯಾವಾಗ  ಬರುವುದು  ಎಂದು  ನಿಮಗೆ  ತಿಳಿಯದ್ದರಿಂದ  ಎಚ್ಚರಿಕೆಯಿಂದಿರಿ,  ಜಾಗರೂಕರಾಗಿರಿ.  ಪ್ರವಾಸಕ್ಕೆಂದು  ಯಜಮಾನನೊಬ್ಬನು  ಮನೆಬಿಟ್ಟು  ಹೋಗುವಾಗ  ತನ್ನ  ಸೇವಕರಲ್ಲಿ  ಪ್ರತಿಯೊಬ್ಬನಿಗೆ  ಒಂದೊಂದು  ಜವಾಬ್ಧಾರಿಯನ್ನು  ವಹಿಸಿ,  ದ್ವಾರಪಾಲಕನಿಗೆ  'ನೀನು  ಎಚ್ಚರವಾಗಿರಬೇಕು, ' ಎಂದು  ಅಪ್ಪಣೆಕೊಡುವ  ರೀತಿಯಲ್ಲಿ  ನಾನು  ನಿಮಗೆ  ಹೇಳುತ್ತಿದ್ದೇನೆ.  ಎಚ್ಚರವಾಗಿರಿ;  ಯಜಮಾನನು,  ಸಂಜೆಯಲ್ಲೋ  ಮಧ್ಯರಾತ್ರಿಯಲ್ಲೋ  ಕೋಳಿಕೂಗುವಾಗಲೋ  ಬೆಳಕುಹರಿಯುವಾಗಲೋ,  ಯಾವಾಗ  ಬರುವನೆಂಬುದು  ನಿಮಗೆ  ತಿಳಿಯದು.  ಅನಿರೀಕ್ಷಿತವಾಗಿ  ಅವನು  ಬಂದಾಗ  ನೀವು  ನಿದ್ರಿಸುತ್ತಿರುವುದನ್ನು  ಕಂಡಾನು !  ನಿಮಗೆ  ಹೇಳುವುದನ್ನೇ  ಸರ್ವರಿಗೂ  ಹೇಳುತ್ತೇನೆ;  ಎಚ್ಚರಿಕೆಯಿಂದಿರಿ ! " ಎಂದರು.

ಪ್ರಭುಕ್ರಿಸ್ತರ  ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...