ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

14.10.22 - ಸಂತ ಸಂತ ಒಂದನೇ ಕಲಿಸ್ತಸ್ St.Callistus🙏


ಸಂತ ಕಲಿಸ್ತಸ್ ಅತಿ ರೋಚಕ ಸಂತ. ಅವರ ಬದುಕಿನದು ವಿಚಿತ್ರ ತಿರುವು ಮತ್ತು ಬೆಳವಣಿಗೆ. ಬಹುಶಃ ಒಬ್ಬ ಗುಲಾಮ ಮತ್ತು ಮಾಜಿ ಅಪರಾಧಿ ಜಗದ್ಗುರುವಾಗಿದ್ದು ಅಧಿಕೃತವಾಗಿ ಚುನಾಯಿತರಾದದ್ದು ಧರ್ಮಸಭೆಯ ಇತಿಹಾಸದಲ್ಲೇ ಮೊದಲಿರಬೇಕು.

ಕಲಿಸ್ತಸ್ ರ ಜೀವನ ಚರಿತ್ರೆಯ ಇನ್ನೊಂದು ವಿಚಿತ್ರವೆಂದರೆ, ಅವರ ಜೀವನ ಚರಿತ್ರೆಯನ್ನು ಬರೆದದ್ದು ಅವರ ವಿರೋಧಿ ಮತ್ತು ಶತ್ರು ಸಂತ ಹಿಪ್ಪೊಲಿಟಸ್. ಇನ್ನೂ ವಿಚಿತ್ರವೆಂದರೆ ಈ ಶತ್ರು ಮುಂದೆ ಒಬ್ಬ ಬಂಡಾಯ ಜಗದ್ಗುರುವಾಗಿ ಕಲಿಸ್ತಸ್ ರನ್ನು ವಿರೋಧಿಸಿದ್ದು ಮತ್ತು ಇವರೂ ಒಬ್ಬ ಸಂತರೆಂದು ಘೋಷಿಸಲ್ಪಟ್ಟದ್ದು. 

ಈ ಎಲ್ಲಾ ದೃಷ್ಟಿಕೋನಗಳಿಂದ ನೋಡಿದಾಗ ಸಂತ ಕಲಿಸ್ತಸ್ ಬಗೆಗೆ ಸಂತ ಹಿಪ್ಪೊಲಿಟಸ್ ಬರದ ಜೀವನ ಚರಿತ್ರೆ ಸತ್ಯಕ್ಕೆ ಹೆಚ್ಚು ಹತ್ತಿರವಾಗಿರಬೇಕು. ರೋಮ್ ನ ಕುಲೀನ ಕುಟುಂಬ ವೊಂದರಲ್ಲಿ ಗುಲಾಮನಾಗಿದ್ದ ಕಲಿಸ್ತಸ್. ಆತನ ಒಡೆಯ ಕಾರ್ ಫೋರ್ ಫೊರುಸ್ ಈತನನ್ನು ತನ್ನ ಬ್ಯಾಂಕಿನ ಅಧಿಕಾರಿಯನ್ನಾಗಿ ನೇಮಿಸಿದ. ದುರದೃಷ್ಟವೆಂಬಂತೆ ಬ್ಯಾಂಕ್ ಸಾಲದಿಂದ ಮುಳುಗಿ ಹೋಯಿತು. ಆದರೆ ಸಮಸ್ಯೆಗಳು ಮಾತ್ರ ಕಲಿಸ್ತಸ್ ತಲೆಗೆ ಬಂತು. ಆ ಕ್ಷಣದ ದಂಡನೆ ತಪ್ಪಿಸಿಕೊಳ್ಳಲು ರೋಮ್ ಬಿಟ್ಟು ಹಡಗೊಂದರಲ್ಲಿ ಓಡಿಹೋದ ಕಲಿಸ್ತಸ್. ಹಡಗಿನಲ್ಲೂ ತನ್ನ ಒಡೆಯನ ಕೈಗೆ ಸಿಕ್ಕಿಬೀಳುವ ಸಂದರ್ಭದಲ್ಲಿ, ಸಮುದ್ರದೊಳಕ್ಕೆ ಹಾರಿಬಿಟ್ಟ. ಆದರೆ ಅದೃಷ್ಟ ಅಲ್ಲಿಯೂ ಗೆಲ್ಲಲಿಲ್ಲ. ಅವನನ್ನು ಹಿಡಿದು ರೋಮ್ ಗೆ ಕರೆತರಲಾಯಿತು. ಪರಿಣಾಮವಾಗಿ ಯಂತ್ರ ತುಳಿಯುವ ಕಾರ್ಖಾನೆಯೊಂದರಲ್ಲಿ ಬಲವಂತ ಕೂಲಿಗೆ ಕಳುಹಿಸಲಾಯಿತು. ಆದರೆ ಒಡೆಯನಿಗೆ ತನ್ನ ಗುಲಾಮನ ಬಗ್ಗೆ ಕರುಣೆ ಬಂದು ಅವನನ್ನು ಬಿಡಿಸಿಕೊಂಡ. ಸಾಲಗಾರರಿಂದ ಹಣ ಪಡೆಯಲು ಶ್ರಮಿಸುವುದಾಗಿ ಕಲಿಸ್ತಸ್ ಒಡೆಯನಿಗೆ ಮಾತು ಕೊಟ್ಟ.

ಈ ಸಾಲ ವಸೂಲಿಯ ಸಂಬಂಧದಲ್ಲಿ ಕಲಿಸ್ತಸ್ ಒಮ್ಮೆ ಯೆಹೂದಿ ದೇವಾಲಯದ ಪ್ರಾರ್ಥನಾ ಸಂದರ್ಭದಲ್ಲಿ ಕೂಗಾಡಿ, ಅಡಚಣೆಯನ್ನುಂಟು ಮಾಡಿ ಮತ್ತೆ ಬಂಧಿತನಾಗಿ ಈ ಬಾರಿ ಸಾಡಿ೯ನಿಯಾ ಗಣಿಗಳಲ್ಲಿ ಜೀತಕ್ಕೆ ತಳ್ಳಲ್ಪಟ್ಟ. ಆದರೆ ಇವನ ಅದೃಷ್ಟ ಚೆನ್ನಾಗಿತ್ತು. ಈ ಸಮಯದಲ್ಲಿ ಅರಸ ಮತ್ತು ಜಗದ್ಗುರುಗಳ ನಡುವೆ ಒಳ್ಳೆಯ ಸಂಬಂಧವಿತ್ತು. ಅರಸನ ಹೆಂಡತಿಗೆ ಕ್ರೈಸ್ತರ ಬಗ್ಗೆ ಅನುಕಂಪವಿತ್ತು. ಈ ಕಾರಣದಿಂದ ಬಂಧಿತರಾಗಿದ್ದ ಅನೇಕ ಕ್ರೈಸ್ತರನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅಚಾತುರ್ಯವಾಗಿ ಕಲಿಸ್ತಸ್ ಹೆಸರೂ ಆ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಕಲಿಸ್ತಸ್ ಬಿಡುಗಡೆಯಾದ ಮೇಲೆ ಆತನನ್ನು ಕ್ರೈಸ್ತ ಸ್ಮಶಾನದ ಮೇಲ್ವಿಚಾರಕನನ್ನಾಗಿ ನೇಮಿಸಲಾಯಿತು.

ಕಲಿಸ್ತಸ್ ಬದುಕು ತಿರುವು ಪಡೆದದ್ದು ಈ ಸಂದರ್ಭದಲ್ಲಿ. ನೂತನ ಜಗದ್ಗುರು ಜೆಫಿರುನುಸ್ ಕಲಿಸ್ತಸ್ ರನ್ನು ಉಪಯಾಜಕರನ್ನಾಗಿ ಮಾಡಿ ರೋಮ್ಗೆ ಕರೆಸಿಕೊಂಡರು. ಈ ಸಂದರ್ಭದಲ್ಲಿ ಧರ್ಮಸಭೆಯಲ್ಲಿ ಸಾಕಷ್ಟು ಪಾಷಾಂಡಿ ನಿಲುವುಗಳು ತಲೆದೋರಿದವು. ಇದರಲ್ಲಿ ಕಲಿಸ್ತಸ್ ಜಗದ್ಗುರುಗಳಿಗೆ ಸಲಹೆಗಾರರಾಗಿ ನಿಂತರು. ಕ್ರಿ.ಶ.219 ರಲ್ಲಿ ಜಗದ್ಗುರು ಮರಣಹೊಂದಿದಾಗ, ಹಿಪ್ಪೊಲಿಟಸ್ ನೇತೃತ್ವದ ಒಂದು ವರ್ಗದ ವಿರೋಧದ ನಡುವೆಯೂ ಕಲಿಸ್ತಸ್ ಜಗದ್ಗುರುವಾಗಿ ನೇಮಕಗೊಂಡರು.

ಇವರ ಸಡಿಲ ನಿಲುವುಗಳು ಮತ್ತು ನೇಮಕಾತಿಯನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದ ಹಿಪ್ಪೊಲಿಟಸ್ ಈಗ ಬಂಡಾಯ ಜಗದ್ಗುರುವಾಗಿದ್ದರು. ಮುಂದೆ 18 ವರ್ಷಗಳ ಕಾಲ ಬಂಡಾಯ ಇದ್ದು ಅನಂತರ ರಾಜಿಯಾಗುತ್ತದೆ. ಸಂತ ಹಿಪ್ಪೊಲಿಟಸ್ ಮೂಲತಃವಾಗಿ ತೀರಾ ಸಂಪ್ರದಾಯವಾದಿ ಮತ್ತು ಕರ್ಮಠ ನಿಲುವುಗಳನ್ನು ತಾಳಿದವರು. ಆದರೆ ಕಲಿಸ್ತಸ್ ಯೇಸು ನುಡಿದ 'ನಾನು ಬಂದಿರುವುದು ಪಾಪಿಷ್ಠರಿಗೆ, ಪುಣ್ಯತ್ಮರಿಗಲ್ಲ' ಎಂಬ ಮಾತನ್ನು ಅನುಸರಿಸಿ ಉದಾರವಾದವನ್ನು ಪ್ರದರ್ಶಿಸುತ್ತಾರೆ. ಈ ಇಬ್ಬರು ಸಮಕಾಲೀನ ಜಗದ್ಗುರುಗಳ ನಡುವೆ ಸಂಘರ್ಷಕ್ಕೆ ಇದೇ ಕಾರಣವಾಗುತ್ತದೆ.

 ಸಂತ ಹಿಪ್ಪೊಲಿಟಸ್ ಕಲಿಸ್ತಸ್ ಮೇಲೆ ಐದು ಪ್ರಮುಖ ಆರೋಪಗಳನ್ನು ಮಾಡುತ್ತಾರೆ.

1. ಕೊಲೆ, ಹಾದರ ಮತ್ತು ವ್ಯಭಿಚಾರಿಗಳು ಬಹಿರಂಗ ಕ್ಷಮೆಯಾಚಿಸಿದಾಗ ಅವರನ್ನು ಪರಮ ಪ್ರಸಾದಕ್ಕೆ ಪುನಃ ಸೇರಿಸಿಕೊಳ್ಳಲಾಗುತ್ತಿತ್ತು.

2.ಕುಲೀನ ಜಾತಿಗಳು ಮತ್ತು ಗುಲಾಮರ ನಡುವೆ ರೋಮನ್ ಕಾನೂನು ಸಹ ನಿಷೇಧಿಸಿದ್ದ ವಿವಾಹಗಳನ್ನು ಇವರು ನಡೆಸುತ್ತಿದ್ದರು.

3.ಎರಡು ಮೂರು ಸಾರಿ ಮದುವೆಯಾಗಿ ನಂತರ ಬಂದವರಿಗೂ ಇವರು ಗುರು ದೀಕ್ಷೆಯನ್ನು ನೀಡುತ್ತಿದ್ದರು.

4. ಸಾವಾದ ಪಾಪದ ಏಕೈಕ ಕಾರಣಕ್ಕಾಗಿ ಒಬ್ಬ ಧರ್ಮಧ್ಯಕ್ಷರನ್ನು ಪದಚ್ಯುತಿಗೊಳಿಸಲು ಸಾಧ್ಯವಿಲ್ಲ.

5.ಚಿತ್ರಹಿಂಸೆ ಸಂದರ್ಭದಲ್ಲಿ ಕ್ರೈಸ್ತ ಧರ್ಮ ಬಿಟ್ಟುಹೋದವರ ಬಗ್ಗೆ ತೀರಾ ಸಡಿಲವಾದ ನಿಲುವು ತೆಗೆದುಕೊಳ್ಳುತ್ತಿದ್ದರು.

ಯಾವುದೇ ದೃಷ್ಟಿಕೋನದಿಂದ ನೋಡಿದರೂ ಕಲಿಸ್ತಸ್ ರದು ಕ್ರಿಸ್ತನಿಗೆ ಹತ್ತಿರವಾದ ಹಾಗೂ ಪ್ರಗತಿಪರ ಧೋರಣೆ ಎಂದು ಯಾರೇ ಹೇಳಬಹುದು. ಇವರ ಆಡಳಿತದಲ್ಲೇ ರೋಮ್ ನಲ್ಲಿ ನಡೆದ ಸ್ಥಳೀಯ ದಂಗೆಯ ಸಂದರ್ಭವೊಂದರಲ್ಲಿ ಜಗದ್ಗುರು ಕಲಿಸ್ತಸ್ ರಕ್ತಸಾಕ್ಷಿಯಾದರು.

No comments:

Post a Comment