ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

09.10.22 - "ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ"

ಮೊದಲನೇ ವಾಚನ: 2 ಅರಸರು 5:14-17 

ಎಲೀಷನು ಹೇಳಿದಂತಯೇ ನಾಮಾನನು ಜೋರ್ಡಾನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು. ಆನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. "ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅಂಗೀಕರಿಸಬೇಕು," ಎಂದು ಹೇಳಿದನು. ಅದಕ್ಕೆ ಎಲೀಷನು, "ನಾನು ಸನ್ನಿಧಿ ಸೇವೆ ಮಾಡುತ್ತಿರುವ ಸರ್ವೇಶ್ವರನಾಣೆ, ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ," ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ತೆಗೆದುಕೊಳ್ಳಲೇ ಇಲ್ಲ. ಆಗ ಅವನು ಎಲೀಷನಿಗೆ, "ತಾವು ನನ್ನಿಂದ ಏನನ್ನೂ ಸ್ವೀಕರಿಸದಿದ್ದರೆ ತಮ್ಮ ಸೇವಕನಾದ ನನಗೆ ಎರಡು ಹೇಸರುಕತ್ತೆಗಳು ಹೊರುವಷ್ಟು ಮಣ್ಣನ್ನು ಕೂಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಸರ್ವೇಶ್ವರಸ್ವಾಮಿಯೊಬ್ಬರಿಗೇ  ದಹನಬಲಿಗಳನ್ನು ಸಮರ್ಪಿಸಬೇಕೆಂದಿರುತ್ತೇನೆ," ಎಂದು ಹೇಳಿದನು. 

ಕೀರ್ತನೆ: 98:1, 2-3, 3-4 

ಶ್ಲೋಕ: ಪ್ರಕಟಿಹನು ಪ್ರಭು ತನ್ನ ಮುಕ್ತಿವಿಧಾನವನು 

ಎರಡನೇ ವಾಚನ: 2 ತಿಮೊಥೇಯನಿಗೆ  2:8-13 

ಪ್ರಿಯಪುತ್ರನೇ, ಕ್ರಿಸ್ತ ಯೆಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ. ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಕೆಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತ ಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ  ಸಹಿಸುತ್ತಿದ್ದೇನೆ. ಈ ಮಾತು ನಂಬತಕ್ಕದ್ದಾಗಿದೆ: ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ. ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ ನಮ್ಮನಾತ ನಿರಾಕರಿಸುತ್ತಾನೆ. ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ; ಕಾರಣ,  ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ. 

ಶುಭಸಂದೇಶ: ಲೂಕ 17:11-19 


ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು. ಒಂದು ಗ್ರಾಮವನ್ನು ಸಮಿಾಪಿಸಿದಾಗ ಕುಷ್ಟರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, "ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,' ಎಂದು ಕೂಗಿ ಕೇಳಿಕೊಂಡರು. ಯೇಸು ಅವರನ್ನು ನೋಡಿ, "ನೀವು ಯಾಜಕರ ಬಳಿಗೆ ಹೋಗಿರಿ, ಅವರು ನಿಮ್ಮನ್ನು ಪರೀಕ್ಷಿಸಲಿ," ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! ಆಗ ಯೇಸು, "ಹತ್ತುಮಂದಿ ಗುಣ ಹೊಂದಿದರಲ್ಲವೇ? ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?" ಎಂದರು. ಆನಂತರ ಆ ಸಮಾರಿಯದವನಿಗೆ, "ಎದ್ದು ಹೋಗು: ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ," ಎಂದು ಹೇಳಿದರು.

No comments:

Post a Comment