ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.10.22 - ಸಂತ ಸ್ಮರಣೆ - ಅಂತಿಯೋಕ್ಯದ ಸಂತ ಇಗ್ನೇಷಿಯಸ್ - St. Ignatius of Antioch


ಪ್ರಥಮ ಧರ್ಮಸಭೆಯ ಪ್ರೇಷಿತ, ಪ್ರೇಷಿತರ ಸಮಕಾಲೀನ ಮತ್ತು ಉತ್ತರಾಧಿಕಾರಿ, ಶುಭಸಂದೇಶ ಕರ್ತೃ ಯೊವಾನ್ನನ ಶಿಷ್ಯನಾಗಿದ್ದ ಅಂತಿಯೋಕ್ಯದ ಸಂತ ಇಗ್ನೇಷಿಯಸ್ ಹುಟ್ಟಿದ್ದು ಬೆಳೆದದ್ದು ಸಿರಿಯಾ ದೇಶದಲ್ಲಿ. ಜೆರುಸಲೇಮಿನಿಂದ ಪ್ರಭುವಿನ ಶುಭಸಂದೇಶ ಮೊದಲು ತಲುಪಿದ್ದು ಅಂತಿಯೋಕ್ಯಕ್ಕೆ. ರೋಮ್ ಕ್ರೈಸ್ತಧರ್ಮದ ಕೇಂದ್ರವಾಗುವ ಮೊದಲು ಮತ್ತು ನಂತರವೂ ಅಂತಿಯೋಕ್ಯ ಪ್ರಮುಖ ಕೇಂದ್ರವಾಗಿತ್ತು. ಈ ಅಂತಿಯೋಕ್ಯದ ಮೂರನೇ ಧರ್ಮಧ್ಯಕ್ಷರಾಗಿ ಸಂತ ಇಗ್ನೇಷಿಯಸ್ ನೇಮಿಸಲ್ಪಟ್ಟಿದ್ದರು. ಕ್ರಿ.ಶ. 69ರಲ್ಲಿ ಪ್ರೇಷಿತ ಜಗದ್ಗುರು ಪೇತ್ರರೇ ಇವರಿಗೆ ಧರ್ಮಾಧ್ಯಕ್ಷ ದೀಕ್ಷೆ ನೀಡಿದ್ದರು.

ಕ್ರಿ.ಶ. 94ರಿಂದ 96ರ ತನಕ ಚಕ್ರವರ್ತಿ ಡೊಮಿಷಿಯನ್ ಕ್ರೈಸ್ತರಿಗೆ ಚಿತ್ರಹಿಂಸೆ ನೀಡಲಾರಂಭಿಸಿದ. ಆಗಷ್ಟೇ ಕ್ರೈಸ್ತರಾಗಿ ವಿಶ್ವಾಸದಲ್ಲಿ ಬೇರೂರುತ್ತಿದ್ದ ಕ್ರೈಸ್ತರು ಛಿದ್ರಗೊಳ್ಳಲಾರಂಭಿಸಿದರು. ಈ ಸಂದರ್ಭದಲ್ಲಿ ಸಂತ ಇಗ್ನೇಷಿಯಸ್ ಅವರಿಗೆ ಸಾಂತ್ವನ ನೀಡುತ್ತಾ, ಧೈರ್ಯ ಮತ್ತು ಭರವಸೆಯನ್ನು ತುಂಬಿ ಅವರನ್ನು ಮುನ್ನಡೆಸಿದರು. ಪ್ರಾಣ ಹೋದರೂ ಧರ್ಮಬಿಡಬಾರದೆಂಬುದು ಅವರ ನಂಬಿಕೆಯಾಗಿತ್ತು. ಇವರ ಧೈರ್ಯ ಮತ್ತು ಕ್ರೈಸ್ತರ ಒಗ್ಗಟ್ಟಿನಿಂದ ಕೆಲಕಾಲ ಹಿಂಸೆ ನಿಂತು ಶಾಂತಿ ನೆಲೆಸಿತ್ತು.

ಚಕ್ರವರ್ತಿ ಟ್ರಾಜನ್ ಅಧಿಕಾರಕ್ಕೆ ಬಂದ ಕೂಡಲೇ ಕ್ರಿ.ಶ. 98ರಲ್ಲಿ ಮತ್ತೆ ಕ್ರೈಸ್ತರ ಚಿತ್ರಹಿಂಸೆ ಪ್ರಾರಂಭವಾಯಿತು. ಮತ್ತೆ ಸಂತ ಇಗ್ನೇಷಿಯಸ್ ರ ಮೇಷ ಪಾಲಕ ಕರ್ತವ್ಯಗಳು ಚುರುಕುಗೊಂಡವು. ಜನರಲ್ಲಿ ಹುಮ್ಮಸ್ಸು ತುಂಬುತ್ತಾ ಕ್ರೈಸ್ತ ಸಮುದಾಯದ ಒಗ್ಗಟ್ಟು ಕಾಯ್ದುಕೊಳ್ಳುವ ಕೆಲಸದಲ್ಲಿ ಸಂಪೂರ್ಣ ನಿರತರಾಗಿ ಹೋದರು. ಈ ಜನರಲ್ಲಿ ದೈವ ವಿಶ್ವಾಸ ತುಂಬುತ್ತಾ ಅವರು ಹೇಳಿದ್ದೇನೆಂದರೆ: "ಒಬ್ಬ ಕ್ರೈಸ್ತ ತನಗಾಗಿ ಮಾತ್ರ ಜೀವಿಸುವುದಿಲ್ಲ, ಆತ ದೇವರಿಗೆ ಸೇರಿದವನಾಗಿ ಬಾಳುತ್ತಾನೆ."

ಈ ಚಿತ್ರಹಿಂಸೆ ಹೀಗೆ ಮುಂದುವರೆದ ಸಂದರ್ಭದಲ್ಲಿ ಚಕ್ರವರ್ತಿಯ ಒಂದು ಆಜ್ಞೆಯನ್ನು ಕ್ರೈಸ್ತರು ಧಿಕ್ಕರಿಸಬೇಕೆಂದು ಧರ್ಮಾಧ್ಯಕ್ಷರು ಆದೇಶಿಸುತ್ತಾರೆ. ಇದರಿಂದ ಕುಪಿತರಾದ ಆಡಳಿತವರ್ಗ ಧರ್ಮಧ್ಯಕ್ಷರನ್ನು ಬಂಧಿಸಿ, ಆಗ ಅಂತಿಯೋಕ್ಯಕ್ಕೆ ಬಂದಿದ್ದ ಚಕ್ರವರ್ತಿ ಟ್ರಾಜನ್ ಬಳಿ ಕರೆದೊಯ್ಯುತ್ತಾರೆ. ಯಾವುದೇ ಭಯ ಭೀತಿ ಇಲ್ಲದ ಇಗ್ನೇಶಿಯಸ್ ಅರಸನ ತುಚ್ಛ ಮತ್ತೊಂದಕ್ಕೆ ಉತ್ತರಿಸುತ್ತಾ ಹೀಗೆನ್ನುತ್ತಾರೆ: "ಕ್ಷುದ್ರ ಮನುಷ್ಯ ಎಂದು ಎಂದಿಗೂ ನನ್ನ ಕರೆಯಬೇಡಿ, ಯಾಕೆಂದರೆ ನನ್ನೊಳಗೆ ದೇವರಿದ್ದಾರೆ." ಇವರ ದಿಟ್ಟ ಉತ್ತರ, ಅಂಜಿಕೆಯಿಲ್ಲದ  ಮಾತನ್ನು ಕೇಳಿಸಿಕೊಂಡ ಟ್ರಾಜನ್ ಇವರನ್ನು ರೋಮ್ ಗೆ ಕೊಂಡೊಯ್ದು ಕೊಲೆಸ್ಸಿಯಮ್ ನಲ್ಲಿ ಹುಲಿ ಸಿಂಹಗಳ ಬಾಯಿಗೆ ಹಾಕಿರಿ ಎಂದು ಆಜ್ಞಾಪಿಸುತ್ತಾನೆ.

62ನೇ ವಯಸ್ಸಿನಲ್ಲಿ ಇಗ್ನೇಷಿಯಸ್ ರನ್ನು ದೂರದ ರೋಮ್ ಗೆ ಕೊಂಡೊಯ್ಯಲಾಗುತ್ತದೆ. ದೀರ್ಘ ಪ್ರಯಾಣ, ದಿನಗಟ್ಟಲೆ ನಡೆ ಸಂತ ಇಗ್ನೇಷಿಯಸ್ ರಿಗೆ ಸೌಭಾಗ್ಯವಾಗಿ ಮಾರ್ಪಡುತ್ತದೆ. ದಾರಿಯುದ್ದಕ್ಕೂ ನೂರಾರು ಊರು ಮತ್ತು ಹಳ್ಳಿಗಳಿಂದ ಕ್ರೈಸ್ತರು ಬಂದು ಧರ್ಮಧ್ಯಕ್ಷರನ್ನು ಕಾಣುತ್ತಾರೆ. ಏಷಿಯಾ ಮೈನರ್, ಉತ್ತರ ಗ್ರೀಸ್ ಪ್ರದೇಶಗಳ ಊರೂರೇ ದಾರಿಯಲ್ಲಿ ಸೇರಿಕೊಳ್ಳುತ್ತದೆ. ದೂರದ ಊರುಗಳಿಂದ ಕ್ರೈಸ್ತ ಧರ್ಮ ಸಭೆಗಳು ಇವರಿಗೆ ವಂದನೆ ಸಲ್ಲಿಸಲು, ಸಾಂತ್ವನ ಹೇಳಿ ಕ್ರೈಸ್ತ ವಿಶ್ವಾಸ ಪ್ರಕಟಿಸಲು ಪ್ರತಿನಿಧಿಗಳನ್ನು ಕಳಿಸಿಕೊಡುತ್ತದೆ. ಸ್ಮರ್ನಾ ಎಂಬ ಊರಿನಲ್ಲಿ ಸಂತ ಪೋಲಿಕಾಪ್೯ ಇವರನ್ನು ಭೇಟಿ ಯಾಗುತ್ತಾರೆ. ಹೀಗೆ ಇದೊಂದು ಬಂಧಿಯೊಬ್ಬನ ಪ್ರಯಾಣ ಆಗುವುದಿಲ್ಲ, ಕ್ರಿಸ್ತನ ಶುಭಸಂದೇಶ ಪ್ರಸಾರದ ಪ್ರಯಾಣವಾಗುತ್ತದೆ.

ಈ ಪ್ರಯಾಣದಲ್ಲಿ ಸಂತ ಇಗ್ನೇಷಿಯಸ್ ಬರೆದ 7 ಪತ್ರಗಳು ಪ್ರಸಿದ್ಧವಾಗಿವೆ. ಏಷಿಯಾ ಮೈನರ್ ಗೆ ಬರೆದ 5 ಪತ್ರಗಳು ಅಲ್ಲಿನ ಕ್ರೈಸ್ತ ಭಕ್ತರನ್ನು ಉದ್ದೇಶಿಸಿ ಬರೆದ ಪಾಲನಾ ಪತ್ರಗಳಾಗಿವೆ. ಕ್ರೈಸ್ತರು ತಾವು ನಂಬಿದ್ದ ದೇವರಿಗೆ ಮತ್ತು ಆತ ಕಳುಹಿಸಿದ ಪ್ರತಿನಿಧಿಗಳಿಗೆ ತೋರಿಸಬೇಕಾದ ನಿಷ್ಠೆಯ ಬಗ್ಗೆ ಬರೆಯುತ್ತಾರೆ. ಆರನೆಯ ಪತ್ರ ಮತ್ತು ಏಳನೆಯ ಪತ್ರ ರೋಮ್ ನಲ್ಲಿರುವ ಕ್ರೈಸ್ತರಿಗೆ ಬರೆಯಲ್ಪಟ್ಟಿದ್ದು. ಯಾವುದೇ ಕಾರಣಕ್ಕೂ ತಾವು ರಕ್ತಸಾಕ್ಷಿ ಯಾಗುವುದನ್ನು ತಪ್ಪಿಸಿ, ಬಿಡುಗಡೆ ಮಾಡಿಸಲು ಪ್ರಯತ್ನಿಸಬಾರದು ಎಂದು ಮನವಿ ಮಾಡಿದ ಪತ್ರ ಇದು.

ಧರ್ಮ ಮತ್ತು ವಿಶ್ವಾಸಕ್ಕಾಗಿ ಹುತಾತ್ಮರಾಗಲು ಸಂತ ಇಗ್ನೇಷಿಯಸ್ ಸಿದ್ಧರಾಗುತ್ತಾರೆ. 'ತಾನು ದೇವರ ಗೋಧಿ ಕಾಳಾಗಿದ್ದು, ಕಾಡು ಪ್ರಾಣಿಗಳ ಹಲ್ಲುಗಳಿಂದ ಅರೆಯಲ್ಪಟ್ಟು, ಯೇಸುವಿನ ಪೂಜ್ಯ ರೊಟ್ಟಿ ಯಾಗುವುದು' ತನ್ನ ಬಯಕೆಯೆಂದು  ಹೇಳುತ್ತಾರೆ. ಸಂತ ಇಗ್ನೇಷಿಯಸ್ ರ ಹಬ್ಬದ ಪರಮ ಪ್ರಸಾದ ಪ್ರಾರ್ಥನೆಯಲ್ಲಿ ಅವರ ಈ ಮಾತಿದೆ. ಕೊನೆಗೆ ಮ್ಯಾಕ್ಸಿಮಸ್ ಸರ್ಕಸ್ ನಲ್ಲಿ ಎರಡು ಸಿಂಹಗಳ ಬಾಯಿಗೆ ತಳ್ಳಲ್ಪಟ್ಟು 🕯️ಸಂತ ಇಗ್ನೇಷಿಯಸ್ ಆಹಾರವಾಗುತ್ತಾರೆ. ಅವರ ಶಿಷ್ಯರು ಅವರ ಅಳಿದುಳಿದ ದೇಹದ ಭಾಗಗಳನ್ನು ತಂದು ಸಮಾಧಿ ಮಾಡುತ್ತಾರೆ. ಗಂಟಲು ಬೇನೆಯುಳ್ಳವರು ಸಂತ ಇಗ್ನೇಷಿಯಸರ ಬಳಿ ಪ್ರಾರ್ಥನೆ ಮಾಡುತ್ತಾರೆ.

No comments:

Post a Comment