ಮೊದಲನೇ ವಾಚನ: ಸುಸನ್ನಳ ಗ್ರಂಥ 1:41-62
ಅವರು ಜನರ ಹಿರಿಯರ ಮಾತ್ರವಲ್ಲ ನ್ಯಾಯಾಧೀಶರೂ ಆಗಿದ್ದರಿಂದ ಕೂಡಿದ್ದ ಸಭಿಕರು ಅವರ ಮಾತನ್ನು ನಂಬಿ ಆಕೆಗೆ ಮರಣದಂಡನೆಯನ್ನು ವಿಧಿಸಿದರು. ಆಗ ಸುಸನ್ನಳು ಗಟ್ಟಿಯಾಗಿ ಕೂಗಿ, "ನಿತ್ಯರಾದ ದೇವರೇ, ನೀವು ಎಲ್ಲ ಗುಟ್ಟನ್ನು ತಿಳಿದವರು. ಎಲ್ಲ ವಿಷಯಗಳನ್ನು, ಅವು ಹುಟ್ಟುವ ಮೊದಲೇ ಅರಿತವರೂ ಆಗಿದ್ದೀರಿ. ಇವರು ನನ್ನ ವಿರುದ್ಧ ಸುಳ್ಳುಸಾಕ್ಷಿ ಹೇಳಿದ್ದಾರೆಂಬುದು ನಿಮಗೆ ಗೊತ್ತಿದೆ. ಇವರು ನನ್ನ ವಿರುದ್ದ ಹೊಟ್ಟೆಕಿಚ್ಚಿನಿಂದ ಹೇಳಿದ ಕಾರ್ಯಗಳನ್ನು ನಾನು ಮಾಡಿದ್ದೇ ಇಲ್ಲ. ಆದರೂ ಈಗ ನಾನು ಸಾಯಲೇಬೇಕು," ಎಂದು ಮೊರೆಯಿಟ್ಟಳು. ಸರ್ವೇಶ್ವರಸ್ವಾಮಿ ಆಕೆಯ ಮೊರೆಯನ್ನು ಆಲಿಸಿದರು. ಜನರು ಅವಳನ್ನು ಕೊಲ್ಲುವುದಕ್ಕೆ ಸಾಗಿಸಿಕೊಂಡು ಹೋಗುತ್ತಿರುವಾಗ ದೇವರು ದಾನಿಯೇಲನೆಂಬ ಯುವಕನಲ್ಲಿದ್ದ ಪವಿತ್ರಾತ್ಮನನ್ನು ಚೇತನಗೊಳಿಸಿದರು. ದಾನಿಯೇಲನು, "ಈ ಮಹಿಳೆಯ ರಕ್ತಪಾತಕ್ಕೆ ನಾನು ಹೊಣೆ ಅಲ್ಲ," ಎಂದು ಕೂಗಿ ಹೇಳಿದನು. ಜನರೆಲ್ಲರು ಅವನ ಕಡೆಗೆ ತಿರುಗಿಕೊಂಡು, "ನೀನು ಆಡಿದ ಮಾತಿನ ಮರ್ಮವೇನು?" ಎಂದು ವಿಚಾರಿಸಿದರು. ಅವನು ಅವರ ಮಧ್ಯೆ ನಿಂತು, "ಇಸ್ರಯೇಲಿನ ಕುಲಪುತ್ರರೇ, ನೀವು ಇಷ್ಟು ಬುದ್ಧಿಹೀನರೋ? ಪರಿಕ್ಷೆಮಾಡದೆ, ಸತ್ಯವನ್ನು ಅರಿತುಕೊಳ್ಳದೆ, ಇಸ್ರಯೇಲಿನ ಕುಲಪುತ್ರಿಯೊಬ್ಬಳಿಗೆ ದಂಡನೆ ವಿಧಿಸಿದಿರೋ? ನ್ಯಾಯಸ್ಥಾನಕ್ಕೆ ಮರಳಿ ಬನ್ನಿ, ಏಕೆಂದರೆ ಇವಳ ಮೇಲೆ ಸುಳ್ಳುಸಾಕ್ಷಿ ಹೇಳಲಾಗಿದೆ," ಎಂದು ಹೇಳಿದನು. ಜನರೆಲ್ಲರು ಕೂಡಲೆ ಹಿಂದಿರುಗಿ ಬಂದರು. ಜನನಾಯಕರು ದಾನಿಯೇಲನಿಗೆ, "ಬಾ, ನಮ್ಮ ನಡುವೆ ಕುಳಿತುಕೊಂಡು ಆ ವಿಷಯವನ್ನು ನಮಗೆ ವಿವರಿಸು. ಹಿರಿಯರಿಗೆ ಕೊಟ್ಟಂಥ ಗೌರವವನ್ನು ದೇವರು ನಿನಗೆ ಕೊಟ್ಟಂತಿದೆ!" ಎಂದರು. ಆಗ ದಾನಿಯೇಲನು, "ಇವರಿಬ್ಬರನ್ನು ಬೇರ್ಪಡಿಸಿ ದೂರದೂರದಲ್ಲಿ ಇಡಿ. ನಾನು ಇವರನ್ನು ಪರೀಕ್ಷಿಸುತ್ತೇನೆ. ಎಂದನು ಅಂತೆಯೇ ಅವರನ್ನು ಬೇರ್ಪಡಿಸಲಾಯಿತು. ಆಮೇಲೆ ಅವರಿಬ್ಬರಲ್ಲಿ ಒಬ್ಬನನ್ನು ಕರೆದು ಅವನಿಗೆ, "ಕೆಟ್ಟತನದಲ್ಲೆ ಬೆಳೆದು ಮುಪ್ಪಾಗಿರುವವನೇ, ನೀನು ಹಿಂದೆ ಮಾಡಿದ ಪಾಪಗಳು ಇಂದು ಬಯಲಿಗೆ ಬಂದಿವೆ. "ನಿರಪರಾಧಿಗೂ ನೀತಿವಂತನಿಗೂ ಮರಣದಂಡನೆ ವಿಧಿಸಲೇಕೂಡದು" ಎಂದು ಸರ್ವೇಶ್ವರಸ್ವಾಮಿ ಹೇಳಿದ್ದರೂ ಅನ್ಯಾಯವಾದ ತೀರ್ಪುಕೊಟ್ಟು, ನರಪರಾಧಿಯನ್ನು ದಂಡಿಸಿ, ಅಪರಾಧಿಗಳನ್ನು ಬಿಡುಗಡೆಮಾಡುತ್ತಾ ಬಂದಿರುವೆ. ಈಗ ಹೇಳು, ಇವಳನ್ನು ನೀನು ನೋಡಿದ್ದೇ ಆದರೆ, ಇವರು ಯಾವ ಗಿಡದ ಅಡಿಯಲ್ಲಿ ಕೂಡಿದ್ದರು, ನನಗೆ ತಿಳಿಸು," ಎಂದನು. ಅದಕ್ಕೆ ಅವನು "ಬಗಿನಿ ಮರದ ಅಡಿಯಲ್ಲಿ," ಎಂದು ಉತ್ತರವಿತ್ತನು ಅದಕ್ಕೆ ದಾನಿಯೇಲನು, "ನಿನ್ನ ಪ್ರಾಣಕ್ಕೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ದೇವದೂತನು ಈಗಲೆ ದೇವರಿಂದ ತೀರ್ಮಾನ ಪಡೆದು ನಿನ್ನನ್ನು ಬಗೆದುಹಾಕಿ, ಎರಡು ತುಂಡಾಗಿ ಮಾಡಲಿದ್ದಾನೆ," ಎಂದು ಹೇಳಿ ಅವನನ್ನು ಪಕ್ಕಕ್ಕೆ ಸರಿಸಿದನು. ಬಳಿಕ ಎರಡನೆಯವನನ್ನುಕರೆತರಲು ಆಜ್ಞಾಪಿಸಿದನು. ಅವನನ್ನು ನೋಡಿ, "ಯೆಹೂದ ವಂಶಕ್ಕೆ ಅಯೋಗ್ಯವಾದ ಎಲೈ ಕಾನಾನ್ ವಂಶಜನೇ, ಸೌಂದರ್ಯವು ನಿನ್ನನ್ನು ಮೋಸಗೊಳಿಸಿತು ಕಾಮವು ನಿನ್ನ ಮನಸ್ಸನ್ನು ಕೆಡಿಸಿತು. ಇಸ್ರಯೇಲಿನ ಕುಲಪುತ್ರಿಯರೊಂದಿಗೆ ನೀವು ಇದೇ ರೀತಿ ವರ್ತಿಸುತ್ತಾ ಬಂದಿರಿ. ಅವರು ಅಂಜಿಕೆಯಿಂದ ನಿಮಗೆ ವಶವಾಗುತ್ತಿದ್ದರು. ಆದರೆ ಜುದೇಯದ ಈ ಕುಲಪುತ್ರಿ ಮಾತ್ರ ನಿಮ್ಮ ಅಧರ್ಮಕ್ಕೆ ಇಂಬುಕೊಡಲಿಲ್ಲ. ಈಗ ಹೇಳು, ಯಾವ ಮರದ ಕೆಳಗೆ ಇವರು ಕೂಡಿದ್ದನ್ನು ನೀನು ಕಂಡುಹಿಡಿದೆ?" ಎಂದನು. ಅವನು, "ಕಡವಾಲ ಮರದ ಕೆಳಗೆ' ಎಂದು ಉತ್ತರಕೊಟ್ಟ. ಆಗ ದಾನಿಯೇಲನು, "ನೀನು ಸಹ ನಿನ್ನ ಕುತ್ತಿಗೆಗೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ನಿನ್ನನ್ನು ಕಡಿದು ಎರಡು ಹೋಳಾಗಿ ಮಾಡಿ ನಿಮ್ಮಿಬ್ಬರನ್ನೂ ನಾಶಮಾಡಲು ದೇವದೂತನು ಕೈಯಲ್ಲಿ ಕತ್ತಿಹಿಡಿದು ಕಾದಿದ್ಧಾನೆ," ಎಂದು ನುಡಿದನು. ಕೂಡಿದ್ದ ಸಭಿಕರೆಲ್ಲರು ಆಗ ಗಟ್ಟಿಯಾಗಿ ಕೂಗುತ್ತಾ, ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸಿ ಕಾಪಾಡುವ ದೇವರನ್ನು ಕೊಂಡಾಡಿದರು. ಅಲ್ಲದೆ, ದಾನಿಯೇಲನು ಆ ಇಬ್ಬರು ಹಿರಿಯರನ್ನು ಸುಳ್ಳು ಸಾಕ್ಷಿಗಳೆಂದು ತೋರಿಸಿಕೊಟ್ಟ ಕಾರಣ, ಸಭಿಕರು ಅವರ ವಿರುದ್ಧ ಎದ್ದು ನಿಂತು ಪ್ರತಿಭಟಿಸಿದರು. ಹೊಟ್ಟೆಕಿಚ್ಚಿನಿಂದ ನೆರೆಯವರ ಮೇಲೆ ಏನು ದಂಡನೆ ತೆರಬೇಕೆಂದಿದ್ದರೋ ಅದನ್ನೇ ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಮೇಲೆ ತಂದು, ಅವರನ್ನು ಕೊಲ್ಲಿಸಿದರು. ಹೀಗೆ ನಿರ್ದೋಷಿಯ ರಕ್ತ, ಅಂದು ಸುರಕ್ಷಿತವಾಯಿತು.
ಕೀರ್ತನೆ: 23:1-3, 3-4, 5, 6
ಶ್ಲೋಕ: ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು ಕಾಣನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ
ಶುಭಸಂದೇಶ: ಯೊವಾನ್ನ 8:12-20
ಯೇಸುಸ್ವಾಮಿ ಜನರನ್ನು ಕಂಡು ಹೀಗೆಂದರು: "ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ." ಅದಕ್ಕೆ ಫರಿಸಾಯರು, "ಈಗ ನೀನು ನಿನ್ನ ಪರವಾಗಿಯೇ ಸಾಕ್ಷಿ ನೀಡುತ್ತಿರುವೆ, ಅಂಥ ಸಾಕ್ಷಿಗೆ ಬೆಲೆಯಿಲ್ಲ," ಎಂದರು. ಅದಕ್ಕೆ ಯೇಸು, "ನಾನೇ ನನ್ನ ಪರವಾಗಿ ಸಾಕ್ಷಿ ನೀಡಿದರೂ ನನ್ನ ಸಾಕ್ಷಿಗೆ ಬೆಲೆಯುಂಟು. ಏಕೆಂದರೆ, ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತಿರುವೆ, ಎಂದು ನನಗೆ ತಿಳಿದಿದೆ. ನಿಮಗಾದರೋ ನಾನು ಬಂದುದು ಎಲ್ಲಿಂದ, ಹೋಗುವುದು ಎಲ್ಲಿಗೆ' ಎಂದು ತಿಳಿಯದು. ನೀವು ತೀರ್ಪು ಕೊಡುವುದು ಲೋಕದ ದೃಷ್ಟಿಯಿಂದ. ನಾನಾದರೋ ಯಾರ ಬಗ್ಗೆಯೂ ತೀರ್ಪು ಕೊಡಲು ಹೋಗುವುದಿಲ್ಲ. ನಾನು ತೀರ್ಪು ಕೊಟ್ಟರೂ ಅದು ಯಥಾರ್ಥವಾದುದು. ಕಾರಣ, ತೀರ್ಪು ಕೊಡುವವನು ನಾನೊಬ್ಬನೇ ಅಲ್ಲ; ನನ್ನನ್ನು ಕಳುಹಿಸಿದ ಪಿತ ಸಹ ನನ್ನೊಡನೆ ಇದ್ದಾರೆ. ಇಬ್ಬರ ಸಾಕ್ಷ್ಯ ಒಂದೇ ಆಗಿದ್ದರೆ ಅದು ಸತ್ಯವೆಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ. ನಾನು ನನ್ನ ಪರವಾಗಿ ಸಾಕ್ಷಿ ಹೇಳುತ್ತೇನೆ; ನನ್ನನ್ನು ಕಳುಹಿಸಿದ ಪಿತ ಸಹ ನನ್ನ ಪರವಾಗಿ ಸಾಕ್ಷಿ ಹೇಳುತ್ತಾರೆ," ಎಂದು ನುಡಿದರು. ಅದಕ್ಕೆ ಅವರು, "ನಿನ್ನ ಪಿತನೆಲ್ಲಿ?" ಎಂದು ಕೇಳಿದರು. ಯೇಸು, "ನೀವು ನನ್ನನ್ನು ಅರಿತಿಲ್ಲ, ನನ್ನ ಪಿತನನ್ನೂ ಅರಿತಿಲ್ಲ. ನೀವು ನನ್ನನ್ನು ಅರಿತಿದ್ದರೆ, ನನ್ನ ಪಿತನನ್ನೂ ಅರಿಯುತ್ತಿದ್ಧಿರಿ," ಎಂದರು. ಮಹಾದೇವಾಲಯದೊಳಗೆ ಕಾಣಿಕೆ ಪೆಟ್ಟಿಗೆಗಳನ್ನಿಟ್ಟ ಕೋಣೆಯಲ್ಲಿ ಯೇಸು ಮಾತಾಡುತ್ತಾ ಹೇಳಿದ ಮಾತುಗಳಿವು. ಅವರ ಗಳಿಗೆ ಇನ್ನೂ ಬಾರದಿದ್ದ ಕಾರಣ ಯಾರೂ ಅವರನ್ನು ಬಂಧಿಸಲಿಲ್ಲ.
ಮನಸಿಗೊಂದಿಷ್ಟು : ಜೀವನದ ಎಷ್ಟೋ ಸಮಸ್ಯೆಗಳಿಗೆ ಮಾನವ ಮಿತಿಯ ಜ್ಞಾನದಿಂದ ಉತ್ತರವಿಲ್ಲ. ಆದರಿಂದಲೇ ಕತ್ತಲಲ್ಲಿರುವವನಿಗೆ ಬೆಳಕು ಅಗತ್ಯ. ಆ ಅಗತ್ಯ ಬೆಳಕು ನಾನೇ ಎನ್ನುತ್ತಾರೆ ಯೇಸು. ಆ ಬೆಳಕನ್ನು ಅರಿಯುತ್ತಾ, ಅದರಲ್ಲೇ ನಡೆಯುವ ಮನಸು ನಮ್ಮದಾದಾಗ ನಾವು ಎಡವುವುದಿಲ್ಲ. ಎಡವಿದರೂ ಎದ್ದು ನಡೆಯಲು ಬೇಕಾದ ದಾರಿ ಪ್ರಕಾಶಮಾನ. ಬೆಳಕತ್ತ ಸಾಗೋಣ, ಕತ್ತಲು ಬೆನ್ನ ಹಿಂದಿರುತ್ತದೆ.
ಪ್ರಶ್ನೆ : ನಾವು ಬೆಳಕತ್ತ ಮುಖ ಮಾಡಿದ್ದೇವೆಯೇ ಅಥವಾ ಬೆನ್ನು ತೋರಿಸುತ್ತಿದ್ದೇವೆಯೇ?
ಪ್ರಶ್ನೆ : ನಾವು ಬೆಳಕತ್ತ ಮುಖ ಮಾಡಿದ್ದೇವೆಯೇ ಅಥವಾ ಬೆನ್ನು ತೋರಿಸುತ್ತಿದ್ದೇವೆಯೇ?
No comments:
Post a Comment