ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.10.22

ಮೊದಲನೆಯ ವಾಚನ: 2 ತಿಮೋಥೆಯ 4:10-17

ದೇಮನು ಇಹಲೋಕದ ಆಶಾಪಾಶಗಳಿಗೆ ಒಳಗಾಗಿ ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋಗಿದ್ದಾರೆ. ಲೂಕನು ಮಾತ್ರ ನನ್ನ ಜೊತೆಯಿದ್ದಾನೆ. ನೀನು ಬರುವಾಗ ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನ ಸೇವೆ ನನಗೆ ಅಗತ್ಯವಾಗಿದೆ. ತುಖಿಕನನ್ನು ನಾನು ಎಫೆಸಕ್ಕೆ ಕಳುಹಿಸಿದ್ದೇನೆ. ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಬಳಿ ಬಿಟ್ಟುಬಂದ ನನ್ನ ಮೇಲಂಗಿಯನ್ನು ತೆಗೆದುಕೊಂಡು ಬಾ. ನನ್ನ ಕೆಲವು ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಸುರುಳಿಗಳನ್ನೂ ತಪ್ಪದೆ ತೆಗೆದುಕೊಂಡು ಬಾ. ಕಂಚುಗಾರನಾದ ಅಲೆಗ್ಸಾಂಡರನು ನನಗೆ ಬಹಳ ಕೇಡುಮಾಡಿದ್ದಾನೆ. ಪ್ರಭು ಅವನ ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವರು. ನೀನು ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಮ್ಮ ಬೋಧನೆಗೆ ಅವನು ಕಟುವಾದ ವಿರೋಧಿಯಾಗಿದ್ದಾನೆ. ನಾನು ಮೊದಲನೆಯ ಸಾರಿ ವಿಚಾರಣೆಗೆ ಒಳಗಾಗಿ ಪ್ರತಿವಾದಿಸುತ್ತಿದ್ದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ದೇವರು ಅವರನ್ನು ಕ್ಷಮಿಸಲಿ. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು.

ಕೀರ್ತನೆ 145:11, 12-13, 17-18
ಶ್ಲೋಕ: ಪ್ರಭೂ, ನಿನ್ನ ಭಕ್ತಸಮೂಹವು ಪ್ರಸಿದ್ಧಪಡಿಸುವುದು, ನಿನ್ನ ರಾಜ್ಯದ ಮಹತ್ವವನು.

ಪ್ರಭೂ, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು|
ಕೊಂಡಾಡುವುದು ನಿನ್ನನು ಭಕ್ತಸಮೂಹವು||
ಪ್ರಸಿದ್ದಪಡಿಸುವರು ನಿನ್ನ ರಾಜ್ಯದ ಮಹತ್ವವನು|
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು||

ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು|
ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು||
ಶಾಶ್ವತವಾದುದು ನಿನ್ನ ರಾಜ್ಯವು|
ಇರುವುದೆಂದಿಗು ನಿನ್ನ ಆಳ್ವಿಕೆಯು||

ನುಡಿಯಲಿ ಪ್ರಭು ಸದಾ ಪ್ರಮಾಣಿಕನು|
ನಡೆಯಲಿ ಆತನು ಸದಾ ಪ್ರೀತಿಮಯನು||
ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ|
ಯಥಾರ್ಥವಾಗಿ ಆತನನು ಅರಸುವವರಿಗೆ||

ಶುಭಸಂದೇಶ: ಲೂಕ 10:1-9


ಆ ಕಾಲದಲ್ಲಿ ಯೇಸು ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, " ಬೆಳೆಯೇನೋ ಹೇರಳವಾಗಿದೆ, ಕೊಯ್ಲುಗಾರರೋ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ' ಮನೆಗೆ ಶಾಂತಿ, ' ಎಂದು ಆಶೀರ್ವಾದ ಮಾಡಿ, ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ' ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ, ' ಎಂದು ತಿಳಿಸಿರಿ.

No comments:

Post a Comment