ಮೊದಲನೇ ವಾಚನ: ಯೆರೆಮೀಯ 11:18-20
ಸರ್ವೇಶ್ವರಸ್ವಾಮಿ ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು. ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. "ಮರವನ್ನು ಫಲಸಹಿತ ನಾಶಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ. ಅವನ ಹೆಸರೇ ಇಲ್ಲದಂತಾಗಲಿ," ಎಂದು ಅವರು ಕುಯುಕ್ತಿ ಕಲ್ಪಿಸಿದ್ದರು. ಆದರೆ ಅದು ನನಗೆ ತಿಳಿದಿರಲಿಲ್ಲ. ಆಗ ನಾನು, "ಸೇನಾಧೀಶ್ವರರಾದ ಸರ್ವೇಶ್ವರಾ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು ನೀಡುವವರು. ನೀವು ಅವರಿಗೆ ಮಾಡುವ ಪ್ರತಿಕಾರವನ್ನು ನಾನು ಕಾಣುವೆನು. ನನ್ನ ವ್ಯಾಜ್ಯವನ್ನು ನಿಮ್ಮ ಕೈಗೊಪ್ಪಿಸಿದ್ದೇನೆ," ಎಂದೆನು.
ಕೀರ್ತನೆ:7:2-3, 9-10, 11-12
ಶ್ಲೋಕ: ನಿನ್ನಾಶ್ರಯವನರಸಿ ಹೇ ಸ್ವಾಮೀ ದೇವಾ, ನಾ ಬಂದಿಹೆನು.
ಶುಭಸಂದೇಶ: ಯೊವಾನ್ನ 7:40-53
ಯೇಸುಸ್ವಾಮಿ ಹೇಳಿದ್ದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, "ಬರಬೇಕಾಗಿದ್ದ ಪ್ರವಾದಿ ಈತನೇ ಸರಿ," ಎಂದರು. ಇನ್ನೂ ಕೆಲವರು, "ಈತನೇ ಲೋಕೋದ್ಧಾರಕ," ಎಂದರು. ಮತ್ತೆ ಕೆಲವರು, "ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ? 'ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ' ಎಂದು ಪವಿತ್ರ ಗ್ರಂಥವೇ ಹೇಳಿದೆಯಲ್ಲವೆ?" ಎಂದು ವಾದಿಸಿದರು. ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು. ಆದರೆ ಯಾರೂ ಅವರ ಮೇಲೆ ಕೈಹಾಕಲಿಲ್ಲ. ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು, "ಅವನನ್ನೇಕೆ ನೀವು ಹಿಡಿದು ತರಲಿಲ್ಲ?" ಎಂದು ಕೇಳಿದರು. ಅವರು, "ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ." ಎಂದು ಉತ್ತರಿಸಿದರು. ಅದಕ್ಕೆ ಫರಿಸಾಯರು, "ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ? ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ? ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನಜಂಗುಳಿ ಶಾಪಗ್ರಸ್ತವಾಗಿದೆ," ಎಂದರು. ಅಲ್ಲಿದ್ದ ಫರಿಸಾಯರಲ್ಲಿ ನಿಕೋದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ, ಈತನು ಅವರಿಗೆ, "ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?" ಎಂದು ಕೇಳಿದನು. ಅದಕ್ಕೆ ಅವರು, "ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿ ನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೆ ಗೊತ್ತಾಗುತ್ತದೆ," ಎಂದು ಉತ್ತರ ಕೊಟ್ಟರು. ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.
No comments:
Post a Comment