ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

05.10.22 - “ನೀವು ಹೀಗೆ ಪ್ರಾರ್ಥನೆ ಮಾಡಬೇಕು"

 ಮೊದಲನೇ ವಾಚನ: ಗಲಾತ್ಯರಿಗೆ 2:1-2, 7-14


ಹದಿನಾಲ್ಕು ವರ್ಷಗಳು ಕಳೆದ ಮೇಲೆ ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ಪುನಃ ಜೆರುಸಲೇಮಿಗೆ ಹೋದೆ. ದೇವಪ್ರೇರಣೆಗೆ ಅನುಸಾರವಾಗಿಯೇ ಅಲ್ಲಿಗೆ ಹೋದೆ. ಅನ್ಯಧರ್ಮೀಯರಿಗೆ ನಾನು ಸಾರುತ್ತಿದ್ದ ಸಂದೇಶ ಏನೆಂಬುದನ್ನು ಅಲ್ಲಿದ್ದ ಕೆಲವು ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕವಾಗಿ ತಿಳಿಸಿದೆ. ಅದುವರೆಗೆ ನಾನು ಪಟ್ಟ ಶ್ರಮವಾಗಲಿ ಈಗ ಪಡುತ್ತಿರುವ ಶ್ರಮವಾಗಲಿ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹೀಗೆ ಮಾಡಿದೆ. ಬದಲಾಗಿ, ಯೆಹೂದ್ಯರಿಗೆ ಶುಭಸಂದೇಶವನ್ನು ಸಾರುವ ಸೇವೆಯನ್ನು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರುವ ಸೇವಾಕಾರ್ಯವನ್ನು ದೇವರು ನನಗೆ ವಹಿಸಿಕೊಟ್ಟಿದ್ದಾರೆ ಎಂಬುದನ್ನು ಆ ಗಣ್ಯವ್ಯಕ್ತಿಗಳು ಒಪ್ಪಿಕೊಂಡರು. ಹೌದು, ಯೆಹೂದ್ಯರಿಗೆ ಪ್ರೇಷಿತನಾಗುವಂತೆ ಪೇತ್ರನನ್ನು ಪ್ರೇರೇಪಿಸಿದ ದೇವರು, ಯೆಹೂದ್ಯರಲ್ಲದವರಿಗೆ ಪ್ರೇಷಿತನಾಗಲು ನನ್ನನ್ನು ಪ್ರೇರೇಪಿಸಿದ್ದಾರೆ. ನನಗೆ ಕೊಡಲಾಗಿದ್ದ ಈ ವಿಶೇಷ ವರವನ್ನು ಮನಗಂಡು ಸಭಾಸ್ತಂಭಗಳೆಂದು ಪರಿಗಣಿತರಾದ ಯಕೋಬ, ಕೇಫ ಮತ್ತು ಯೊವಾನ್ನರು ನನಗೂ ಬಾರ್ನಬನಿಗೂ ಕೈಯಲ್ಲಿ ಕೈಯನ್ನಿಟ್ಟು ಅನ್ಯೋನ್ಯತೆಯನ್ನು ಸೂಚಿಸಿದರು. ಅಲ್ಲದೆ, “ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ, ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ,” ಎಂದೂ ಹೇಳಿದರು. ಅವರಲ್ಲಿದ್ದ ಬಡಬಗ್ಗರಿಗೆ ಮರೆಯದೆ ನೆರವಾಗಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಮಾಡಬೇಕೆಂದು ಎಣಿಸಿದುದು ಅದೇ ಆಗಿತ್ತು. ಆದರೆ ಕೇಫನು ಅಂತಿಯೋಕ್ಯಕ್ಕೆ ಬಂದಾಗ ಆತನು ತಪ್ಪಿತಸ್ಥನೆಂಬುದು ಸಿದ್ಧವಾಗಿದ್ದುದರಿಂದ ನಾನು ಆತನನ್ನು ಮುಖಾಮುಖಿಯಾಗಿ ಖಂಡಿಸಿದೆ.  ಯಕೋಬನ ಕಡೆಯಿಂದ ಕೆಲವು ಸಹೋದರರು ಬರುವುದಕ್ಕೆ ಮುಂಚೆ ಆತನು ಅನ್ಯಧರ್ಮೀಯರೊಡನೆ ಊಟಮಾಡುತ್ತಿದ್ದನು. ಆದರೆ ಅವರು ಬಂದ ಮೇಲೆ ಸುನ್ನತಿ ಪರವಾದಿಗಳಿಗೆ ಅಂಜಿ ಅನ್ಯಧರ್ಮೀಯರಿಂದ ದೂರವಾದನು.  ಅಂತೆಯೇ, ಕೇಫನ ಸಂಗಡ ಇದ್ದ ಮಿಕ್ಕ ಯೆಹೂದ್ಯರು ಕಪಟತನದಿಂದ ವರ್ತಿಸಿದರು. ಇವರ ವರ್ತನೆಗೆ ಬಾರ್ನಬನೂ ಸಹ ಮಾರುಹೋದನು.  ಅವರ ಈ ನಡತೆ, ಶುಭಸಂದೇಶದ ಸತ್ಯಕ್ಕೆ ಅನುಗುಣವಾದುದಲ್ಲ ಎಂದು ನನಗೆ ಮನದಟ್ಟಾಯಿತು. ಆಗ ನಾನು ಅವರೆಲ್ಲರ ಸಮ್ಮುಖದಲ್ಲೇ ಕೇಫನಿಗೆ: “ನೀನು ಯೆಹೂದ್ಯನಾಗಿದ್ದೂ ಯೆಹೂದ್ಯರಂತೆ ನಡೆಯದೆ ಅನ್ಯಧರ್ಮೀಯರಂತೆ ನಡೆದುಕೊಳ್ಳುತ್ತ ಇದ್ದಿಯಲ್ಲವೇ? ಹೀಗಿರುವಲ್ಲಿ ಅನ್ಯಧರ್ಮೀಯರು ಯೆಹೂದ್ಯರಂತೆ ನಡೆದುಕೊಳ್ಳಬೇಕೆಂದು ನೀನು ಒತ್ತಾಯಪಡಿಸುವುದಾದರೂ ಹೇಗೆ?” ಎಂದು ಕೇಳಿದೆ.

ಕೀರ್ತನೆ: 117:1, 2

ಶ್ಲೋಕ: ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. 

ಶುಭಸಂದೇಶ: ಲೂಕ11:1-4

ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು. “ಪ್ರಭುವೇ, ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು, “ನೀವು ಹೀಗೆ ಪ್ರಾರ್ಥನೆ ಮಾಡಬೇಕು: ತಂದೆಯೇ, ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ. ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ’.”

No comments:

Post a Comment