ಮೊದಲನೆಯ ವಾಚನ: 1 ಸಮುವೇಲ 1:24-28
ಹನ್ನಳು ಮಗುವನ್ನು ಶಿಲೋವಿನಲ್ಲಿದ್ದ ಸರ್ವೇಶ್ವರನ ಮಂದಿರಕ್ಕೆ ತಂದಳು. ಅವನು ಇನ್ನೂ ಚಿಕ್ಕವನು ಆಗಿದ್ದನು. ಜೊತೆಗೆ ಅವರು ಮೂರು ವರ್ಷದ ಹೋರಿಯೊಂದನ್ನು, ಹತ್ತು ಕಿಲೋಗ್ರಾಂ ಹಿಟ್ಟನ್ನು ಹಾಗು ಒಂದು ತಿತ್ತಿ ದ್ರಾಕ್ಷಾರಸವನ್ನೂ ತಂದಿದ್ದರು. ಆ ಹೋರಿಯನ್ನು ಬಲಿದಾನ ಮಾಡಿದ ಮೇಲೆ ಮಗುವನ್ನು ಏಲಿಯ ಬಳಿಗೆ ತರಲಾಯಿತು. ಹನ್ನಳು ಏಲಿಗೆ, "ಸ್ವಾಮಿ, ನಿಮ್ಮ ಜೀವದಾಣೆ, ಹಿಂದೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ ಇಲ್ಲಿ ನಿಮ್ಮ ಹತ್ತಿರ ನಿಂತಿದ್ದ ಮಹಿಳೆ ನಾನೇ. ಸರ್ವೇಶ್ವರ ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ. ಇವನನ್ನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟಿದ್ದೇನೆ. ಬದುಕಿರುವ ತನಕ ಇವನು ಅವರಿಗೆ ಪ್ರತಿಷ್ಠಿತನು, " ಎಂದು ಹೇಳಿದಳು. ಬಳಿಕ ಅವರು ಸರ್ವೇಶ್ವರಸ್ವಾಮಿಯನ್ನು ಆರಾಧಿಸಿದರು.
ಕೀರ್ತನೆ: 1 ಸಮುವೇಲ 2:1,4-6,6-7,8.V.1
ಶ್ಲೋಕ: ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ |
ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ|
ಉನ್ನತೋನ್ನತವಾಗಿದೆ ನನ್ನ ಶಕ್ತಿ ಆ ದೇವನಲಿ||
ನನಗಿದೆ ಶತ್ರುಗಳನ್ನು ಧಿಕ್ಕರಿಸುವ ಶಕ್ತಿ|
ನನಗಿತ್ತಿರುವನಾ ಸಂತಸದಾಯಕ ಮುಕ್ತಿ.||
ಮುರಿದು ಬಿದ್ದಿವೆ ಶೂರರ ಬಿಲ್ಲುಬಾಣಗಳು|
ದುರ್ಬಲರಾದರೋ ಶೌರ್ಯದ ನಡುಕಟ್ಟಿ ನಿಂತಿಹರು||
ಉಂಡು ಸುಖದಿಂದಿರುವವರು ಹಸಿವುಗೊಂಡವರು|
ಹೊಟ್ಟೆಗಾಗಿ ಕೂಲಿ ಮಾಡುತ್ತಿಹರು, ತೃಪ್ತರಿದ್ದವರು||
ಬಂಜೆ ಹೆರುವಳು ಆರೇಳು ಮಕ್ಕಳನು|
ಒಬ್ಬಂಟಿಗಳಾಗಿರುವಳು ಮಕ್ಕಳಿವೆ ಎಂದವಳು||
ಜೀವಕೊಡುವವನು, ತೆಗೆದುಕೊಳ್ಳುವವನು ಆ ಸರ್ವೇಶ್ವರನೇ|
ಪಾತಾಳಕ್ಕಿಳಿಸುವವನು, ಮೇಲಕ್ಕೆಳೆದುಕೊಳ್ಳುವವನು ಆತನೇ||
ಬಡತನ ಸಿರಿತನ ಕೊಡುವವನು ಆ ಸರ್ವೇಶ್ವರನೇ|
ತಗ್ಗಿಸುವವನು ಹೆಚ್ಚಿಸುವವನು ಆತನೇ ||
ಎತ್ತುವನಾತ ದೀನರನು ಧೂಳಿನಿಂದ ದರಿದ್ರರನು ತಿಪ್ಪೆಯಿಂದ|
ಕುಳ್ಳರಿಸುವನವರನು ಅಧಿಪತಿಗಳ ಸಮೇತ||
ಅನುಗ್ರಹಿಸುವನು ಹಕ್ಕಾಗಿ ಆ ಮಹಿಮಾಸನ|
ಕಾರಣ, ಭೂಮಿಯ ಆಧಾರಸ್ಥಂಭಗಳು ಸರ್ವೇಶ್ವರನವೇ|
ಭೂಮಂಡಲವನು ಅವುಗಳ ಮೇಲೆ ಸ್ಥಾಪಿಸಿದವನು ಆತನೇ||
ಅಲ್ಲೆಲೂಯ, ಅಲ್ಲೆಲೂಯ!
ಓ ಜನಾಂಗಗಳ ಅರಸರೇ, ಮತ್ತು ಧರ್ಮಸಭೆಯ ಮೂಲೆಗಲ್ಲೇ | ಬನ್ನಿ, ಮಣ್ಣಿನಿಂದ ನೀವು ಉಂಟುಮಾಡಿದ ಮನುಷ್ಯನನ್ನು ರಕ್ಷಿಸಲು ಬನ್ನಿ ||
ಶುಭಸಂದೇಶ: ಲೂಕ 1:46-56
ಮರಿಯಳು ಹೀಗೆಂದು ಹೊಗಳಿದಳು: "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ, ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ; ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ. ಧನ್ಯರೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ, ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ, ನಿಜಕ್ಕೂ ಆತನ ನಾಮಧೇಯ ಪರಮ ಪೂಜ್ಞ. ಆತನಲ್ಲಿ ಭಯಭಕ್ತಿಯುಳ್ಳವರಿಗಾತನ ಪ್ರೀತಿ ತಲೆತಲಾಂತರದವರೆಗೆ, ಗರ್ವ ಹೃದಯಿಗಳನಾತ ಚದರಿಸಿರುವನು, ಪ್ರದರ್ಶಿಸಿರುವನು ತನ್ನ ಬಾಹುಬಲವನು, ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು, ಏರಿಸಿರುವನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಿರಿವಂತರನು ಬರಿಗೈಯಲಿ, ನೆರವಾದನು ತನ್ನ ದಾಸ ಇಸ್ರಯೇಲನಿಗೆ, ಪೂರ್ವಜರಿಗಿತ್ತ ವಾಗ್ಧಾನದ ಮೇರೆಗೆ ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ಅವನ ಸಂತತಿಗೆ, ಯುಗಯುಗಾಂತರದವರೆಗೆ. ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.
No comments:
Post a Comment