06.10.22 - "ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ? "

 ಮೊದಲನೇ ವಾಚನ: ಗಲಾತ್ಯರಿಗೆ 3:1-5

ಎಲೈ ಮತಿಗೆಟ್ಟ ಗಲಾತಿಯರೇ, ನಿಮ್ಮನ್ನು ಮರುಳುಗೊಳಿಸಿದವರು ಯಾರು? ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದ್ದನ್ನು ನಿಮ್ಮ ಕಣ್ಣೆದುರಿಗೇ ಚಿತ್ರಿತಗೊಳಿಸಲಿಲ್ಲವೆ? ನಿಮ್ಮ ಬಳಿ ಒಂದು ವಿಷಯವನ್ನು ಕೇಳಲಿಚ್ಛಿಸುತ್ತೇನೆ; ನೀವು ಪವಿತ್ರಾತ್ಮರನ್ನು ಪಡೆದುದು ಹೇಗೆ? ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲೋ? ಇಲ್ಲವೆ ಶುಭಸಂದೇಶವನ್ನು ಕೇಳಿ ವಿಶ್ವಾಸಿಸಿದ್ದರಿಂದಲೋ? ನೀವು ಪವಿತ್ರಾತ್ಮ ಸಂಬಂಧವಾದ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿಯೂ ಈಗ ಅದನ್ನು ಕೇವಲ ದೇಹಸಂಬಂಧವಾದ ವಿಧಿಯಿಂದ ಪೂರೈಸಬೇಕೆಂದಿದ್ದೀರೋ? ನೀವು ಅಷ್ಟು ಮತಿಗೆಟ್ಟವರೋ? ನಿಮ್ಮ ಅನುಭವಗಳೆಲ್ಲವೂ ವ್ಯರ್ಥವಾದುವು ಎಂದು ಹೇಳೋಣವೇ? ದೇವರು ನಿಮಗೆ ಪವಿತ್ರಾತ್ಮರನ್ನು ಪ್ರಧಾನಮಾಡಿ ಮಹತ್ಕಾರ್ಯಗಳನ್ನು ಎಸಗುತ್ತಾ ಬಂದಿದ್ದಾರೆ. ಹಾಗೆ ಮಾಡುತ್ತಿರುವುದು, ನೀವು ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲ್ಲ, ಶುಭಸಂದೇಶವನ್ನು ಕೇಳಿ, ವಿಶ್ವಾಸ ಇಟ್ಟಿರುವುದರಿಂದ.

ಲೂಕ: 1:69-70, 71-72, 73-75

ಶ್ಲೋಕ: ಸ್ತುತಿಸ್ತೋತ್ರ ಇಸ್ರಯೇಲಿನ  ದೇವರಾದ ಸರ್ವೇಶ್ವರನಿಗೆ 

ಶುಭಸಂದೇಶ: ಲೂಕ 11:5-13


ಯೇಸುಸ್ವಾಮಿ ಶಿಷ್ಯರಿಗೆ ಹೀಗೆಂದರು: “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು, ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ? ಆದರೂ, ತನ್ನ ಗೆಳೆಯ ಇವನು ಎಂದು ಎದ್ದುಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದುಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. ಆದುದರಿಂದ: ‘ಕೇಳಿರಿ, ನಿಮಗೆ ದೊರಕುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ, ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’ “ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ?  ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ?  ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...