ಮೊದಲನೇ ವಾಚನ: ಫಿಲಿಪ್ಪಿಯರಿಗೆ 3:3-8
03.11.22
02.11.22 - "ಹೀಗೆ ಈ ದುರ್ಜನರು ನಿತ್ಯ ಶಿಕ್ಷೆಗೂ, ಆ ಸಜ್ಜನರು ನಿತ್ಯ ಜೀವಕ್ಕೂ ಹೋಗುವರು"
ಮೊದಲನೇ ವಾಚನ: ಜ್ಞಾನಗ್ರಂಥ 3:1-9
"ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು. ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಆರಸನು ತನ್ನ ಬಲಗಡೆಯಿರುವ ಜನರಿಗೆ, "ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ, ಲೋಕಾದಿಯಿಂದ ನಿಮಗಾಗಿ ಸಿದ್ಧ ಮಾಡಿದ ಸಾಮ್ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯಿರಿ. ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆ ಇಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ," ಎಂದು ಹೇಳುವನು. ಅದಕ್ಕೆ ಆ ಸಜ್ಜನರು "ಸ್ವಾಮಿಾ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು? ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು? ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?" ಎಂದು ಕೇಳುವರು. ಆಗ ಅರಸನು ಪ್ರತ್ಯುತ್ತರವಾಗಿ, "ಈ ನನ್ನ ಸಹೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ," ಎನ್ನುವನು. "ಆನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, "ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ," ಎಂದು ಹೇಳುವನು. ಅದಕ್ಕೆ ಅವರು ಕೂಡ, "ಸ್ವಾಮಿಾ, ತಾವು ಯಾವಾಗ ಹಸಿದಿದ್ದೀರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ, ಬಂಧಿಯಾಗಿದ್ದಿರಿ, ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ಎಂದು ಪ್ರಶ್ನಿಸುವರು. ಅದಕ್ಕೆ ಪ್ರತ್ಯುತ್ತರವಾಗಿ ಅರಸನು, "ಇವರಲ್ಲ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆ ಹೋದಾಗ ಅದನ್ನು ನನಗೇ ಮಾಡಲಿಲ್ಲ," ಎನ್ನುವನು. "ಹೀಗೆ ಈ ದುರ್ಜನರು ನಿತ್ಯ ಶಿಕ್ಷೆಗೂ, ಆ ಸಜ್ಜನರು ನಿತ್ಯ ಜೀವಕ್ಕೂ ಹೋಗುವರು," ಎಂದು ಹೇಳಿದರು ಸ್ವಾಮಿ.
01.11.22 - "ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು"
ಶ್ಲೋಕ: ಇಂಥವರೇ ದೇವರ ದರ್ಶನಾಭ್ಯರ್ಥಿಗಳು

31.10.22
30.10.22 - "ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ"
ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬುವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, "ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು," ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, "ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?" ಎಂದು ಗೊಣಗುಟ್ಟಿದರು. ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, "ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ," ಎಂದನು. ಆಗ ಯೇಸು, "ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೇ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ," ಎಂದು ಹೇಳಿದರು.
29.10.22 - "ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು"
ಮೊದಲನೇ ವಾಚನ: ಫಿಲಿಪ್ಪಿಯರಿಗೆ 1:18-26
ಸಹೋದರರೇ, ಶುಭಸಂದೇಶಪ್ರಚಾರಕರ ಉದ್ದೇಶ ಏನೇ ಆಗಿರಲಿ, ನನಗದು ಮುಖ್ಯವಲ್ಲ. ಕ್ರಿಸ್ತಯೇಸುವನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ. ಹೌದು, ನನಗದು ತುಂಬಾ ಸಂತೋಷದ ವಿಷಯ. ನಿಮ್ಮ ಪ್ರಾರ್ಥನಾ ಫಲದಿಂದಲೂ ಯೇಸುಕ್ರಿಸ್ತರು ಕೊಡುವ ಆತ್ಮದ ನೆರವಿನಿಂದಲೂ ನನಗೆ ಬಿಡುಗಡೆ ಖಚಿತವೆಂದು ಬಲ್ಲೆ. ನನ್ನ ಕರ್ತವ್ಯಪಾಲನೆಯಲ್ಲಿ ನಾಚುವಂಥ ಸಂದರ್ಭವು ನನಗೆಂದಿಗೂ ಬರದೆಂದು ಬಲ್ಲೆ; ನಾನು ಬದುಕಿದರೂ ಸರಿ, ಸತ್ತರೂ ಸರಿ; ನನ್ನ ದೇಹದ ಮೂಲಕ ಕ್ರಿಸ್ತಯೇಸುವಿಗೆ ಎಂದಿನಂತೆ ಈಗಲೂ ಮಹಿಮೆ ಉಂಟಾಗಬೇಕೆಂಬುದೇ ನನ್ನ ಉತ್ಕಟ ಆಕಾಂಕ್ಷೆ ಹಾಗೂ ನಿರೀಕ್ಷೆ. ನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ. ದೈಹಿಕವಾಗಿ ಬದುಕುವುದು ಫಲಪ್ರದವಾಗಿದ್ದರೆ, ನಾನು ಬದುಕುವುದು ಉತ್ತಮವೋ ಅಥವಾ ಸಾಯುವುದು ಸೂಕ್ತವೋ ನನಗೆ ತಿಳಿಯದು. ಉಭಯ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ, ಈ ಬದುಕನ್ನು ತೊರೆದು ಕ್ರಿಸ್ತಯೇಸುವಿನೊಡನೆ ಒಂದಾಗಿರಬೇಕೆಂಬುದೇ ನನ್ನ ಬಯಕೆ. ಇದು ಎಷ್ಟೋ ಮೇಲಾದುದು. ಮತ್ತೊಂದು ಕಡೆ, ನಿಮಗೋಸ್ಕರ ಇಹದಲ್ಲಿದ್ದು ಜೀವಿಸುವುದು ಅತ್ಯವಶ್ಯಕವಾಗಿದೆ. ಇದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಈ ಕಾರಣ, ನಾನು ಇಹದಲ್ಲಿ ಉಳಿಯುವೆನೆಂದು ಬಲ್ಲೆ. ನಿಮ್ಮೆಲ್ಲರೊಡನಿದ್ದು, ಕ್ರೈಸ್ತವಿಶ್ವಾಸದಲ್ಲಿ ನೀವು ವೃದ್ಧಿಯಾಗಿ ಆನಂದಿಸುವಂತೆ ನಿಮಗೆ ನೆರವಾಗುತ್ತೇನೆ. ನಿಮ್ಮಲ್ಲಿಗೆ ನಾನು ಮರಳಿಬಂದಾಗ ಕ್ರಿಸ್ತಯೇಸುವಿನಲ್ಲಿ ನೀವು ಹಿರಿಹಿಗ್ಗುವುದಕ್ಕೆ ಮಹದವಕಾಶ ದೊರಕುವುದು.
ಕೀರ್ತನೆ: 42:2, 3, 5
ಶ್ಲೋಕ: ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ
ಶುಭಸಂದೇಶ: ಲೂಕ 14:1, 7-11
28.10.22 - ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ ‘ಪ್ರೇಷಿತರು’ ಎಂದು ಹೆಸರಿಟ್ಚರು
ಮೊದಲನೇ ವಾಚನ: ಎಫೆಸಿಯರಿಗೆ 2:19-22
ಸಹೋದರರೇ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವಜನರೊಂದಿಗೆ ಸಹಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ. ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸುಕ್ರಿಸ್ತರೇ ಈ ತಳಹದಿಯ ಮುಖ್ಯಮೂಲೆಗಲ್ಲು. ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವಮಂದಿರ ಆಗುತ್ತದೆ. ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.
ಕೀರ್ತನೆ: 19:2-3, 4-5
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ.
ಶುಭಸಂದೇಶ: ಲೂಕ 6:12-16
ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ ‘ಪ್ರೇಷಿತರು’ ಎಂದು ಹೆಸರಿಟ್ಚರು. ಹೀಗೆ ಆಯ್ಕೆ ಆದವರು: ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೊಲೊಮಾಯ, ಮತ್ತಾಯ ಮತ್ತು ತೋಮ, ಅಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ.
27.10.22
18.10.22 - ಸಂತ ಸ್ಮರಣೆ - ಸಂತ ಲೂಕ - St.Luke
ಹೊಸ ಒಡಂಬಡಿಕೆಯ ಬಹುದೊಡ್ಡ ಭಾಗವನ್ನು ಬರೆದವನು ಸಂತ ಲೂಕ. "ನಮ್ಮ ಪ್ರಿಯ ವೈದ್ಯನಾದ ಲೂಕ ಎಂಬ ಸಂತ ಪೌಲನ ಮಾತಿನ ಮೂಲಕ ಲೂಕನ ಪರಿಚಯವಾಗುತ್ತದೆ.
(ಕೊಲೊಸ್ಸೆ 04:14). ಲೂಕ ಗ್ರೀಕ್ ಮೂಲದವ, ಅನ್ಯಮತಸ್ಥನಾಗಿದ್ದ ಎನ್ನಲಾಗಿದೆ. ಅಂತಿಯೋಕ್ಯ ಅವನ ಜನ್ಮಸ್ಥಳ ಎಂದೂ ಹೇಳಲಾಗಿದೆ. ಸಂತ ಪೌಲ ತನ್ನ ಎರಡನೇ ಧರ್ಮಪ್ರಸಾರ ಪ್ರಯಾಣದಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಈ ವೈದ್ಯನನ್ನು ಬೇಟಿಯಾದ. ಈ ಬೇಟಿಯ ನಂತರ ಲೂಕನನ್ನು 51ರಲ್ಲಿ ಟ್ರೊವಾಸ್ ಎಂಬ ಸ್ಥಳದಲ್ಲಿ ಕ್ರೈಸ್ತಧರ್ಮಕ್ಕೆ ಮಾನಸಾಂತ ರಿಸಿದ ಎಂಬ ನಂಬಿಕೆಯಿದೆ.
ಪ್ರೇಷಿತರ ಕಾರ್ಯಕಲಾಪಗಳಲ್ಲಿ ಉಲ್ಲೇಖವಾಗಿರುವ ಪೌಲನ ಎರಡನೇ ಧರ್ಮಪ್ರಸಾರ ಪ್ರಯಾಣದಲ್ಲಿ ಲೂಕನು ಅವನನ್ನು ಭೇಟಿಯಾಗಿ ಅವರೊಂದಿಗೆ ಫಿಲಿಪ್ಪಿಯಲ್ಲಿ ಕೆಲವು ವರ್ಷ ಇರುತ್ತಾನೆ. ಪೌಲ ಮೂರನೇ ಧರ್ಮಪ್ರಸಾರ ಪ್ರಯಾಣ ಆರಂಭಿಸಿದಾಗ ಅವರೊಂದಿಗೆ ಜೆರುಸಲೇಮಿಗೆ ಬಂದು ಸೆಜರೀಯದಲ್ಲಿ ಪೌಲ್ ಬಂಧನ ಕ್ಕೊಳಗಾದಾಗ ಅವನೊಂದಿಗೆ ಇರುತ್ತಾನೆ. ಈ ಎರಡು ವರ್ಷಗಳ ಕಾಲದಲ್ಲಿ, ಯೇಸುವನ್ನು ಕಂಡಿದ್ದ, ಅವರೊಂದಿಗೆ ಒಡನಾಡಿದ್ದ ಜನರನ್ನು ಕಂಡು, ಅವರನ್ನು ಸಂದರ್ಶಿಸಿ ಏಸುವಿನ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿರಬೇಕು. ಪೌಲ್ ರೋಮ್ ಗೆ ಬೆಳೆಸಿದ ಅಪಾಯಕಾರಿ ಪ್ರಯಾಣದಲ್ಲೂ ಲೂಕ ಅವನೊಂದಿಗೆ ಇರುತ್ತಾನೆ. ಕ್ರಿ.ಶ. 61 ರಲ್ಲಿ ಪೌಲ ರೋಮ್ನಲ್ಲಿ ಬಂಧಿತನಾದಾಗಲೂ ಎಲ್ಲರೂ ಪೌಲನನ್ನು ತೊರೆದಾಗ ಲೂಕ ಮಾತ್ರ ಅವನನ್ನು ಬಿಟ್ಟು ಹೋಗುವುದಿಲ್ಲ. "ಲೂಕ ಮಾತ್ರ ನನ್ನ ಜೊತೆಯಿದ್ದಾನೆ ಎಂದು ಪೌಲನೇ ಹೇಳುತ್ತಾನೆ" ಎಂದು ಪೌಲನೇ ಹೇಳುತ್ತಾನೆ. (2ತಿಮೋಥಿ4:11).
ಲೂಕ ಅನ್ಯಮತಸ್ಥನಾಗಿದ್ದರಿಂದಲೋ ಏನೋ ಅನ್ಯಜನರೊಂದಿಗೆ ದುಡಿದು ಪೌಲನನ್ನು ಸೇರಿಕೊಂಡಿರಬೇಕು. ತನ್ನ ಶುಭಸಂದೇಶವನ್ನು ಅನ್ಯಜನರಿಗೆ ಗ್ರೀಕ್ ಭಾಷೆಯಲ್ಲಿ ಉತ್ತಮ ಶೈಲಿ ಮತ್ತು ನಾಜೂಕಾದ ರೀತಿಯಲ್ಲಿ ಬರೆಯುತ್ತಾರೆ. ಈತ ಪೌಲನಿಂದ ಎಷ್ಟು ಪ್ರಭಾವಗೊಂಡಿದ್ದ ಎಂದರೆ ಸಂತ ಜೆರೋಂ ಮತ್ತು ಜಾನ್ ಕ್ರಿಸಾಸ್ಟಮ್ ಲೂಕನ ಶುಭ ಸಂದೇಶವನ್ನು 'ಸಂತ ಪೌಲರ ಶುಭ ಸಂದೇಶ' ಎಂದು ಕರೆಯುತ್ತಾರೆ.
ಲೂಕ ಶುಭ ಸಂದೇಶ ಬರೆಯುವಷ್ಟರಲ್ಲಿ ಮತ್ತಾಯ ಮತ್ತು ಮಾರ್ಕನ ಶುಭಸಂದೇಶ ಈಗಾಗಲೇ ಚಾಲ್ತಿಯಲ್ಲಿತ್ತು. ಹಲವು ಜನರ ಅನುಭವ, ಮಾತೆ ಮೇರಿಯದೇ ಅನುಭವ ಈ ಶುಭಸಂದೇಶದಲ್ಲಿದೆ ಎನ್ನಲಾಗಿದೆ. ಸಂತ ಲೂಕ ಮಾತೆ ಮೇರಿಯ ಭಾವಚಿತ್ರ ಚಿತ್ರಸಿದ್ದ ಎಂಬ ಪ್ರತೀತಿಯೂ ಇದೆ. ಲೂಕನ ಈ ವಿಶಿಷ್ಟ ಬರವಣಿಗೆ ಮತ್ತು ಅನುಭವವನ್ನು ಅವನ ಶುಭಸಂದೇಶದಲ್ಲಿಯೇ ಕಾಣಬಹುದು.
ಲೂಕನ ಶುಭ ಸಂದೇಶದಲ್ಲಿ ಹೆಚ್ಚುವರಿಯಾಗಿ ಆರು ಪವಾಡಗಳು ಮತ್ತು 15 ಸಾಮತಿಗಳ ಉಲ್ಲೇಖವಿದೆ. ಬಡವರು ಮತ್ತು ಸಾಮಾಜಿಕ ಕಾಳಜಿ ಯಿರುವ ಲೂಕನಲ್ಲಿ ಲಾಜರ್ ಮತ್ತು ಶ್ರೀಮಂತನ ಕಥೆ ಬರುತ್ತದೆ. ದೇವ ಮಾತೆಯ ಸಾಮಾಜಿಕ ನ್ಯಾಯದ 'ಸ್ತುತಿಗೀತೆ' ಬರುತ್ತದೆ. ಲೂಕ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಇದ್ದುದ್ದರಿಂದ ಮಾತೆಮೇರಿ,ಎಲಿಜಬೆತ್
ಇವರ ಉಲ್ಲೇಖವಿದೆ. 'ನಮೋ ಮರಿಯಾ ವರಪ್ರಸಾದ ಪೂರ್ಣೆ' ಎಂಬ ಘೋಷಣೆ ಇದೆ. ದೇವರ ಕ್ಷಮೆ ಮತ್ತು ಪ್ರೀತಿಯ ಬಗ್ಗೆ ಲೂಕನದು ಅಪಾರ ನಂಬಿಕೆ. ಇಲ್ಲಿ ದುಂದುಗಾರ ಮಗನ ಬಗ್ಗೆ ಬರುತ್ತದೆ. ಸಿಮೋನ್ ಮನೆಯಲ್ಲಿ ಯೇಸುವಿನ ಪಾದ ಅಂಭ್ಯಂಜಿಸಿದ ಮಹಿಳೆಯ ಬಗ್ಗೆ ಬರೆಯುತ್ತಾರೆ.
ಲೂಕನ ಮರಣದ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಇಲ್ಲ. ಪೌಲನು ಸಾವಿನ ನಂತರ ಲೂಕ ಏನು ಮಾಡಿದ, ಎಲ್ಲಿದ್ದ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೆಲವು ಬರಹಗಾರರು, ಲೂಕ ಕೂಡ ರಕ್ತಸಾಕ್ಷಿಯಾದ ಎಂದರೆ, ಇನ್ನೂ ಕೆಲವರು ಆತ ಗ್ರೀಸ್ ನಲ್ಲಿ ಗಾ ಪ್ರದೇಶದಲ್ಲಿ ಬೋಧಿಸಿದ ಎನ್ನುತ್ತಾರೆ. ಮೊದಲ ಪರಂಪರೆಯ ಪ್ರಕಾರ ಲೂಕ ಗ್ರೀಸ್ ನಲ್ಲಿದ್ದು ತನ್ನ ಶುಭಸಂದೇಶ ಬರೆದ ನಂತರ 84ರಲ್ಲಿ ತೀರಿಕೊಂಡ. ಇನ್ನೊಂದು ಪರಂಪರೆಯ ಪ್ರಕಾರ ಲೂಕ ಡಾಲ್ ಮೇಷಿಯಾದಲ್ಲಿ (ಯುಗೋಸ್ಲಾವಿಯಾ) ಬೋಧನೆ ಮಾಡಿದ ನಂತರ ಗ್ರೀಸ್ನಲ್ಲಿ ರಕ್ತ ಸಾಕ್ಷಿಯಾದ. ಅವನ ಅವಶೇಷಗಳನ್ನು 360ರಲ್ಲಿ ಕಾನ್ಸ್ಟಾಂಟಿನೋಪಲ್ ಗೆ ತರಲಾಯಿತು.
ಲೂಕನ ಚಿತ್ರ ಒಂದು ಎತ್ತು ಮತ್ತು ಕರುವಿನ ಜೊತೆಗೂಡಿ ಇರುತ್ತದೆ. ಕ್ರಿಸ್ತ ಬಲಿಯರ್ಪಣೆಯಾದ ಸಂಕೇತವಿದು. ಲೂಕ ವೈದ್ಯರುಗಳ ಪಾಲಕ.
17.10.22 - ಸಂತ ಸ್ಮರಣೆ - ಅಂತಿಯೋಕ್ಯದ ಸಂತ ಇಗ್ನೇಷಿಯಸ್ - St. Ignatius of Antioch
ಪ್ರಥಮ ಧರ್ಮಸಭೆಯ ಪ್ರೇಷಿತ, ಪ್ರೇಷಿತರ ಸಮಕಾಲೀನ ಮತ್ತು ಉತ್ತರಾಧಿಕಾರಿ, ಶುಭಸಂದೇಶ ಕರ್ತೃ ಯೊವಾನ್ನನ ಶಿಷ್ಯನಾಗಿದ್ದ ಅಂತಿಯೋಕ್ಯದ ಸಂತ ಇಗ್ನೇಷಿಯಸ್ ಹುಟ್ಟಿದ್ದು ಬೆಳೆದದ್ದು ಸಿರಿಯಾ ದೇಶದಲ್ಲಿ. ಜೆರುಸಲೇಮಿನಿಂದ ಪ್ರಭುವಿನ ಶುಭಸಂದೇಶ ಮೊದಲು ತಲುಪಿದ್ದು ಅಂತಿಯೋಕ್ಯಕ್ಕೆ. ರೋಮ್ ಕ್ರೈಸ್ತಧರ್ಮದ ಕೇಂದ್ರವಾಗುವ ಮೊದಲು ಮತ್ತು ನಂತರವೂ ಅಂತಿಯೋಕ್ಯ ಪ್ರಮುಖ ಕೇಂದ್ರವಾಗಿತ್ತು. ಈ ಅಂತಿಯೋಕ್ಯದ ಮೂರನೇ ಧರ್ಮಧ್ಯಕ್ಷರಾಗಿ ಸಂತ ಇಗ್ನೇಷಿಯಸ್ ನೇಮಿಸಲ್ಪಟ್ಟಿದ್ದರು. ಕ್ರಿ.ಶ. 69ರಲ್ಲಿ ಪ್ರೇಷಿತ ಜಗದ್ಗುರು ಪೇತ್ರರೇ ಇವರಿಗೆ ಧರ್ಮಾಧ್ಯಕ್ಷ ದೀಕ್ಷೆ ನೀಡಿದ್ದರು.
ಕ್ರಿ.ಶ. 94ರಿಂದ 96ರ ತನಕ ಚಕ್ರವರ್ತಿ ಡೊಮಿಷಿಯನ್ ಕ್ರೈಸ್ತರಿಗೆ ಚಿತ್ರಹಿಂಸೆ ನೀಡಲಾರಂಭಿಸಿದ. ಆಗಷ್ಟೇ ಕ್ರೈಸ್ತರಾಗಿ ವಿಶ್ವಾಸದಲ್ಲಿ ಬೇರೂರುತ್ತಿದ್ದ ಕ್ರೈಸ್ತರು ಛಿದ್ರಗೊಳ್ಳಲಾರಂಭಿಸಿದರು. ಈ ಸಂದರ್ಭದಲ್ಲಿ ಸಂತ ಇಗ್ನೇಷಿಯಸ್ ಅವರಿಗೆ ಸಾಂತ್ವನ ನೀಡುತ್ತಾ, ಧೈರ್ಯ ಮತ್ತು ಭರವಸೆಯನ್ನು ತುಂಬಿ ಅವರನ್ನು ಮುನ್ನಡೆಸಿದರು. ಪ್ರಾಣ ಹೋದರೂ ಧರ್ಮಬಿಡಬಾರದೆಂಬುದು ಅವರ ನಂಬಿಕೆಯಾಗಿತ್ತು. ಇವರ ಧೈರ್ಯ ಮತ್ತು ಕ್ರೈಸ್ತರ ಒಗ್ಗಟ್ಟಿನಿಂದ ಕೆಲಕಾಲ ಹಿಂಸೆ ನಿಂತು ಶಾಂತಿ ನೆಲೆಸಿತ್ತು.
ಚಕ್ರವರ್ತಿ ಟ್ರಾಜನ್ ಅಧಿಕಾರಕ್ಕೆ ಬಂದ ಕೂಡಲೇ ಕ್ರಿ.ಶ. 98ರಲ್ಲಿ ಮತ್ತೆ ಕ್ರೈಸ್ತರ ಚಿತ್ರಹಿಂಸೆ ಪ್ರಾರಂಭವಾಯಿತು. ಮತ್ತೆ ಸಂತ ಇಗ್ನೇಷಿಯಸ್ ರ ಮೇಷ ಪಾಲಕ ಕರ್ತವ್ಯಗಳು ಚುರುಕುಗೊಂಡವು. ಜನರಲ್ಲಿ ಹುಮ್ಮಸ್ಸು ತುಂಬುತ್ತಾ ಕ್ರೈಸ್ತ ಸಮುದಾಯದ ಒಗ್ಗಟ್ಟು ಕಾಯ್ದುಕೊಳ್ಳುವ ಕೆಲಸದಲ್ಲಿ ಸಂಪೂರ್ಣ ನಿರತರಾಗಿ ಹೋದರು. ಈ ಜನರಲ್ಲಿ ದೈವ ವಿಶ್ವಾಸ ತುಂಬುತ್ತಾ ಅವರು ಹೇಳಿದ್ದೇನೆಂದರೆ: "ಒಬ್ಬ ಕ್ರೈಸ್ತ ತನಗಾಗಿ ಮಾತ್ರ ಜೀವಿಸುವುದಿಲ್ಲ, ಆತ ದೇವರಿಗೆ ಸೇರಿದವನಾಗಿ ಬಾಳುತ್ತಾನೆ."
ಈ ಚಿತ್ರಹಿಂಸೆ ಹೀಗೆ ಮುಂದುವರೆದ ಸಂದರ್ಭದಲ್ಲಿ ಚಕ್ರವರ್ತಿಯ ಒಂದು ಆಜ್ಞೆಯನ್ನು ಕ್ರೈಸ್ತರು ಧಿಕ್ಕರಿಸಬೇಕೆಂದು ಧರ್ಮಾಧ್ಯಕ್ಷರು ಆದೇಶಿಸುತ್ತಾರೆ. ಇದರಿಂದ ಕುಪಿತರಾದ ಆಡಳಿತವರ್ಗ ಧರ್ಮಧ್ಯಕ್ಷರನ್ನು ಬಂಧಿಸಿ, ಆಗ ಅಂತಿಯೋಕ್ಯಕ್ಕೆ ಬಂದಿದ್ದ ಚಕ್ರವರ್ತಿ ಟ್ರಾಜನ್ ಬಳಿ ಕರೆದೊಯ್ಯುತ್ತಾರೆ. ಯಾವುದೇ ಭಯ ಭೀತಿ ಇಲ್ಲದ ಇಗ್ನೇಶಿಯಸ್ ಅರಸನ ತುಚ್ಛ ಮತ್ತೊಂದಕ್ಕೆ ಉತ್ತರಿಸುತ್ತಾ ಹೀಗೆನ್ನುತ್ತಾರೆ: "ಕ್ಷುದ್ರ ಮನುಷ್ಯ ಎಂದು ಎಂದಿಗೂ ನನ್ನ ಕರೆಯಬೇಡಿ, ಯಾಕೆಂದರೆ ನನ್ನೊಳಗೆ ದೇವರಿದ್ದಾರೆ." ಇವರ ದಿಟ್ಟ ಉತ್ತರ, ಅಂಜಿಕೆಯಿಲ್ಲದ ಮಾತನ್ನು ಕೇಳಿಸಿಕೊಂಡ ಟ್ರಾಜನ್ ಇವರನ್ನು ರೋಮ್ ಗೆ ಕೊಂಡೊಯ್ದು ಕೊಲೆಸ್ಸಿಯಮ್ ನಲ್ಲಿ ಹುಲಿ ಸಿಂಹಗಳ ಬಾಯಿಗೆ ಹಾಕಿರಿ ಎಂದು ಆಜ್ಞಾಪಿಸುತ್ತಾನೆ.
62ನೇ ವಯಸ್ಸಿನಲ್ಲಿ ಇಗ್ನೇಷಿಯಸ್ ರನ್ನು ದೂರದ ರೋಮ್ ಗೆ ಕೊಂಡೊಯ್ಯಲಾಗುತ್ತದೆ. ದೀರ್ಘ ಪ್ರಯಾಣ, ದಿನಗಟ್ಟಲೆ ನಡೆ ಸಂತ ಇಗ್ನೇಷಿಯಸ್ ರಿಗೆ ಸೌಭಾಗ್ಯವಾಗಿ ಮಾರ್ಪಡುತ್ತದೆ. ದಾರಿಯುದ್ದಕ್ಕೂ ನೂರಾರು ಊರು ಮತ್ತು ಹಳ್ಳಿಗಳಿಂದ ಕ್ರೈಸ್ತರು ಬಂದು ಧರ್ಮಧ್ಯಕ್ಷರನ್ನು ಕಾಣುತ್ತಾರೆ. ಏಷಿಯಾ ಮೈನರ್, ಉತ್ತರ ಗ್ರೀಸ್ ಪ್ರದೇಶಗಳ ಊರೂರೇ ದಾರಿಯಲ್ಲಿ ಸೇರಿಕೊಳ್ಳುತ್ತದೆ. ದೂರದ ಊರುಗಳಿಂದ ಕ್ರೈಸ್ತ ಧರ್ಮ ಸಭೆಗಳು ಇವರಿಗೆ ವಂದನೆ ಸಲ್ಲಿಸಲು, ಸಾಂತ್ವನ ಹೇಳಿ ಕ್ರೈಸ್ತ ವಿಶ್ವಾಸ ಪ್ರಕಟಿಸಲು ಪ್ರತಿನಿಧಿಗಳನ್ನು ಕಳಿಸಿಕೊಡುತ್ತದೆ. ಸ್ಮರ್ನಾ ಎಂಬ ಊರಿನಲ್ಲಿ ಸಂತ ಪೋಲಿಕಾಪ್೯ ಇವರನ್ನು ಭೇಟಿ ಯಾಗುತ್ತಾರೆ. ಹೀಗೆ ಇದೊಂದು ಬಂಧಿಯೊಬ್ಬನ ಪ್ರಯಾಣ ಆಗುವುದಿಲ್ಲ, ಕ್ರಿಸ್ತನ ಶುಭಸಂದೇಶ ಪ್ರಸಾರದ ಪ್ರಯಾಣವಾಗುತ್ತದೆ.
ಈ ಪ್ರಯಾಣದಲ್ಲಿ ಸಂತ ಇಗ್ನೇಷಿಯಸ್ ಬರೆದ 7 ಪತ್ರಗಳು ಪ್ರಸಿದ್ಧವಾಗಿವೆ. ಏಷಿಯಾ ಮೈನರ್ ಗೆ ಬರೆದ 5 ಪತ್ರಗಳು ಅಲ್ಲಿನ ಕ್ರೈಸ್ತ ಭಕ್ತರನ್ನು ಉದ್ದೇಶಿಸಿ ಬರೆದ ಪಾಲನಾ ಪತ್ರಗಳಾಗಿವೆ. ಕ್ರೈಸ್ತರು ತಾವು ನಂಬಿದ್ದ ದೇವರಿಗೆ ಮತ್ತು ಆತ ಕಳುಹಿಸಿದ ಪ್ರತಿನಿಧಿಗಳಿಗೆ ತೋರಿಸಬೇಕಾದ ನಿಷ್ಠೆಯ ಬಗ್ಗೆ ಬರೆಯುತ್ತಾರೆ. ಆರನೆಯ ಪತ್ರ ಮತ್ತು ಏಳನೆಯ ಪತ್ರ ರೋಮ್ ನಲ್ಲಿರುವ ಕ್ರೈಸ್ತರಿಗೆ ಬರೆಯಲ್ಪಟ್ಟಿದ್ದು. ಯಾವುದೇ ಕಾರಣಕ್ಕೂ ತಾವು ರಕ್ತಸಾಕ್ಷಿ ಯಾಗುವುದನ್ನು ತಪ್ಪಿಸಿ, ಬಿಡುಗಡೆ ಮಾಡಿಸಲು ಪ್ರಯತ್ನಿಸಬಾರದು ಎಂದು ಮನವಿ ಮಾಡಿದ ಪತ್ರ ಇದು.
ಧರ್ಮ ಮತ್ತು ವಿಶ್ವಾಸಕ್ಕಾಗಿ ಹುತಾತ್ಮರಾಗಲು ಸಂತ ಇಗ್ನೇಷಿಯಸ್ ಸಿದ್ಧರಾಗುತ್ತಾರೆ. 'ತಾನು ದೇವರ ಗೋಧಿ ಕಾಳಾಗಿದ್ದು, ಕಾಡು ಪ್ರಾಣಿಗಳ ಹಲ್ಲುಗಳಿಂದ ಅರೆಯಲ್ಪಟ್ಟು, ಯೇಸುವಿನ ಪೂಜ್ಯ ರೊಟ್ಟಿ ಯಾಗುವುದು' ತನ್ನ ಬಯಕೆಯೆಂದು ಹೇಳುತ್ತಾರೆ. ಸಂತ ಇಗ್ನೇಷಿಯಸ್ ರ ಹಬ್ಬದ ಪರಮ ಪ್ರಸಾದ ಪ್ರಾರ್ಥನೆಯಲ್ಲಿ ಅವರ ಈ ಮಾತಿದೆ. ಕೊನೆಗೆ ಮ್ಯಾಕ್ಸಿಮಸ್ ಸರ್ಕಸ್ ನಲ್ಲಿ ಎರಡು ಸಿಂಹಗಳ ಬಾಯಿಗೆ ತಳ್ಳಲ್ಪಟ್ಟು 🕯️ಸಂತ ಇಗ್ನೇಷಿಯಸ್ ಆಹಾರವಾಗುತ್ತಾರೆ. ಅವರ ಶಿಷ್ಯರು ಅವರ ಅಳಿದುಳಿದ ದೇಹದ ಭಾಗಗಳನ್ನು ತಂದು ಸಮಾಧಿ ಮಾಡುತ್ತಾರೆ. ಗಂಟಲು ಬೇನೆಯುಳ್ಳವರು ಸಂತ ಇಗ್ನೇಷಿಯಸರ ಬಳಿ ಪ್ರಾರ್ಥನೆ ಮಾಡುತ್ತಾರೆ.
26.10.22
25.10.22 - “ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ಯಾವುದಕ್ಕೆ ಹೋಲಿಸಲಿ?"
ಮೊದಲನೇ ವಾಚನ: ಎಫೆಸಿಯರಿಗೆ 5:21-33
ಕೀರ್ತನೆ: 128:1-2, 3, 4-5
ಶ್ಲೋಕ: ಹೊಂದುವನು ಆಶೀರ್ವಾದವನು, ಪ್ರಭುವಿನಲಿ ಭಯಭಕ್ತಿಯುಳ್ಳವನು.
ಶುಭಸಂದೇಶ: ಲೂಕ 13:18-21
ಆಗ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ಯಾವುದಕ್ಕೆ ಹೋಲಿಸಲಿ? ಅದು ಒಂದು ಸಾಸಿವೆಕಾಳಿನಂತೆ ಇದೆ. ಒಬ್ಬನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರವಾಯಿತು. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಮಾಡತೊಡಗಿದವು,” ಎಂದರು. ಪುನಃ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ? ಅದು ಹುಳಿಹಿಟ್ಟಿನಂತೆ ಇದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
24.10.22 - “ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ,”
ಮೊದಲನೇ ವಾಚನ: ಎಫೆಸಿಯರಿಗೆ 4:32--5:8
ಕೀರ್ತನೆ: 1:1-2, 3, 4, 6
ಶ್ಲೋಕ: ಪ್ರಭುವಿನಲ್ಲೇ ಭರವಸೆ ಇತ್ತು ನಡೆವಾತನು ಧನ್ಯನು.
ಶುಭಸಂದೇಶ: ಲೂಕ 13:10-17
ಒಂದು ಸಬ್ಬತ್‍ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರದಲ್ಲಿ ಬೋಧಿಸುತ್ತಿದ್ದರು. ಹದಿನೆಂಟು ವರ್ಷಗಳಿಂದ ದೆವ್ವಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಆಕೆ ಒಬ್ಬ ಗೂನಿ; ನೆಟ್ಟಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, “ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ,” ಎಂದು ಹೇಳಿ, ಆಕೆಯ ಮೇಲೆ ತಮ್ಮ ಹಸ್ತಗಳನ್ನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು. ಯೇಸು ಸಬ್ಬತ್‍ದಿನದಲ್ಲಿ ಗುಣಮಾಡಿದ್ದನ್ನು ಕಂಡು, ಪ್ರಾರ್ಥನಾಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ, “ಕೆಲಸ ಮಾಡಲು ಆರು ದಿನಗಳಿವೆ, ಆ ದಿನಗಳಲ್ಲಿ ಬಂದು ಗುಣಮಾಡಿಸಿಕೊಳ್ಳಿರಿ; ಸಬ್ಬತ್‍ದಿನದಲ್ಲಿ ಮಾತ್ರ ಕೂಡದು,” ಎಂದನು. ಪ್ರಭು, ಅವನಿಗೆ ಪ್ರತ್ಯುತ್ತರವಾಗಿ, “ಕಪಟಿಗಳೇ, ಸಬ್ಬತ್‍ದಿನ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೆ? ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು; ಈ ಕಟ್ಟಿನಿಂದ ಈಕೆಯನ್ನು ಸಬ್ಬತ್‍ದಿನ ಬಿಡಿಸಬಾರದಿತ್ತೆ?” ಎಂದರು. ಈ ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷಪಟ್ಟಿತು.
23.10.22
22.10.22 - "ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ"
ಮೊದಲನೇ ವಾಚನ: ಎಫೆಸಿಯರಿಗೆ 4:7-16
ಸಹೋದರರೇ, ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ. ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ: “ಆತನು ಉನ್ನತಿಗೇರಿದನು ಶತ್ರುಗಳನು ಸೆರೆಯಾಳಾಗಿ ಕೊಂಡೊಯ್ದನು ನರಮಾನವರಿಗಿತ್ತನು ವರದಾನಗಳನು.” ‘ಏರಿದನು’ ಎನ್ನುವುದರ ಅರ್ಥವಾದರೂ ಏನು? ಆತನು ಮೊದಲು ಭೂಗರ್ಭಕ್ಕೂ ಇಳಿದಿದ್ದನು ಎಂಬ ಅರ್ಥವನ್ನೂ ಒಳಗೊಂಡಿದೆ. ಇಳಿದು ಬಂದಿದ್ದಾತನೇ ಲೋಕಗಳಿಗೆಲ್ಲ ಮೇಲೇರಿಹೋಗಿದ್ದಾನೆ. ತನ್ನ ಪ್ರಸನ್ನತೆಯಿಂದ ಇಡೀ ಜಗತ್ತನ್ನೇ ಆವರಿಸಿದ್ದಾನೆ. ಈ ವ್ಯಕ್ತಿ ನರಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು. ದೇವಜನರನ್ನು ಪರಿಣಿತರನ್ನಾಗಿಸಿ ದೇವರ ಸೇವೆಗೆ ಸಿದ್ಧಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು. ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತಯೇಸುವಿನ ಪರಿಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ. ಇನ್ನು ಮೇಲೆ ನಾವು ಸಣ್ಣ ಮಕ್ಕಳಂತೆ ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಪಟ್ಟು ಅತ್ತಿತ್ತ ಅಲೆದಾಡುವುದಿಲ್ಲ. ಗಾಳಿ ಬಂದಂತೆ ತೂರಾಡುವುದಿಲ್ಲ. ಬದಲಾಗಿ, ಪ್ರೀತಿಯಿಂದ ಸತ್ಯವನ್ನೇ ನುಡಿಯುತ್ತೇವೆ. ಶಿರಸ್ಸಾದ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಸರ್ವತೋಮುಖವಾಗಿ ಬೆಳೆಯುತ್ತೇವೆ. ಇಡೀ ದೇಹವು ಕ್ರಿಸ್ತಯೇಸುವನ್ನೇ ಆಧರಿಸಿದೆ. ಅವರಲ್ಲಿಯೇ ಎಲ್ಲ ನರನಾಡಿಗಳು, ಕೀಲುಗಂಟು಼ಗಳು ಒಂದಾಗಿ ಕೆಲಸಮಾಡುತ್ತವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸೂಕ್ತರೀತಿಯಲ್ಲಿ ನಿರ್ವಹಿಸುವುದರಿಂದ ಇಡೀ ದೇಹ ಬೆಳೆಯುತ್ತಾ, ಪ್ರೀತಿಯಲ್ಲಿ ಪ್ರವರ್ಧಿಸುತ್ತಾ ಕ್ಷೇಮಾಭಿವೃದ್ಧಿಯನ್ನು ಪಡೆಯುತ್ತದೆ.
ಕೀರ್ತನೆ: 122:1-2, 3-4, 4-5
ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದು ಜಾನರೆನ್ನ ಕರೆದಾಗ ಆಯಿತೆನಗೆ ಆನಂದ.
ಶುಭಸಂದೇಶ: ಲೂಕ 13:1-9
ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು. ಅದಕ್ಕೆ ಯೇಸು, “ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ? ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ. ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸಿತ್ತೀರೋ? ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ,” ಎಂದರು. ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಬ್ಬನು ತನ್ನ ದ್ರಾಕ್ಷಿತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ. ತೋಟಗಾರನನ್ನು ಕರೆದು, ‘ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ. ಇನ್ನು ಇದನ್ನು ಕಡಿದುಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?’ ಎಂದು ಹೇಳಿದ. ಅದಕ್ಕೆ ತೋಟಗಾರನು, ‘ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿ ತೆಗೆದು ಗೊಬ್ಬರ ಹಾಕುತ್ತೇನೆ. ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ,’ ಎಂದನು.”
21.10.22 - “ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು?"
ಮೊದಲನೇ ವಾಚನ: ಎಫೆಸಿಯರಿಗೆ 4:1-6
ಕೀರ್ತನೆ: 24:1-2, 3-4, 5-6
ಶ್ಲೋಕ: ಇಂಥವರೇ ದೇವರ ದರ್ಶನಾಭ್ಯರ್ಥಿಗಳು
ಶುಭಸಂದೇಶ: ಲೂಕ 12:54-59
20.10.22 - “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ.
ಮೊದಲನೇ ವಾಚನ: ಎಫೆಸಿಯರಿಗೆ 3:14-21
ಸಹೋದರರೇ, ಈ ಕಾರಣ ನಾನು ಮೊಣಕಾಲೂರಿ ಪಿತನಲ್ಲಿ ಪ್ರಾರ್ಥಿಸುತ್ತೇನೆ: ಸ್ವರ್ಗಲೋಕದಲ್ಲೂ ಭೂಲೋಕದಲ್ಲೂ ಪ್ರತಿ ಕುಟುಂಬವು ತನ್ನ ಹೆಸರನ್ನು ಪಡೆದಿರುವುದು ಅವರಿಂದಲೇ. ಅವರು ತಮ್ಮ ಮಹಿಮೆಯ ಸಂಪನ್ಮೂಲಗಳಿಂದ ಪವಿತ್ರಾತ್ಮ ಅವರ ಮುಖಾಂತರ ನಿಮ್ಮ ಅಂತರಂಗವನ್ನು ಬಲಗೊಳಿಸಲಿ; ನಿಮ್ಮ ವಿಶ್ವಾಸದ ಫಲವಾಗಿ, ಯೇಸುಕ್ರಿಸ್ತರು ನಿಮ್ಮ ಹೃದಯಗಳಲ್ಲಿ ಸದಾ ವಾಸಿಸಲಿ ಮತ್ತು ನಿಮ್ಮ ಜೀವನವು ಪ್ರೀತಿಯಲ್ಲಿ ಬೇರೂರಿ ಸದೃಢವಾಗಿ ನಿಲ್ಲಲಿ. ಹೀಗೆ ದೇವಜನರೆಲ್ಲರೊಡನೆ, ಕ್ರಿಸ್ತಯೇಸುವಿನ ಅಗಾಧ ಪ್ರೀತಿಯ ಉದ್ದ-ಅಗಲ, ಆಳ-ಎತ್ತರ ಎಷ್ಟೆಂಬುದನ್ನು ನೀವು ಗ್ರಹಿಸಿಕೊಳ್ಳುವಂತಾಗಲಿ. ಹೌದು, ಜ್ಞಾನವನ್ನು ಮೀರಿದ ಈ ಪ್ರೀತಿಯನ್ನು ಅರಿತುಕೊಳ್ಳಲು ಆಸಕ್ತರಾಗಬೇಕು, ದೇವರ ಪರಿಪೂರ್ಣತೆಯಿಂದ ತುಂಬಿದವರಾಗಬೇಕು ಎಂದು ನಾನು ಬೇಡಿಕೊಳ್ಳುತ್ತೇನೆ. ನಮ್ಮಲ್ಲಿ ಕಾರ್ಯಸಾಧಿಸುವ ಹಾಗೂ ನಮ್ಮ ಆಶೆ-ಆಕಾಂಕ್ಷೆಗಿಂತಲೂ ಬೇಡಿಕೆ-ಕೋರಿಕೆಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರು. ಅವರಿಗೆ ಧರ್ಮಸಭೆಯಲ್ಲೂ ಕ್ರಿಸ್ತಯೇಸುವಿನಲ್ಲೂ ಯುಗಯುಗಾಂತರಕ್ಕೂ ತಲತಲಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್!
ಕೀರ್ತನೆ: 33:1-2, 4-5, 11-12, 18-19
ಶ್ಲೋಕ: ಪ್ರಭು ಅಚಲ ಪ್ರೀತಿಯಿಂದ ಜಗವನು ತುಂಬಿಹನು
ಶುಭಸಂದೇಶ: ಲೂಕ 12:49-53
ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು. ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು.
19.10.22 - "ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು"
ಮೊದಲನೇ ವಾಚನ: ಎಫೆಸಿಯರಿಗೆ 3:2-12
ಸಹೋದರರೇ, ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ. ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. ಅದನ್ನು ಲಕ್ಷ್ಯವಿಟ್ಟು ಓದಿದರೆ, ಆಗ ಯೇಸುಕ್ರಿಸ್ತರ ರಹಸ್ಯವನ್ನು ಎಷ್ಟರಮಟ್ಟಿಗೆ ನಾನು ಮನಗಂಡಿದ್ದೇನೆ ಎಂದು ನಿಮಗೇ ತಿಳಿಯುತ್ತದೆ. ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ ಮುಖಾಂತರ ಪೂಜ್ಯಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ. ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೊಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು ಇದೇ ಆ ರಹಸ್ಯ. ಈ ಶುಭಸಂದೇಶಕ್ಕೆ ದಾಸನನ್ನಾಗಿ ದೇವರು ನನ್ನನ್ನು ನೇಮಿಸಿದ್ದಾರೆ. ತಮ್ಮ ಪ್ರಭಾವಮಯ ಶಕ್ತಿಯಿಂದ ಈ ವಿಶೇಷ ವರವನ್ನು ಉಚಿತವಾಗಿ ನನಗೆ ದಯಪಾಲಿಸಿದ್ದಾರೆ. ದೇವಜನರಲ್ಲೆಲ್ಲ ನಾನು ಅತ್ಯಲ್ಪನು. ಆದರೂ ಯೇಸುಕ್ರಿಸ್ತರ ಅಪರಿಮಿತ ಆಧ್ಯಾತ್ಮಿಕ ಸಿರಿಸಂಪತ್ತಿನ ಬಗ್ಗೆ ಅನ್ಯಜನರಿಗೆ ಪ್ರಬೋಧಿಸುವ ಸೌಭಾಗ್ಯ ನನ್ನದಾಯಿತು. ಸಮಸ್ತವನ್ನು ಸೃಷ್ಟಿಸಿದ ದೇವರು ಆದಿಯಿಂದಲೂ ಗುಪ್ತವಾಗಿಟ್ಟಿದ್ದ ತಮ್ಮ ಯೋಜನೆಯನ್ನು ಈಡೇರಿಸುವ ವಿಧಾನವನ್ನು ಸರ್ವಜನರಿಗೆ ತಿಳಿಯಪಡಿಸುವುದಕ್ಕಾಗಿ ನನ್ನನ್ನು ಆರಿಸಿಕೊಂಡಿರುವರು. ಹೀಗೆ ಧರ್ಮಸಭೆಯ ಮೂಲಕ ದೇವರ ಬಹುರೂಪದ ಜ್ಞಾನವು ಅಶರೀರ ಶಕ್ತಿಗಳ ಅಧಿಕಾರಿಗಳಿಗೂ ಅಧಿಪತಿಗಳಿಗೂ ಈಗಿನ ಕಾಲದಲ್ಲಿ ತಿಳಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು. ತಮ್ಮ ಪೂರ್ವಸಂಕಲ್ಪದಂತೆಯೇ ಇದನ್ನು ದೇವರು ನಮ್ಮ ಪ್ರಭುವಾದ ಯೇಸುಕ್ರಿಸ್ತರಲ್ಲಿ ಕಾರ್ಯಗತಗೊಳಿಸಿದರು. ಯೇಸುಕ್ರಿಸ್ತರಲ್ಲಿ ನಾವಿಟ್ಟಿರುವ ವಿಶ್ವಾಸದ ಮೂಲಕ ಅವರಲ್ಲಿ ಒಂದಾಗಿ, ದೇವರ ಸಾನ್ನಿಧ್ಯವನ್ನು ಸೇರುವ ಧೈರ್ಯ ಹಾಗೂ ಭರವಸೆ ನಮಗಿದೆ.
ಯೆಶಾಯ: 12:2-3, 4, 5-6
ಶ್ಲೋಕ: ಉದ್ಧರಿಸುವ ಒರತೆಗಳಿಂದ ಸೇದುವಿರಿ ನೀರನು ಹರುಷದಿಂದ.
ಶುಭಸಂದೇಶ: ಲೂಕ 12:39-48
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ. ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು. ಆಗ ಪೇತ್ರನು, “ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ” ಎಂದು ಕೇಳಿದನು. ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ. ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. “ಆದರೆ ಆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ,’ ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು. “ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು."
18.10.22
ಆ ಕಾಲದಲ್ಲಿ ಯೇಸು ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, " ಬೆಳೆಯೇನೋ ಹೇರಳವಾಗಿದೆ, ಕೊಯ್ಲುಗಾರರೋ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ' ಮನೆಗೆ ಶಾಂತಿ, ' ಎಂದು ಆಶೀರ್ವಾದ ಮಾಡಿ, ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ' ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ, ' ಎಂದು ತಿಳಿಸಿರಿ.
17.10.22 - "ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?"
ಮೊದಲನೇ ವಾಚನ: ಎಫೆಸಿಯರಿಗೆ 2:1-10
ಕೀರ್ತನೆ: 100:2, 3, 4, 5
ಶ್ಲೋಕ: ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು.
ಶುಭಸಂದೇಶ: ಲೂಕ 12:13-21
16.10.22
14.10.22 - ಸಂತ ಸಂತ ಒಂದನೇ ಕಲಿಸ್ತಸ್ St.Callistus🙏
ಸಂತ ಕಲಿಸ್ತಸ್ ಅತಿ ರೋಚಕ ಸಂತ. ಅವರ ಬದುಕಿನದು ವಿಚಿತ್ರ ತಿರುವು ಮತ್ತು ಬೆಳವಣಿಗೆ. ಬಹುಶಃ ಒಬ್ಬ ಗುಲಾಮ ಮತ್ತು ಮಾಜಿ ಅಪರಾಧಿ ಜಗದ್ಗುರುವಾಗಿದ್ದು ಅಧಿಕೃತವಾಗಿ ಚುನಾಯಿತರಾದದ್ದು ಧರ್ಮಸಭೆಯ ಇತಿಹಾಸದಲ್ಲೇ ಮೊದಲಿರಬೇಕು.
ಕಲಿಸ್ತಸ್ ರ ಜೀವನ ಚರಿತ್ರೆಯ ಇನ್ನೊಂದು ವಿಚಿತ್ರವೆಂದರೆ, ಅವರ ಜೀವನ ಚರಿತ್ರೆಯನ್ನು ಬರೆದದ್ದು ಅವರ ವಿರೋಧಿ ಮತ್ತು ಶತ್ರು ಸಂತ ಹಿಪ್ಪೊಲಿಟಸ್. ಇನ್ನೂ ವಿಚಿತ್ರವೆಂದರೆ ಈ ಶತ್ರು ಮುಂದೆ ಒಬ್ಬ ಬಂಡಾಯ ಜಗದ್ಗುರುವಾಗಿ ಕಲಿಸ್ತಸ್ ರನ್ನು ವಿರೋಧಿಸಿದ್ದು ಮತ್ತು ಇವರೂ ಒಬ್ಬ ಸಂತರೆಂದು ಘೋಷಿಸಲ್ಪಟ್ಟದ್ದು.
ಈ ಎಲ್ಲಾ ದೃಷ್ಟಿಕೋನಗಳಿಂದ ನೋಡಿದಾಗ ಸಂತ ಕಲಿಸ್ತಸ್ ಬಗೆಗೆ ಸಂತ ಹಿಪ್ಪೊಲಿಟಸ್ ಬರದ ಜೀವನ ಚರಿತ್ರೆ ಸತ್ಯಕ್ಕೆ ಹೆಚ್ಚು ಹತ್ತಿರವಾಗಿರಬೇಕು. ರೋಮ್ ನ ಕುಲೀನ ಕುಟುಂಬ ವೊಂದರಲ್ಲಿ ಗುಲಾಮನಾಗಿದ್ದ ಕಲಿಸ್ತಸ್. ಆತನ ಒಡೆಯ ಕಾರ್ ಫೋರ್ ಫೊರುಸ್ ಈತನನ್ನು ತನ್ನ ಬ್ಯಾಂಕಿನ ಅಧಿಕಾರಿಯನ್ನಾಗಿ ನೇಮಿಸಿದ. ದುರದೃಷ್ಟವೆಂಬಂತೆ ಬ್ಯಾಂಕ್ ಸಾಲದಿಂದ ಮುಳುಗಿ ಹೋಯಿತು. ಆದರೆ ಸಮಸ್ಯೆಗಳು ಮಾತ್ರ ಕಲಿಸ್ತಸ್ ತಲೆಗೆ ಬಂತು. ಆ ಕ್ಷಣದ ದಂಡನೆ ತಪ್ಪಿಸಿಕೊಳ್ಳಲು ರೋಮ್ ಬಿಟ್ಟು ಹಡಗೊಂದರಲ್ಲಿ ಓಡಿಹೋದ ಕಲಿಸ್ತಸ್. ಹಡಗಿನಲ್ಲೂ ತನ್ನ ಒಡೆಯನ ಕೈಗೆ ಸಿಕ್ಕಿಬೀಳುವ ಸಂದರ್ಭದಲ್ಲಿ, ಸಮುದ್ರದೊಳಕ್ಕೆ ಹಾರಿಬಿಟ್ಟ. ಆದರೆ ಅದೃಷ್ಟ ಅಲ್ಲಿಯೂ ಗೆಲ್ಲಲಿಲ್ಲ. ಅವನನ್ನು ಹಿಡಿದು ರೋಮ್ ಗೆ ಕರೆತರಲಾಯಿತು. ಪರಿಣಾಮವಾಗಿ ಯಂತ್ರ ತುಳಿಯುವ ಕಾರ್ಖಾನೆಯೊಂದರಲ್ಲಿ ಬಲವಂತ ಕೂಲಿಗೆ ಕಳುಹಿಸಲಾಯಿತು. ಆದರೆ ಒಡೆಯನಿಗೆ ತನ್ನ ಗುಲಾಮನ ಬಗ್ಗೆ ಕರುಣೆ ಬಂದು ಅವನನ್ನು ಬಿಡಿಸಿಕೊಂಡ. ಸಾಲಗಾರರಿಂದ ಹಣ ಪಡೆಯಲು ಶ್ರಮಿಸುವುದಾಗಿ ಕಲಿಸ್ತಸ್ ಒಡೆಯನಿಗೆ ಮಾತು ಕೊಟ್ಟ.
ಈ ಸಾಲ ವಸೂಲಿಯ ಸಂಬಂಧದಲ್ಲಿ ಕಲಿಸ್ತಸ್ ಒಮ್ಮೆ ಯೆಹೂದಿ ದೇವಾಲಯದ ಪ್ರಾರ್ಥನಾ ಸಂದರ್ಭದಲ್ಲಿ ಕೂಗಾಡಿ, ಅಡಚಣೆಯನ್ನುಂಟು ಮಾಡಿ ಮತ್ತೆ ಬಂಧಿತನಾಗಿ ಈ ಬಾರಿ ಸಾಡಿ೯ನಿಯಾ ಗಣಿಗಳಲ್ಲಿ ಜೀತಕ್ಕೆ ತಳ್ಳಲ್ಪಟ್ಟ. ಆದರೆ ಇವನ ಅದೃಷ್ಟ ಚೆನ್ನಾಗಿತ್ತು. ಈ ಸಮಯದಲ್ಲಿ ಅರಸ ಮತ್ತು ಜಗದ್ಗುರುಗಳ ನಡುವೆ ಒಳ್ಳೆಯ ಸಂಬಂಧವಿತ್ತು. ಅರಸನ ಹೆಂಡತಿಗೆ ಕ್ರೈಸ್ತರ ಬಗ್ಗೆ ಅನುಕಂಪವಿತ್ತು. ಈ ಕಾರಣದಿಂದ ಬಂಧಿತರಾಗಿದ್ದ ಅನೇಕ ಕ್ರೈಸ್ತರನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅಚಾತುರ್ಯವಾಗಿ ಕಲಿಸ್ತಸ್ ಹೆಸರೂ ಆ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಕಲಿಸ್ತಸ್ ಬಿಡುಗಡೆಯಾದ ಮೇಲೆ ಆತನನ್ನು ಕ್ರೈಸ್ತ ಸ್ಮಶಾನದ ಮೇಲ್ವಿಚಾರಕನನ್ನಾಗಿ ನೇಮಿಸಲಾಯಿತು.
ಕಲಿಸ್ತಸ್ ಬದುಕು ತಿರುವು ಪಡೆದದ್ದು ಈ ಸಂದರ್ಭದಲ್ಲಿ. ನೂತನ ಜಗದ್ಗುರು ಜೆಫಿರುನುಸ್ ಕಲಿಸ್ತಸ್ ರನ್ನು ಉಪಯಾಜಕರನ್ನಾಗಿ ಮಾಡಿ ರೋಮ್ಗೆ ಕರೆಸಿಕೊಂಡರು. ಈ ಸಂದರ್ಭದಲ್ಲಿ ಧರ್ಮಸಭೆಯಲ್ಲಿ ಸಾಕಷ್ಟು ಪಾಷಾಂಡಿ ನಿಲುವುಗಳು ತಲೆದೋರಿದವು. ಇದರಲ್ಲಿ ಕಲಿಸ್ತಸ್ ಜಗದ್ಗುರುಗಳಿಗೆ ಸಲಹೆಗಾರರಾಗಿ ನಿಂತರು. ಕ್ರಿ.ಶ.219 ರಲ್ಲಿ ಜಗದ್ಗುರು ಮರಣಹೊಂದಿದಾಗ, ಹಿಪ್ಪೊಲಿಟಸ್ ನೇತೃತ್ವದ ಒಂದು ವರ್ಗದ ವಿರೋಧದ ನಡುವೆಯೂ ಕಲಿಸ್ತಸ್ ಜಗದ್ಗುರುವಾಗಿ ನೇಮಕಗೊಂಡರು.
ಇವರ ಸಡಿಲ ನಿಲುವುಗಳು ಮತ್ತು ನೇಮಕಾತಿಯನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದ ಹಿಪ್ಪೊಲಿಟಸ್ ಈಗ ಬಂಡಾಯ ಜಗದ್ಗುರುವಾಗಿದ್ದರು. ಮುಂದೆ 18 ವರ್ಷಗಳ ಕಾಲ ಬಂಡಾಯ ಇದ್ದು ಅನಂತರ ರಾಜಿಯಾಗುತ್ತದೆ. ಸಂತ ಹಿಪ್ಪೊಲಿಟಸ್ ಮೂಲತಃವಾಗಿ ತೀರಾ ಸಂಪ್ರದಾಯವಾದಿ ಮತ್ತು ಕರ್ಮಠ ನಿಲುವುಗಳನ್ನು ತಾಳಿದವರು. ಆದರೆ ಕಲಿಸ್ತಸ್ ಯೇಸು ನುಡಿದ 'ನಾನು ಬಂದಿರುವುದು ಪಾಪಿಷ್ಠರಿಗೆ, ಪುಣ್ಯತ್ಮರಿಗಲ್ಲ' ಎಂಬ ಮಾತನ್ನು ಅನುಸರಿಸಿ ಉದಾರವಾದವನ್ನು ಪ್ರದರ್ಶಿಸುತ್ತಾರೆ. ಈ ಇಬ್ಬರು ಸಮಕಾಲೀನ ಜಗದ್ಗುರುಗಳ ನಡುವೆ ಸಂಘರ್ಷಕ್ಕೆ ಇದೇ ಕಾರಣವಾಗುತ್ತದೆ.
ಸಂತ ಹಿಪ್ಪೊಲಿಟಸ್ ಕಲಿಸ್ತಸ್ ಮೇಲೆ ಐದು ಪ್ರಮುಖ ಆರೋಪಗಳನ್ನು ಮಾಡುತ್ತಾರೆ.
1. ಕೊಲೆ, ಹಾದರ ಮತ್ತು ವ್ಯಭಿಚಾರಿಗಳು ಬಹಿರಂಗ ಕ್ಷಮೆಯಾಚಿಸಿದಾಗ ಅವರನ್ನು ಪರಮ ಪ್ರಸಾದಕ್ಕೆ ಪುನಃ ಸೇರಿಸಿಕೊಳ್ಳಲಾಗುತ್ತಿತ್ತು.
2.ಕುಲೀನ ಜಾತಿಗಳು ಮತ್ತು ಗುಲಾಮರ ನಡುವೆ ರೋಮನ್ ಕಾನೂನು ಸಹ ನಿಷೇಧಿಸಿದ್ದ ವಿವಾಹಗಳನ್ನು ಇವರು ನಡೆಸುತ್ತಿದ್ದರು.
3.ಎರಡು ಮೂರು ಸಾರಿ ಮದುವೆಯಾಗಿ ನಂತರ ಬಂದವರಿಗೂ ಇವರು ಗುರು ದೀಕ್ಷೆಯನ್ನು ನೀಡುತ್ತಿದ್ದರು.
4. ಸಾವಾದ ಪಾಪದ ಏಕೈಕ ಕಾರಣಕ್ಕಾಗಿ ಒಬ್ಬ ಧರ್ಮಧ್ಯಕ್ಷರನ್ನು ಪದಚ್ಯುತಿಗೊಳಿಸಲು ಸಾಧ್ಯವಿಲ್ಲ.
5.ಚಿತ್ರಹಿಂಸೆ ಸಂದರ್ಭದಲ್ಲಿ ಕ್ರೈಸ್ತ ಧರ್ಮ ಬಿಟ್ಟುಹೋದವರ ಬಗ್ಗೆ ತೀರಾ ಸಡಿಲವಾದ ನಿಲುವು ತೆಗೆದುಕೊಳ್ಳುತ್ತಿದ್ದರು.
ಯಾವುದೇ ದೃಷ್ಟಿಕೋನದಿಂದ ನೋಡಿದರೂ ಕಲಿಸ್ತಸ್ ರದು ಕ್ರಿಸ್ತನಿಗೆ ಹತ್ತಿರವಾದ ಹಾಗೂ ಪ್ರಗತಿಪರ ಧೋರಣೆ ಎಂದು ಯಾರೇ ಹೇಳಬಹುದು. ಇವರ ಆಡಳಿತದಲ್ಲೇ ರೋಮ್ ನಲ್ಲಿ ನಡೆದ ಸ್ಥಳೀಯ ದಂಗೆಯ ಸಂದರ್ಭವೊಂದರಲ್ಲಿ ಜಗದ್ಗುರು ಕಲಿಸ್ತಸ್ ರಕ್ತಸಾಕ್ಷಿಯಾದರು.
15.10.22 - "ನೀವು ಹೇಳತಕ್ಕದ್ದನ್ನು ಪವಿತ್ರಾತ್ಮ ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು,”
ಮೊದಲನೇ ವಾಚನ: ಎಫೆಸಿಯರಿಗೆ 1:15-23
ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ವಿಶ್ವಾಸ ಹಾಗೂ ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯನ್ನು ಕುರಿತು ಕೇಳಿದ್ದೇನೆ. ಅಂದಿನಿಂದ ನಿಮ್ಮ ಸಲುವಾಗಿ ದೇವರಿಗೆ ಸದಾ ಕೃತಜ್ಞತಾಸ್ತುತಿ ಸಲ್ಲಿಸಿ, ನನ್ನ ಪ್ರಾರ್ಥನೆಯಲ್ಲಿ ನಿಮ್ಮನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ ತಂದೆಯೂ ಆದವರು, ನಿಮಗೆ ಜ್ಞಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ; ತಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ, ಎಂದು ಪ್ರಾರ್ಥಿಸುತ್ತೇನೆ. ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ; ಅವರ ಬೆಳಕು ನಿಮಗೆ ಕಾಣುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ತ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು. ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು. ಈ ಮಹಿಮಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಆಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೆಸುಕ್ರಿಸ್ತರೇ ಆಡಳಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ. ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿ ಗಳಿಸಿದವರೆಲ್ಲರಿಗಿಂತಲೂ ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು. ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ, ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ. ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣ ಉಳ್ಳದ್ದಾಗಿದೆ.
ಕೀರ್ತನೆ: 8:2-3, 4-5, 6-7
ಶ್ಲೋಕ: ಒಡೆಯನಾಗಿಸಿದೆ ಪ್ರಭೂ ಮಾನವನನು ನಿನ್ನಯ ಕರಕೃತಿಗಳಿಗೆ
ಶುಭಸಂದೇಶ: ಲೂಕ 12:8-12
“ಯಾವನು ಜನರ ಮುಂದೆ ಬಹಿರಂಗವಾಗಿ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಅವನನ್ನು ನರಪುತ್ರನು ಸಹ ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. ಆದರೆ ಯಾವನು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸುತ್ತಾನೋ, ಅವನನ್ನು ದೇವದೂತರ ಮುಂದೆ ನಿರಾಕರಿಸಲಾಗುವುದೆಂಬುದು ನಿಶ್ಚಯ. “ಯಾವನಾದರೂ ನರಪುತ್ರನ ವಿರುದ್ಧ ಮಾತನಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು. “ಪ್ರಾರ್ಥನಾಮಂದಿರಗಳಿಗೆ ಮತ್ತು ನ್ಯಾಯಾಧಿಪತಿಗಳ ಹಾಗೂ ದೇಶಾಧಿಕಾರಿಗಳ ಮುಂದೆ ನಿಮ್ಮನ್ನು ಎಳೆದೊಯ್ಯುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ, ನೀವು ಹೇಳತಕ್ಕದ್ದನ್ನು ಪವಿತ್ರಾತ್ಮ ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು,” ಎಂದರು.
14.10.22
ಮೊದಲನೇ ವಾಚನ: ಎಫೆಸಿಯರಿಗೆ1:11-14
ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು. ನೀವು ಸಹ ಸತ್ಯವಾಕ್ಯವನ್ನು ಅಂದರೆ, ನಿಮಗೆ ಜೀವೋದ್ಧಾರವನ್ನೀಯುವ ಶುಭಸಂದೇಶವನ್ನು ಕೇಳಿ ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಟ್ಟಿರಿ. ದೇವರು ವಾಗ್ದಾನಮಾಡಿದ ಪವಿತ್ರಾತ್ಮ ಅವರಿಂದ ಮುದ್ರಿತರಾದಿರಿ. ಹೀಗೆ ದೇವರಿಗೆ ಸೇರಿದವರು ವಿಮೋಚನೆ ಹೊಂದಿ ಸ್ವರ್ಗೀಯ ಸ್ವಾಸ್ತ್ಯಕ್ಕೆ ಬಾಧ್ಯರಾಗಲು ಆ ಪವಿತ್ರಾತ್ಮರೇ ಆಧಾರ. ಈ ಕಾರಣ ದೇವರಿಗೆ ಮಹಿಮೆ ಸಲ್ಲಲಿ.
ಕೀರ್ತನೆ: 33:1-2, 4-5, 12-13
ಶ್ಲೋಕ: ಸ್ವಜನರಾಗಿ ಪ್ರಭು ಅಯ್ದುಕೊಂಡ ಜನತೆ ಧನ್ಯ.
ಶುಭಸಂದೇಶ: ಲೂಕ 12:1-7
ಇಷ್ಟರಲ್ಲೇ, ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ, “ಫರಿಸಾಯರ ‘ಹುಳಿಹಿಟ್ಟಿನ’ ಬಗ್ಗೆ. ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ. ಮುಚ್ಚುಮರೆಯಾಗಿರುವುದೆಲ್ಲಾ ಬಟ್ಟಬಯಲಾಗುವುದು; ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು. ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು; ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು,” ಎಂದರು. “ಗೆಳೆಯರೇ, ನನ್ನ ಮಾತಿಗೆ ಕಿವಿಗೊಡಿ; ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ: ಸತ್ತಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿಹೇಳುತ್ತೇನೆ. “ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ಅಷ್ಟುಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು.
11.10.22 - ಸಂತ 23ನೇ ಜಾನ್ St. 23rd John
"ಧರ್ಮಸಭೆಯ ಬಾಗಿಲುಗಳನ್ನು ತೆರೆಯಿರಿ, ಹೊರಗಿನಿಂದ ಹೊಸಗಾಳಿ ಬೀಸಲಿ" ಎಂದು ಸಾಂಕೇತಿಕವಾಗಿ ವ್ಯಾಟಿಕನ್ ಸಭಾಂಗಣದ ಕಿಟಕಿಯನ್ನು ತೆರೆದ, ಪ್ರಗತಿಪರ ಜಗದ್ಗುರು ಆಂಜೆಲೋ ಗುಯ್ ಸೆಪ್ಪೆ ರೋಸ್ ಕಾಲಿ. ಎರಡನೇ ವ್ಯಾಟಿಕನ್ ಸಮ್ಮೇಳನವನ್ನು ಆಯೋಜಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಾಮಾನ್ಯ ರೈತ ಕುಟುಂಬದ ಮಗನಾಗಿ, ಇಟಲಿಯ ಬೆಗಾ೯ಮೊ ಬಾಲ್ಯದಿಂದಲೇ ತನ್ನ ಸರಳತೆ ಮತ್ತು ನೇರನುಡಿಗೆ ಹೆಸರುವಾಸಿ. ದೂರದೃಷ್ಟಿ ಇವರ ಹುಟ್ಟುಗುಣ. ಈ ದೂರ ದೃಷ್ಟಿಯಿಂದಲೇ ಸೆಮಿನಾರಿಗೆ ಸೇರಿ 1904ರಲ್ಲಿ ಧರ್ಮಗುರುಗಳಾದರು. ಧರ್ಮಗುರು ದೀಕ್ಷೆ ಪಡೆದ ಕೂಡಲೇ ಧರ್ಮಶಾಸನ ಕಲಿಯಲು ರೋಮ್ಗೆ ತೆರಳಿದರು. ನಂತರ ತಮ್ಮ ಧರ್ಮಾಧ್ಯಕ್ಷರ ಕಾರ್ಯದರ್ಶಿಯಾಗಿ, ಸೆಮಿನರಿಯಲ್ಲಿ ಚರ್ಚ್ ಇತಿಹಾಸದ ಉಪನ್ಯಾಸಕರಾಗಿ, ಧರ್ಮಕ್ಷೇತ್ರದ ಪ್ರಗತಿಪರ ಪ್ರಕಾಶಕರಾಗಿ ದುಡಿದರು.
ಮೊದಲ ಮಹಾಯುದ್ಧದಲ್ಲಿ ಗಾಯಾಳುಗಳನ್ನು ಸಾಗಿಸುವ ಕೈ ಮಂಚವನ್ನು ಹೊರುವ ಕೆಲಸವೊಂದನ್ನು ಬಿಟ್ಟರೆ ಅಂಥಾ ರೋಚಕ ಘಟನೆಗಳಾವುದನ್ನೂ ಇವರ ಬದುಕಿನಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ದೂರದೃಷ್ಟಿಯ ಚಿಂತಕ ಮತ್ತು ವಿನ್ಯಾಸಕ, ಪ್ರಬುದ್ಧ ರಾಜಕೀಯ ಪ್ರಜ್ಞೆವುಳ್ಳ ಸಂಧಾನಕಾರ. ಆಡಳಿತದೊಳಕ್ಕೆ ಎಲ್ಲರನ್ನೂ ಕೂಡಿಸಿಕೊಂಡು ಧರ್ಮಸಭೆಯ ನಿರ್ಧಾರಗಳನ್ನು, ನಿರ್ದೇಶನಗಳನ್ನು ಸ್ಪಷ್ಟವಾಗಿ ರೂಪಿಸಬಲ್ಲ ಗುಣಗಳ ಮೊತ್ತವೇ ಇವರಲ್ಲಿತ್ತು.
1921ರಲ್ಲಿ ವಿಶ್ವಾಸ ಪ್ರಸಾರ ಸಂಸ್ಥೆಗೆ (Propagation of Faith) ರಾಷ್ಟ್ರೀಯ ನಿರ್ದೇಶಕರಾಗಿ ನೇಮಕವಾಗುವುದರಿಂದಿಗೆ ಇವರಿಗೆ ರೋಮ್ ಮತ್ತು ವ್ಯಾಟಿಕನ್ ಜೊತೆಗೆ ನಿಕಟ ಸಂಬಂಧ ಪ್ರಾರಂಭವಾಯಿತು. ಧರ್ಮಸಭೆಯ ಒಳ ಆಡಳಿತ ನೈಪುಣ್ಯತೆ ಅರಿವಾಯಿತು. ಈ ಎಲ್ಲಾ ಗುಣಗಳು ಇವರನ್ನು ರಾಜತಾಂತ್ರಿಕ ಹುದ್ದೆಗಳಿಗೆ ಕರೆದೊಯ್ದವು. 1925 ಇವರು ಬಲ್ಗೇರಿಯಾಗೆ ರೋಮ್ ರಾಯಭಾರಿಯಾದರು. ಅನಂತರ ಟರ್ಕಿ ಮತ್ತು ಫ್ರಾನ್ಸ್ ರಾಷ್ಟ್ರಗಳಿಗೆ (1944- 1953) ರಾಯಭಾರಿಯಾಗಿ ಕೆಲಸ ಮಾಡಿದರು. ಅದು ಭೀಕರ ಮಹಾಯುದ್ಧಗಳ ಕಾಲ. ಈ ಸಂದರ್ಭದಲ್ಲಿ ಎಲ್ಲರೂ ಯುದ್ಧ, ವಿನಾಶ, ಗೆಲುವಿನ ಬಗೆಗೆ ಯೋಚಿಸುತ್ತಿದ್ದಾಗ ಇವರು ಸಂಧಾನದ ಬಗ್ಗೆ ಯೋಚಿಸುತ್ತಿದ್ದರು.
ಈ ರಾಯಬಾರಿ ಕೆಲಸ ಇವರನ್ನು ಅನೇಕ ಸಂಧಾನ ಕಾರ್ಯಗಳಿಗೆ ಒಯ್ಯಿತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಾಂಪ್ರದಾಯಿಕ ಧರ್ಮಸಭೆಯ (Orthodox Church) ನಾಯಕರೊಂದಿಗೆ ಒಳ್ಳೆಯ ಸಂಪರ್ಕವೇರ್ಪಡಿಸಿ ಕೊಂಡರು. ಟರ್ಕಿಯ ಜರ್ಮನಿ ರಾಯಭಾರಿಯ ಸಹಾಯದಿಂದ 24,000 ಯೆಹೂದ್ಯರು ನಿರ್ನಾಮವಾಗುವುದನ್ನು ತಡೆದು ಅವರ ಬಿಡುಗಡೆಗೆ ಕಾರಣರಾದರು.
1953ರಲ್ಲಿ ಕಾರ್ಡಿನಲ್ಲಾಗಿ ನೇಮಕಗೊಂಡು ವೆನಿಸ್ ನ ಅಧಿಪತಿಯಾಗಿ ನೇಮಕಗೊಂಡರು. ಕೊನೆಯ ಹುದ್ದೆಯೆಂಬಂತೆ 78ವರ್ಷ ವಾಗಲು ಒಂದು ತಿಂಗಳಿರುವಾಗ ಜಗದ್ಗುರುಗಳಾಗಿ ಚುನಾಯಿತರಾದರು. ಜಗದ್ಗುರುಗಳಾಗಿ ತಮ್ಮ ತಂದೆಯ ಹೆಸರು ಮತ್ತು ಎರಡು ಪ್ರಧಾನಾಲಯ ಗಳ (ಸಂತ ಸ್ನಾನಿಕ ಯೊವಾನ್ನ ಶುಭಸಂದೇಶ ಕರ್ತೃ ಹಾಗೂ ಪ್ರೇಷಿತ ಸಂತ ಯೊವಾನ್ನ) ಸಂತರ ಹೆಸರುಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಜಗದ್ಗುರುಗಳಾದ ಮೇಲೆ ರಾಜತಾಂತ್ರಿಕ ಕಾರ್ಯ ಇನ್ನಷ್ಟು ಶಕ್ತಿ ಪಡೆಯಿತು. 1962ರಲ್ಲಿ ಕ್ಯೂಬಾದ ಕ್ಷಿಪಣಿಗಳ ಸಮಸ್ಯೆಯನ್ನು ಬಗೆಹರಿಸಿದರು. ಕಾರ್ಡಿನಲರ ಆಯ್ಕೆಯನ್ನು ಅಂತರ್ರಾಷ್ಟ್ರೀಯ ವ್ಯಾಪ್ತಿಯ ಒಯ್ದರು. ಧರ್ಮಸಭೆಗೆ ಹೊಸಗಾಳಿ ಬೀಸಲು ಸಾಂಪ್ರದಾಯಿಕ ಕಿಟಕಿ-ಬಾಗಿಲುಗಳನ್ನು ತೆಗೆದುಹಾಕಿ ಹೊಸ ಅವಮಾನಕ್ಕೆ ಕಾರಣರಾದರು.
ಅವರು ಅಂದು ತೆರೆದ ಬಾಗಿಲು, ಕಿಟಕಿಗಳು ಮತ್ತೆಂದೂ ಮುಚ್ಚಲ್ಪಡದೆ, ಅತ್ಯಂತ ಮಹತ್ವ ಹಾಗೂ ಪ್ರಗತಿಪರದ ಕಾರ್ಯಗಳು ಇಂದಿಗೂ ಮುನ್ನೆಡೆಯುತ್ತಿದ್ದರೆ ಅದಕ್ಕೆ ಈ ಜಗದ್ಗುರು ಸಂತರೇ ಕಾರಣ.
ಇವರ ಎರಡು ಪ್ರಖ್ಯಾತ ಸುತ್ತೋಲೆ ಎಂದರೆ ತಾಯಿ ಮತ್ತು ಶಿಕ್ಷಕಿ (1961) ಭುವಿಯಲ್ಲಿ ಶಾಂತಿ (1960) ಇವರು ಜಗದ್ಗುರುಗಳಾದಾಗ ಸ್ವೀಕರಿಸಿದ ಧ್ಯೇಯವಾಕ್ಯವೆಂದರೆ ವಿಜಯತೆ ಮತ್ತು ಶಾಂತಿ (Obedentia Et Pax).
13.10.22 - "ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ"
ಮೊದಲನೇ ವಾಚನ: ಎಫೆಸಿಯರಿಗೆ 1:3-10
ಕೀರ್ತನೆ: 98:1, 2-3, 3-4, 5-6
ಶ್ಲೋಕ: ಪ್ರಕಟಿಸಿಹನು ಪ್ರಭು ತನ್ನ ಮುಕ್ತಿ ವಿಧಾನವನು
ಶುಭಸಂದೇಶ: ಲೂಕ 11:47-54