ಮೊದಲನೇ ವಾಚನ: ಸುಜ್ಞಾನ ಗ್ರಂಥ 2:1, 12-22
ದೇವರಿಲ್ಲದವರು ಅಪವಾದ ಮಾಡಿಕೊಂಡರು ಈ ಪರಿ: "ನಮ್ಮ ಬದುಕು ಅಲ್ಪಕಾಲಿಕ ಹಾಗು ದುಃಖಕರ, ಮರಣಕ್ಕೆ ಮದ್ದಿಲ್ಲ, ಸತ್ತವರಿಂದ ಹಿಂದಿರುಗಿದವರಿಲ್ಲ. ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ, ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ. ಆರೋಪಿಸುತ್ತಾನೆ, ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು ದೂಷಿಸುತ್ತಾನೆ, ಸಂಪ್ರದಾಯದ ವಿರುದ್ಧ ಪಾಪ ಮಾಡಿದೆವೆಂದು, ಹೇಳಿಕೊಳ್ಳುತ್ತಾನೆ ತಾನೇ ದೇವರನ್ನು ಬಲ್ಲವನೆಂದು, ಕರೆದುಕೊಳ್ಳುತ್ತಾನೆ ತನ್ನನ್ನು ತಾನೇ ದೇವರ ಮಗನೆಂದು ನಮ್ಮ ಆಲೋಚನೆಗಳನ್ನು ಆಕ್ಷೇಪಿಸುವ ವ್ಯಕ್ತಿ ಅವನು, ಅವನನ್ನು ನೋಡಿದ್ದೇ ನಮ್ಮ ಉಲ್ಲಾಸ ಕುಂದಿಹೋಗುವುದು. ಏಕೆಂದರೆ ಅವನು ಇತರರಂತೆ ಅಲ್ಲ, ಅವನ ಮಾರ್ಗವೋ ನಮಗೆ ವಿಚಿತ್ರ, ಅವನ ಎಣಿಕೆಯಲ್ಲಿ ನಾವೆಲ್ಲರು ನಕಲಿ ನಾಣ್ಯದಂತೆ, ನಮ್ಮಿಂದ ದೂರವಾಗುತ್ತಾನೆ ಹೇಸಿಕೆಯನ್ನು ಕಂಡಂತೆ. ನೀತಿವಂತರ ಮರಣ ಸಂತೋಷಕರವೆನ್ನುತ್ತಾನೆ, ದೇವರೇ ತನ್ನ ತಂದೆಯೆಂದು ಕೊಚ್ಚಿಕೊಳ್ಳುತ್ತಾನೆ. ಅವನ ಮಾತುಗಳೇ ಸತ್ಯವೇನೋ ನೋಡೋಣ, ಅವನ ಜೀವಾಂತ್ಯದ ಗತೆ ಏನೆಂದು ಪರೀಕ್ಷಿಸೋಣ ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು, ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ ಕಾಪಾಡಬೇಕು. ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ, ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ, ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ; ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ. "ದೇವರು ರಕ್ಷಿಸುತ್ತಾನೆ" ಎಂದಾಗಿತ್ತಲ್ಲವೇ ಅವನ ವಾದ?" ಈ ಪರಿ ಆಲೋಚಿಸಿ ವಂಚಿತರಾದವರು ದುರುಳರು. ಅವರ ದುಷ್ಟತನವೇ ಅವರನ್ನು ಕುರುಡರನ್ನಾಗಿಸಿತು. ದೇವರ ನಿಗೂಢ ಯೋಜನೆಯನ್ನು ಅವರು ಅರಿಯಲಿಲ್ಲ ಪವಿತ್ರ ಜೀವನಕ್ಕೆ ದೊರಕುವ ಫಲವನ್ನು ಹಾರೈಸಲಿಲ್ಲ, ನಿರ್ದೋಷಿಗಳಿಗೆ ಸಂಭಾವನೆಯಿದೆಯೆಂದು ನಂಬಲಿಲ್ಲ.
ಕೀರ್ತನೆ: 34:17-18, 19-20, 21, 23
ಶ್ಲೋಕ: ಸನಿಹದಲ್ಲಿಹನು ಪ್ರಭು ಬಗ್ನ ಹೃದಯಿಗಳಿಗೆ
ಶುಭಸಂದೇಶ: ಯೊವಾನ್ನ 7:1-2, 10, 25-30
ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ. ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿತ್ತು. ಯೇಸುವಿನ ಸೋದರರು ಹಬ್ಬಕ್ಕೆ ಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ. ಜೆರುಸಲೇಮಿನ ಕೆಲವು ಮಂದಿ ಇದನ್ನು ಕೇಳಿ, "ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೆ? ಇಗೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ಧವಾಗಿ ಅವರಾರೂ ಮಾತೆತ್ತುತ್ತಿಲ್ಲ! ಈತನೇ ಲೋಕೋದ್ಧರಕನೆಂದು ಆ ಮುಖಂಡರಿಗೆ ಹೊಳೆದಿರಬಹುದೆ? ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದವನೆಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿಂದ ಬಂದವನೆಂದು ನಮಗೆಲ್ಲರಿಗೂ ತಿಳಿದಿದೆಯಲ್ಲಾ!" ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದುದರಿಂದ ದೇವಾಲಯದಲ್ಲಿ ಭೋಧಿಸುತ್ತಿದ್ದ ಯೇಸುಸ್ವಾಮಿ ಗಟ್ಟಿಯಾಗಿ ಇಂತೆಂದರು: "ನಾನು ಯಾರೆಂದು, ಎಲ್ಲಿಂದ ಬಂದವನೆಂದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬಂದವನಲ್ಲ; ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ, ಆತನನ್ನು ನೀವು ಅರಿತಿಲ್ಲ. ನಾನಾದರೋ ಆತನನ್ನು ಅರಿತಿದ್ದೇನೆ. ಏಕೆಂದರೆ, ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು," ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ.
ಮನಸ್ಸಿಗೊಂದಿಷ್ಟು : ಪಿತ ದೇವರನ್ನು ಅತ್ಯಂತ ಹತ್ತಿರದಿಂದ ನೋಡಿದವರು ಬಲ್ಲವರು ಯೇಸು ಎಂಬುದನ್ನು ಅವರೇ ಹೇಳುತ್ತಾರೆ. ಅಂದ ಮೇಲೆ ಪಿತನಿಗೆ ಯಾವುದು ಇಷ್ಟ, ಯಾವುದು ಬೇಕು ಎಂಬುದನ್ನು ಯೇಸು ಹೇಳಿದಾಗ ಅದು ನಮಗೆ ಅಂತಿಮ ಸಂದೇಶವಾಗಬೇಕಲ್ಲವೇ? ಅಂತೆಯೇ ಇಂದಿನ ಶುಭಸಂದೇಶದಲ್ಲಿ ಯೆಹೂದ್ಯರಿಗೆ ಯೇಸುವಿನ ಮಾತು ರುಚಿಸಲಿಲ್ಲವೂ, ಹಾಗೆಯೇ ನಮ್ಮ ಪ್ರತಿ ದಿನದ ನಡೆ ನುಡಿಗಳಲ್ಲೂ ನಾವು ಯೇಸುವಿಗೆ ವಿರೋಧವಾಗಿಯೇ ಇರುತ್ತೇವಲ್ಲವೇ?
No comments:
Post a Comment