ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.04.22 - "ಇನ್ನು ಮೇಲೆ ಪಾಪ ಮಾಡಬೇಡ,"

ಮೊದಲನೇ ವಾಚನ: ಯೆಶಾಯ 43:16-21



ಸಮುದ್ರದ ಮಧ್ಯೆ ದಾರಿ ಮಾಡಿದವನಾರೋ, ಭೋರ್ಗರೆವ ಜಲರಾಶಿಗಳಲ್ಲಿ ಮಾರ್ಗ- ಬೇರ್ಪಡಿಸಿದವನಾರೋ, ಅಶ್ವರಥಭಟಸೈನ್ಯಗಳನ್ನು ಹೊರಡಿಸಿದವನಾರೋ, ಅವು ಬಿದ್ದು ಏಳಲಾಗದೆ, ಬತ್ತಿ ಕರಗಿ ಹೋಗುವಂತೆ ಮಾಡಿದವನಾರೋ, ಆ ಸ್ವಾಮಿ ಸರ್ವೇಶ್ವರ ನುಡಿದ ಮಾತಿದೋ: "ಗತಿಸಿಹೋದ ಘಟನೆಗಳನ್ನು ನೆನೆಯಬೇಕಾಗಿಲ್ಲ. ಪುರಾತನ ಕಾರ್ಯಗಳ ನೆನಪಿಸಿಕೊಳ್ಳಬೇಕಾಗಿಲ್ಲ. ಇಗೋ, ನೂತನ ಕಾರ್ಯವನು ನಾನೆಸಗುವೆ, ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೆ? ಮಾರ್ಗವನ್ನು ಏರ್ಪಡಿಸಿರುವೆ ಮರಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ. ಕಾಡುಮೃಗಗಳು, ನರಿ, ಉಷ್ಟ್ರಪಕ್ಷಿಗಳು ಕೂಗಿ ಕೊಂಡಾಡುವುವು ನನ್ನನ್ನು. ಏಕೆನೆ ಕೊಡುವೆ ನೀರನ್ನು ಮರುಭೂಮಿಯಲಿ, ಹರಿಸುವೆನು ತೊರೆನದಿಗಳನ್ನು ಅರಣ್ಯದಲಿ. ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನ್ನು."

ಕೀರ್ತನೆ: 126:1-2, 2-3, 4-5, 6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದರು ಖಚಿತ ಎಂತಲೇ ನಾವಾನಂದಭರಿತರಾಗುವುದು ಉಚಿತ

ಎರಡನೇ ವಾಚನ: ಫಿಲಿಪ್ಪಿಯರಿಗೆ 3:8-14

ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕೃಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನು ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ. ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ. ಧರ್ಮಶಾಸ್ತ್ರದ ಪಾಲನೆಯಿಂದ ದೊರಕುವ, ನನ್ನದೇ ಎಂದು ಹೇಳಿಕೊಳ್ಳಬಹುದಾದ ಸತ್ಸಂಬಂಧ ಯಾವುದೂ ನನಗಿಲ್ಲ. ಪ್ರತಿಯಾಗಿ,  ನಾನು ಕ್ರಿಸ್ತಯೇಸುವಿನಲ್ಲಿಟ್ಟಿರುವ ವಿಶ್ವಾಸದ ಪ್ರಯುಕ್ತ ದೇವರೊಂದಿಗೆ ಸರಿಯಾದ ಸತ್ಸಂಬಂಧವನ್ನು ಹೊಂದಿದ್ದೇನೆ. ಈ ಸಂಬಂಧವು ದೇವರು ನನಗೆ ದಯಪಾಲಿಸಿರುವ ಅನುಗ್ರಹ. ನನ್ನ ವಿಶ್ವಾಸದ ಆಧಾರದ ಮೇಲೆ ಅವರೇ ನೀಡಿರುವ ಕೃಪಾವರ. ಯೇಸುಸ್ವಾಮಿಯನ್ನು ಅರಿಯಬೇಕು; ಅವರ ಪುನರುತ್ದಾನದ ಪ್ರಭಾವವನ್ನು ಅನುಭವಿಸಬೇಕು; ಅವರ ಯಾತನೆಗಳಲ್ಲಿ ಪಾಲುಗೊಳ್ಳಬೇಕು; ಅವರ ಮರಣದಲ್ಲಿ ಅವರಂತೆಯೇ ಆಗಬೇಕು - ಇದೇ ನನ್ನ ಹೆಬ್ಬಯಕೆ. ಹೀಗೆ ನಾನೂ ಸಹ ಮೃತ್ಯುಂಜಯನಾಗುತ್ತೇನೆ ಎಂಬುದೇ ನನ್ನ ನಂಬಿಕೆ - ನಿರೀಕ್ಷೆ. ಈಗಾಗಲೇ ನಾನಿದೆಲ್ಲವನ್ನೂ ಸಾಧಿಸಿದ್ದೇನೆ, ಪರಿಪೂರ್ಣತೆಯನ್ನು ಗಳಿಸಿದ್ದೇನೆ. ಎಂದು ನೀವು ಭಾವಿಸಬಾರದು. ಕ್ರಿಸ್ತಯೇಸು ನನ್ನನ್ನು ಯಾವುದಕ್ಕಾಗಿ ತಮ್ಮವನ್ನಾಗಿ ಮಾಡಿಕೊಂಡರೋ, ಅದನ್ನು ನನ್ನದಾಗಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ಸಹೋದರರೇ, ಆ ಗುರಿಯನ್ನು ತಲುಪಿದ್ದೇನೆಂದು ನಾನೆಂದೂ  ಹೇಳಿಕೊಂಡಿಲ್ಲ. ಆದರೆ ಇದು ನಿಜ. ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ಮುಂದಿನವುಗಳ ಮೇಲೆ  ಕಣ್ಣಿಟ್ಟು ನಾನು ಓಡುತ್ತಿದ್ದೇನೆ. ಮೇಲಣ ಬಹುಮಾನವನ್ನು ಪಡೆಯಲೆಂದು ದೇವರು ನನಗೆ ಕ್ರಿಸ್ತಯೇಸುವಿನ ಮುಖಾಂತರ ಕರೆನೀಡಿದ್ದಾರೆ. ಆ ಗುರಿಯನ್ನು ತಲುಪಲೆಂದೇ ನಾನು ಮುಂದೋಡುತ್ತಲಿದ್ದೇನೆ.

ಶುಭಸಂದೇಶ: ಯೊವಾನ್ನ 8:1-11

ಯೇಸುಸ್ವಾಮಿ ಓಲಿವ್ ಗುಡ್ಡಕ್ಕೆ ಹೋದರು. ಮರುದಿನ ಮುಂಜಾನೆ ಅವರು ಮತ್ತೆ ಮಹಾದೇವಾಲಯಕ್ಕೆ ಬಂದರು. ಜನರು ಸುತ್ತಲೂ ಬಂದು ನೆರೆಯಲು ಯೇಸು ಕುಳಿತುಕೊಂಡು ಭೋಧಿಸತೊಡಗಿದರು. ಆಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ಹೆಂಗಸನ್ನು ಅಲ್ಲಿಗೆ ಕರೆತಂದರು; ಅವಳು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಳು. ಅವಳನ್ನು ಎಲ್ಲರ ಮಂದೆ ನಿಲ್ಲಿಸಿ, "ಭೋಧಕರೇ, ಈ ಹೆಂಗಸು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಳು. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?" ಎಂದು ಪ್ರಶ್ನಿಸಿದರು. ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ಧೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನೆನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆ ಹಾಕುತ್ತಲೇ ಇದ್ದರು.

ಆಗ ಯೇಸು ನೆಟ್ಟಗೆ ಕುಳಿತು, "ನಿಮ್ಮಲ್ಲಿ ಪಾಪ ಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ" ಎಂದು ಹೇಳಿ, ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು. ಆಗ ಯೇಸು ತಲೆಯೆತ್ತಿ, "ತಾಯೀ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ  ಶಿಕ್ಷೆ ವಿಧಿಸಲಿಲ್ಲವೇ?" ಎಂದು ಕೇಳಿದರು. ಅವಳು "ಇಲ್ಲ, ಸ್ವಾಮೀ," ಎಂದಳು. ಯೇಸು ಅವಳಿಗೆ, "ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ," ಎಂದರು.

ಮನಸಿಗೊಂದಿಷ್ಟು : "ಇನ್ನು ಮೇಲೆ ಪಾಪ ಮಾಡಬೇಡ" ಎಂಬ ಯೇಸುವಿನ ಆ ಕೊನೆ ವಾಕ್ಯ, ಅವರಿಗೆ ಜನರ ಮೇಲೆ ಅದೂ ಪಾಪಿಗಳ ಮೇಲೆ ಇದ್ದ ಆತ್ಮವಿಶ್ವಾಸವನ್ನು ತೋರುತ್ತದೆ. "ಇನ್ನು ಮೇಲೆ" ಎಂಬುದರಲ್ಲೇ  ಹಿಂದಿನದರ ಬಗೆಗಿನ ಕ್ಷಮೆ, ಮುಂದಿನದರ ಬಗೆಗಿನ ಭರವಸೆಯನ್ನು ತೋರುತ್ತದೆ. ನಮ್ಮ ಪಾಪಗಳು, ತಪ್ಪುಗಳು ನಮ್ಮನ್ನು ಕೊರೆಯುತ್ತಿದ್ದರೆ, ಯೇಸುವಿನ ಈ ವಾಕ್ಯ ನಮಗೆ ಸಾಂತ್ವನ ನೀಡಬೇಕು, ಮುಂದಿನ ದಾರಿ ತೋರಬೇಕು. ಆದರೆ ಪಶ್ಚಾತ್ತಾಪದ ಮನಸು ನಮ್ಮದಾಗಬೇಕಷ್ಟೇ.

ಪ್ರಶ್ನೆ:  ನಮ್ಮದೇ ತಪ್ಪುಗಳಿದ್ದರೂ ಮತ್ತೊಬ್ಬರನ್ನು ಅದೆಷ್ಟು ಬಾರಿ ದೂಷಿಸಿದ್ದೇವಲ್ಲವೇ?

No comments:

Post a Comment