12.04.22 - "ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ"

ಮೊದಲನೇ ವಾಚನ: ಯೆಶಾಯ 49:1-6

ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.” ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮಥ್ರ್ಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”

ಕೀರ್ತನೆ: 71:1-2, 3-4, 5-6, 15, 17

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

ಆಶ್ರಯಕೋರಿ ಹೇ ಪ್ರಭು ನಾ ಬಂದಿರುವೆ |
ಆಶಾ ಭಂಗವಾಗದಿರಲೆಂದು ನಾ ಬೇಡುವೆ ||

ಸತ್ಯ ಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಲಯ್ಯಾ |
ನನಗೆ ಕಿವಿಗೊಟ್ಟು ನನ್ನನುದ್ಧರಿಸಯ್ಯ ||
ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು |
ನೀನೇ ನನ್ನ ದುರ್ಗ ,ಕೋಟೆ ನನ್ನನು ರಕ್ಷಿಸಲು ||

ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯ |
ಕ್ರೂರ ಕೇಡಿಗರ ವಶದಿಂದೆನ್ನನು ತಪ್ಪಿಸಯ್ಯ ||
ಸ್ವಾಮಿ ದೇವಾ, ನೀನೇ ನನ್ನ ಭರವಸೆ |
ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ ||

ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು |
ವಿತರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು ||
ದೇವಾ ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ ?  |

ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ ||

ಶುಭಸಂದೇಶ: ಯೊವಾನ್ನ 13:21-33, 36-38


ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹ ಬಗೆದು ನನ್ನನ್ನು ಹಿಡಿದೊಪ್ಪಿಸುವನು,” ಎಂದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, ಸಿಮೋನ ಪೇತ್ರನು, “ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆಂದು ಕೇಳು,” ಎಂದು ಸನ್ನೆ ಮಾಡಿದನು. ಅಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ ಸರಿದು, “ಅಂತವನು ಯಾರು ಪ್ರಭೂ?” ಎಂದು ಕೇಳಿದನು. ಯೇಸು, “ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ,” ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, “ನೀನು ಮಾಡಬೇಕೆಂದಿರುವುದನ್ನು ಬೇಗನೆ ಮಾಡಿಮುಗಿಸು,” ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, ‘ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ,” ಎಂದೋ, ‘ಬಡವರಿಗೆ ಏನಾದರೂ ಕೊಡು’ ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು. ಹೊಸ ಕಟ್ಟಳೆ ಯೂದನು ಹೊರಟುಹೋದಮೇಲೆ ಯೇಸುಸ್ವಾಮಿ ಹೀಗೆಂದರು: “ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು, ತಕ್ಷಣವೇ ಪ್ರಕಟಪಡಿಸುವರು. ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ. ಆಗ ಸಿಮೋನ ಪೇತ್ರನು, “ಪ್ರಭುವೇ, ನೀವು ಹೋಗುವುದಾದರೂ ಎಲ್ಲಿಗೆ?” ಎಂದು ಕೇಳಿದನು. “ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನಂತರ ಬರುವೆ,” ಎಂದು ಯೇಸು ಉತ್ತರಕೊಡಲು ಪೇತ್ರನು, “ಈಗಲೇ ನಿಮ್ಮ ಹಿಂದೆ ಬರಲು ಏಕಾಗದು? ಪ್ರಭೂ, ನಿಮಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿದ್ದೇನೆ,” ಎಂದನು. ಆಗ ಯೇಸು, “ನನಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆಂದು ಮೂರುಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗುವುದಿಲ್ಲ,” ಎಂದು ನುಡಿದರು.

ಮನಸ್ಸಿಗೊಂದಿಷ್ಟು : ತಿಳಿದೂ ತಿಳಿದೂ ಸೈತಾನನ ಆಣತಿಗೆ ಓಗೊಟ್ಟ ಜೂದಾಸ, ಮಾನವ ಸಹಜ ಭಯಕ್ಕೆ ತನ್ನ ಪ್ರೀತಿ ಪಾತ್ರರನ್ನು ಅಲ್ಲಗೆಳೆದ ಪೇತ್ರ. ಎಲ್ಲವೂ ತಿಳಿದಿದ್ದರೂ ಪ್ರೀತಿಯಲ್ಲಿ ವ್ಯತ್ಯಾಸ ಮಾಡದ ಯೇಸು, ಎಲ್ಲರೂ ಇಂದಿನ ಶುಭಸಂದೇಶದಲ್ಲಿದ್ದಾರೆ. ಮಾನವ ಸಹಜ ಭಯ, ಆಸೆ, ದುರಾಸೆಗಳಿಗೆ ನಾವು ಶರಣಾಗುತ್ತೇವೆ, ಸೈತಾನನನ್ನು ನಾವೇ ಆಹ್ವಾನಿಸುತ್ತೇವೆ. ಕೊನೆಗೆ ಯೇಸುವಿನ ಆ ಪ್ರೀತಿಯೇ ನಮ್ಮನು ಪೊರಯಬೇಕು, ಅದನ್ನೇ ನಾವು ನೆಚ್ಚಿಕೊಳ್ಳಬೇಕು.

ಪ್ರಶ್ನೆ : ಯೇಸುವನ್ನು ದಿನಕೆಷ್ಟು ಬಾರಿ ಅಲ್ಲಗಳೆಯುತ್ತೇವೆ.

ಪ್ರಭುವೇ,
ಅರಿಯನೆಂದು 
ಅಲ್ಲಗಳೆದಿರುವೆ 
ನಿನ್ನ ಅನುದಿನ
ಬಗೆದಿರುವೆ ದ್ರೋಹ 
ಹೃದಯದಲ್ಲಿ ನಾ
ಪಶ್ಚಾತ್ತಾಪದಲ್ಲಿ
ಯೂದನಂತಾಗದೆ
ಪೇತ್ರನಂತಾಗಲು
ಆತ್ಮರ ವರವಿರಿಸಿ
ಬಂಡೆಯಲ್ಲದಿದ್ದರೂ
ನಿಮ್ಮ ರಾಜ್ಯದ ಕೋಟೆಯ
ಒಂದು ಸಣ್ಣ ಕಲ್ಲಾಗಿಸಿ



No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...