ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.10.22 - "ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

ಮೊದಲನೇ ವಾಚನ: ಗಲಾತ್ಯರಿಗೆ4:22-24, 26-27, 31--5:1

ಸಹೋದರರೇ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು: ಒಬ್ಬನು ದಾಸಿಯಿಂದ ಹುಟ್ಟಿದವನು; ಇನ್ನೊಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು. ದಾಸಿಯ ಮಗ ಪ್ರಕೃತಿ ಸಹಜವಾಗಿ ಹುಟ್ಟಿದವನು; ಧರ್ಮಪತ್ನಿಯ ಮಗನಾದರೋ ವಾಗ್ದಾನದ ಫಲವಾಗಿ ಹುಟ್ಟಿದವನು. ಇದೊಂದು ಅಲಂಕಾರ ರೂಪ. ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳಿಗೆ ಸದೃಶರಾಗಿದ್ದಾರೆ. ಒಂದು, ಸೀನಾಯ್ ಪರ್ವತದಲ್ಲಿ ಮಾಡಲಾದ ಒಡಂಬಡಿಕೆ; ಅದು ದಾಸತ್ವಕ್ಕೆ ಮಕ್ಕಳನ್ನು ಹೆರುತ್ತದೆ. ಅದನ್ನು ಸೂಚಿಸುವವಳೇ ದಾಸಿ ಹಾಗರಳು. ಆದರೆ ಸ್ವರ್ಗೀಯ ಜೆರುಸಲೇಮ್ ದಾಸಿ ಅಲ್ಲ, ಸ್ವತಂತ್ರಳು, ಈಕೆಯೇ ನಮ್ಮ ತಾಯಿ. “ಸಂತಾನವಿಲ್ಲದ ಸ್ತ್ರೀಯೇ, ಸಂತೋಷಿಸು ಪ್ರಸವವೇದನೆಯನರಿಯದವಳೇ, ಹರ್ಷೋದ್ಗಾರಮಾಡು ಗಂಡನುಳ್ಳವಳಿಗಿಂತ ಕೈಬಿಟ್ಟವಳ ಸಂತಾನ ಹೆಚ್ಚು.” ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ. ಹೌದು, ಪ್ರಿಯ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳು. ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ.

ಕೀರ್ತನೆ: 113:1-2, 3-4, 5, 6-7

ಶ್ಲೋಕ: ಪ್ರಭುವಿನ ಸಿರಿನಾಮವು ಇಂದಿಗೂ ಎಂದೆಂದಿಗೂ ಪೂಜ್ಯ. 

ಶುಭಸಂದೇಶ: ಲೂಕ 11:29-32


ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು.  ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.  ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

No comments:

Post a Comment