ಮೊದಲನೇ ವಾಚನ: ದಾನಿಯೇಲ 3:14-20, 24-25, 28
ನೆಬೂಕದ್ನಚ್ಚರನು ಉಗ್ರ ಕೋಪಗೊಂಡು ಶದ್ರಕ್, ಮೇಶಕ್, ಹಾಗು ಅಬೇದ್ನೆಗೋ ಎಂಬುವರನ್ನು ಹಿಡಿದುತರಲು ಆಜ್ಞಾಪಿಸಿದನು. ನಂತರ ಅವನು ಅವರಿಗೆ, "ಶದ್ರಕ್, ಮೇಶಕ್, ಹಾಗು ಅಬೇದ್ನೆಗೋ ಎಂಬುವರೇ. ನೀವು ಬೇಕುಬೇಕೆಂದು, ನನ್ನ ದೇವರಿಗೆ ಸೇವೆ ಮಾಡದೆ, ನಾನು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೋ? ಈಗಲಾದರೂ ನೀವು ಸಿದ್ಧರಾಗಿದ್ದು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಕೂಡಲೆ ಅಡ್ಡಬಿದ್ದು ನಾನು ಸ್ಥಾಪಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಇಲ್ಲವಾದರೆ ಈ ಗಳಿಗೆಯಲ್ಲೆ ನಿಮ್ಮನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು. ನಿಮ್ಮನ್ನು ನನ್ನ ಕೈಯಿಂದ ಬಿಡಿಸಬಲ್ಲ ದೇವರು ಯಾರಿದ್ಧಾನೆ?" ಎಂದು ಹೇಳಿದನು. ಇದನ್ನು ಕೇಳಿದ ಶದ್ರಕ್, ಮೇಶಕ್, ಮತ್ತು ಅಬೇದ್ನೆಗೋ ಎಂಬುವರು ರಾಜನಿಗೆ: "ನೆಬೂಕದ್ನೆಚ್ಚರ ಅರಸರೇ, ಈ ವಿಷಯದಲ್ಲಿ ನಾವು ನಿಮಗೆ ಏನನ್ನೂ ಹೇಳಬೇಕಾಗಿಲ್ಲ. ನಾವು ಸೇವೆ ಮಾಡುವ ದೇವರಿಗೆ ಚಿತ್ತವಿದ್ದರೆ ಅವರೇ ಧಗಧಗನೆ ಉರಿಯುವ ಆವಿಗೆಯೊಳಗಿಂದಲೂ ನಮ್ಮನ್ನು ಕಾಪಾಡಬಲ್ಲರು. ಅವರೇ ನಮ್ಮನ್ನು ನಿಮ್ಮ ಕೈಯಿಂದಲೂ ಬಿಡಿಸಬಲ್ಲರು. ಒಂದು ವೇಳೆ ಬಿಡಿಸದಿದ್ದರೂ ರಾಜರೇ, ಇದು ನಿಮಗೆ ತಿಳಿದಿರಲಿ: ನಾವು ನಿಮ್ಮ ದೇವರುಗಳಿಗೆ ಸೇವೆ ಮಾಡುವುದಿಲ್ಲ. ನೀವು ಸ್ಥಾಪಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ ಎಂದು ಉತ್ತರಕೊಟ್ಟರು. ಆಗ ನೆಬೂಕದ್ನೆಚ್ಚರನು ಕೋಪೋದ್ರೇಕಗೊಂಡನು. ಶದ್ರಕ್, ಮೇಶಕ್, ಮತ್ತುಅಬೇದ್ನೆಗೋ ಅವರ ಬಗ್ಗೆ ಅವನ ಮುಖಚರ್ಯೆ ಬದಲಾಯಿತು. ಆವಿಗೆಯನ್ನು ವಾಡಿಕೆಗಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು. ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು. ರಾಜ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳನ್ನು ಕರೆಸಿ, "ನಾವು ಮೂವರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿಸಿದೆವಲ್ಲವೆ?" ಎಂದು ಕೇಳಿದನು. ಅವರು ರಾಜನಿಗೆ, ಹೌದು ಪ್ರಭೂ, ಅದು ಸತ್ಯ," ಎಂದು ಉತ್ತರಕೊಟ್ಟರು. ಅದಕ್ಕೆ ಅವನು, "ಆದರೆ, ಇಗೋ ಕಟ್ಟಿಲ್ಲದ ನಾಲ್ವರನ್ನು ನಾನು ನೋಡುತ್ತಿದ್ದೇನೆ. ಬೆಂಕಿಯಲ್ಲಿ ತಿರುಗಾಡುತ್ತಿದ್ಧಾರೆ; ಅವರಿಗೆ ಯಾವ ಹಾನಿಯೂ ಆಗುತ್ತಿಲ್ಲ. ನಾಲ್ಕನೆಯವನು ರೂಪ ದೇವಪುತ್ರನ ರೂಪದಂತಿದೆ!" ಎಂದು ಹೇಳಿದನು. ನಂತರ ನೆಬೂಕದ್ನೆಚ್ಚರನು, "ಶದ್ರಕ್, ಮೇಶಕ್ ಹಾಗು ಆಬೇದ್ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ! ಆತ ತನ್ನ ದೂತರನ್ನು ಕಳಿಸಿ ತನ್ನಲ್ಲಿ ವಿಶ್ವಾಸವಿಟ್ಟು ಇವರನ್ನು ರಕ್ಷಿಸಿದ್ದಾನೆ. ಇವರೋ ರಾಜಾಜ್ಞೆಯನ್ನೂ ಮೀರಿ ತಮ್ಮ ದೇವರನ್ನೇ ಹೊರತು ಇನ್ನಾವ ದೇವರನ್ನೂ ಪೂಜಿಸಿ ಆರಾಧಿಸಬಾರದೆಂದು ಸ್ವಂತ ದೇಹಗಳನ್ನೇ ಸಾವಿಗೊಪ್ಪಿಸಿದಂಥ ಭಕ್ತರು!" ಎಂದು ಹೇಳಿದನು.
ಅಜರ್ಯನ ಗೀತೆ: 1:29-34
ಶ್ಲೋಕ: ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿತರು
ಶುಭಸಂದೇಶ: ಯೊವಾನ್ನ 8:31-42
ಯೇಸುಸ್ವಾಮಿ ತಮ್ಮಲ್ಲಿ ನಂಬಿಕೆ ಇಟ್ಟಿದ್ಧ ಯೆಹೂದ್ಯರಿಗೆ ಹೀಗೆಂದರು: "ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು. ನೀವು ಸತ್ಯವನ್ನು ಅರಿತುಕೊಳ್ಳುವಿರಿ. ಸತ್ಯವು ನಿಮಗೆ ಸ್ವಾತಂತ್ಯ್ರ ನೀಡುವುದು." ಅದಕ್ಕೆ ಯೆಹೂದ್ಯರು, ನಾವು ಅಬ್ರಹಾಮನ ವಂಶಜರು: ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದ ಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?" ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ. ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವಂತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ. ಪುತ್ರನು ನಿಮಗೆ ಸ್ವಾತಂತ್ಯ್ರ ನೀಡಿದರೆ, ನೀವು ನಿಜವಾಗಿಯೂ ಸ್ವತಂತ್ರರು. ನೀವು ಅಬ್ರಹಾಮನ ವಂಶಜರೆಂದು ನಾನು ಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ. ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕಂಡಿದ್ದನ್ನೇ ನಿರೂಪಿಸುತ್ತವೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತಂದೆಯಿಂದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತವೆ ಎಂದರು. ಆಗ ಆ ಯೆಹೂದ್ಯರು, "ಅಬ್ರಹಾಮನೇ ನಮ್ಮ ತಂದೆ," ಎಂದು ಮರುನುಡಿದರು. . ಯೇಸು, "ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದಂತೆ ನೀವು ಮಾಡುತ್ತಿದ್ದೀರಿ. ಅದಕ್ಕೆ ಬದಲಾಗಿ ದೇವರಿಂದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲ್ಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ ಮಾಡಲಿಲ. ನೀವಾದರೋ ನಿಮಗೆ ತಂದೆಯಾದವನು ಮಾಡಿದಂತೆ ಮಾಡುತ್ತೀರಿ," ಎಂದರು. ಅದಕ್ಕೆ ಅವರು, "ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೇ ನಮ್ಮ ತಂದೆ," ಎಂದು ಪ್ರತಿಭಟಿಸಿದರು. ಯೇಸು, ಅವರಿಗೆ, "ದೇವರೇ ನಿಮ್ಮ ತಂದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ.
ಮನಸಿಗೊಂದಿಷ್ಟು : "ನಮಗೆ ದೇವರ ಮಾತಿಗಿಂತ ನಮ್ಮ ನೆರೆಹೊರೆಯವರ ಮಾತುಗಳೇ ಗಟ್ಟಿಯಾಗಿ ಕೇಳುತ್ತದೆ" ಎನ್ನುತ್ತಾರೆ ಚಿಂತಕರೊಬ್ಬರು. "ಎಷ್ಟೋ ಬಾರಿ ನಾವು ಬೇಕಾಗಿ ಪಾಪಗಳನ್ನು ಮಾಡುವುದಿಲ್ಲ, ಬದಲ್ಲಗಿ ಅಸಹಾಯಕರಾಗಿ ನಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಮಣಿದು ಪಾಪಕ್ಕೆ ಸೋಲುತ್ತೇವೆ" ಎಂಬುದು ಮತ್ತೊಂದು ವಾಕ್ಯ. "ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು" ಎನ್ನುವ ಯೇಸುವಿನ ವಾಕ್ಯಕ್ಕೆ ಶರಣಾಗುವ.
ಪ್ರಶ್ನೆ : ಯೇಸುವಿನ ಶಿಷ್ಯರಾಗುವತ್ತ ನಮ್ಮ ಪ್ರಯತ್ನವೆಷ್ಟು?
No comments:
Post a Comment