ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪ 6:8-10,7:54-59
ಸ್ತೇಫನನು ದೈವಾನುಗ್ರಹದಿಂದಲೂ ಶಕ್ತಿಯಿಂದಲೂ ತುಂಬಿದ್ದನು. ಜನರ ಮಧ್ಯೆ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದನು. ಆದರೆ ಕೆಲವರು ಸ್ತೇಫನನ ವಿರೋಧಿಗಳಾಗಿದ್ದರು. ಇವರು 'ಬಿಡುಗಡೆ ಹೊಂದಿದವರು' ಎಂಬವರ ಪ್ರಾರ್ಥನಾಮಂದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರೂ ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗೂ ಏಷ್ಯಾದ ಯೆಹೂದ್ಯರೂ ಸೇರಿ ಸ್ತೇಫನನೊಂದಿಗೆ ತರ್ಕ ಮಾಡತೊಡಗಿದರು. ಆದರೆ ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು. ಆದರೆ ಸ್ತೇಫನನು ಪವಿತ್ರಾತ್ಮ ಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾರ್ಶ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು, 'ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾರ್ಶ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ, " ಎಂದನು. ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು. ಅವರು ತನ್ನ ಮೇಲೆ ಕಲ್ಲುಬೀರುತ್ತಿದ್ದಾಗ ಸ್ತೇಪನನು, "ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ, " ಎಂದು ಪ್ರಾರ್ಥಿಸಿದನು.
ಕೀರ್ತನೆ 31:2-3,5,6,7,15-16
ಶ್ಲೋಕ: ನನಗಾಧಾರ ನೀನಲ್ಲವೇ ? ನನ್ನಾತ್ಮವನು ನಿನಗೊಪ್ಪಿಸಿರುವೆ ||
ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ|
ನನ್ನಾಶ್ರಯಗಿರಿ, ದುರ್ಗಸ್ಥಾನವಾಗಿರು ನೀನೇ||
ಕೈ ಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ|
ನೀನೆನಗೆ ಪೊರೆಬಂಡೆ, ಸ್ಥಿರ ಕೋಟೆಕೊತ್ತಲು||
ನನಗಾಧಾರ ನೀನಲ್ಲವೇ? ನನ್ನಾತ್ಮವನು ನಿನಗೊಪ್ಪಿಸಿರುವೆ|
ನಂಬಿಗಸ್ತನಾದ ದೇವನೇ, ನೀಯೆನ್ನ ಮುಕ್ತಗೊಳಿಸಿರುವೆ||
ನಾನಾದರೋ ಪ್ರಭೂ, ಭರವಸೆಯಿಟ್ಟಿರುವುದು ನಿನ್ನಲ್ಲೇ|
ಸರ್ಷಾನಂದಗೊಳ್ಳುವೆ ನೆನೆದು ನಿನ್ನ ಅನಂತ ಪ್ರೀತಿಯನು||
ನಿನ್ನ ಕೈಯಲ್ಲಿದೆ ನನ್ನ ಇಡೀ ಜೀವಮಾನ|
ಬೆನ್ನಟ್ಟಿ ಬರುವ ವೈರಿಯಿಂದ ರಕ್ಷಿಸೆನ್ನ||
ಬೆಳಗಿಸಲಿ ದಾಸನಾದ ನಿನ್ನ ಮುಖ ತೇಜವು|
ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು||
ಘೋಷಣೆ ಕೀರ್ತನೆ 118:26,27
ಅಲ್ಲೆಲೂಯ, ಅಲ್ಲೆಲೂಯ!
ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ | ಪ್ರಭುವೇ ದೇವರು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು ||
ಶುಭಸಂದೇಶ: ಮತ್ತಾಯ 10:17-22
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: ಜನರ ಬಗ್ಗೆ ಜಾಗರೂಕರಾಗಿರಿ ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಂದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ. ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು. ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು. ಸಹೋದರನು ಸಹೋದರನನ್ನೇ ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿ ಬಿದ್ದು ಅವರನ್ನು ಕೊಲ್ಲಿಸುವರು. ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು.
No comments:
Post a Comment