ಮೊದಲನೇ ವಾಚನ: ತೊಬೀತ 2: 9-14
ಅದೇ ರಾತ್ರಿ ಸ್ನಾನಮಾಡಿಕೊಂಡು ನನ್ನ ಅಂಗಳದ ಗೋಡೆಯ ಪಕ್ಕದಲ್ಲೇ ಮಲಗಿಕೊಂಡೆ. ಸೆಕೆಯಾಗಿದ್ದರಿಂದ ಮುಖವನ್ನು ಮುಚ್ಚಿಕೊಳ್ಳಲಿಲ್ಲ. ತಲೆಯ ಮೇಲ್ಭಾಗದ ಗೋಡೆಯಲ್ಲಿ ಗುಬ್ಬಚ್ಚಿಗಳಿದ್ದವೆಂದು ನನಗೆ ತಿಳಿದಿರಲಿಲ್ಲ. ಅವುಗಳ ಬಿಸಿಬಿಸಿ ಪಿಚ್ಚಿಕೆಗಳು ಕಣ್ಣುಗಳಿಗೆ ಬಿದ್ದವು. ಕಣ್ಣುಗಳ ಮೇಲೆ ಬಿಳಿಮಚ್ಚೆಗಳು ಉಂಟಾದವು. ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದೆ. ಮುಲಾಮುಗಳಿಂದ ಅದನ್ನು ಗುಣಪಡಿಸಲು ಅವರು ಪ್ರಯತ್ನಿಸಿದಷ್ಟೂ ನನ್ನ ದೃಷ್ಟಿ ಕಡಿಮೆಯಾಯಿತು. ಕೊನೆಗೆ ನಾನು ಸಂಪೂರ್ಣವಾಗಿ ಕುರುಡನಾದೆ. ನಾಲ್ಕು ವರ್ಷಗಳ ಕಾಲ ದೃಷ್ಟಿಯಿಲ್ಲದೆ ಇದ್ದೆ. ನನ್ನ ಬಂಧುಬಳಗದವರೆಲ್ಲ ನನ್ನ ಬಗ್ಗೆ ಅನುಕಂಪ ತಾಳಿದ್ದರು. ಅಹೀಕರನು ಎಲಾಮಿಯಸಿಗೆ ಹೋಗುವತನಕ ಎರಡು ವರ್ಷಕಾಲ ನನಗೆ ಜೀವನಾಂಶವನ್ನು ಒದಗಿಸಿ ಕೊಟ್ಟನು. ಅಹೀಕರನು ಹೊರಟುಹೋದ ತರುವಾಯ ನನ್ನ ಪತ್ನಿ ಅನ್ನಾ ದುಡಿಯಬೇಕಾಗಿ ಬಂತು. ಅವಳು ಉಣ್ಣೆಯಿಂದ ನೂಲುತೆಗೆದು ಬಟ್ಟೆಯನ್ನು ನೇಯುತ್ತಿದ್ದಳು. ಕ್ರಯಮಾಡಿದವರಿಗೆ ಬಟ್ಟೆಯನ್ನು ತಲುಪಿಸಿ ಅವರಿಂದ ಹಣಪಡೆಯುತ್ತಿದ್ದಳು. ಡಿಸ್ಪ್ರೋಸ್ ತಿಂಗಳ ಏಳನೆಯ ದಿನದಂದು ತಾನೇ ನೆಯ್ದ ಬಟ್ಟೆಯ ತುಂಡೊಂದನ್ನು ಗೊತ್ತುಮಾಡಿದವರಿಗೆ ಕೊಟ್ಟಳು. ಅವರು ಅದಕ್ಕೆ ಪೂರ್ತಿ ಹಣವನ್ನು ಪಾವತಿ ಮಾಡಿದ್ದಲ್ಲದೆ ಊಟಕ್ಕೆಂದು ಒಂದು ಮೇಕೆಯನ್ನು ಸಹ ಕೊಡುಗೆಯಾಗಿ ಕೊಟ್ಟರು. ಆ ಮೇಕೆ ಮನೆಗೆ ಬಂದಾಗ ಅರಚಲು ಆರಂಭಿಸಿತು. ಆಗ ನನ್ನಾಕೆಯನ್ನು ಕರೆದು, “ಈ ಮೇಕೆ ಎಲ್ಲಿಂದ ಬಂತು? ಇದು ಕದ್ದು ತಂದ ಮೇಕೆಯಲ್ಲ ತಾನೇ? ಕದ್ದವಸ್ತುವನ್ನು ತಿನ್ನಲು ನಮಗೆ ಹಕ್ಕಿಲ್ಲ. ಇದನ್ನು ಮಾಲೀಕರಿಗೆ ಹಿಂದಿರುಗಿಸು,” ಎಂದು ಹೇಳಿದೆ. ಆದರೆ ಆಕೆ, “ಇಲ್ಲ, ನನ್ನ ಕೂಲಿಗಿಂತ ಹೆಚ್ಚಾಗಿ ಇದನ್ನು ಕೊಡುಗೆಯಾಗಿ ನನಗೆ ಕೊಟ್ಟರು,” ಎಂದು ಹೇಳಿದಳು. ನಾನು ಆಕೆಯನ್ನು ನಂಬಲಿಲ್ಲ. ಮಾಲೀಕರಿಗೆ ಅದನ್ನು ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದೆ. ಅವಳ ನಡತೆಯ ವಿಷಯದಲ್ಲಿ ನನಗೆ ತೀವ್ರ ನಾಚಿಕೆಯಾಯಿತು. ಅದಕ್ಕವಳು, “ನಿನ್ನ ದಾನಧರ್ಮ ಏನಾಯಿತು? ನಿನ್ನ ಸತ್ಕಾರ್ಯಗಳಿಂದ ಏನು ಬಂತು? ಅವುಗಳಿಂದ ನಿನಗೆ ಲಭಿಸಿದ ಪ್ರತಿಫಲ ಎಲ್ಲರಿಗೂ ಗೊತ್ತಾದ ವಿಷಯ!” ಎಂದು ಜರೆದಳು.
ಕೀರ್ತನೆ: 112: 1-2, 7-9
ಶ್ಲೋಕ: ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ
ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು
ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು
ಬಲಿಷ್ಠವಾಗುವುದು ಜಗದೊಳು ಅವನ ಸಂತಾನ
ಸಜ್ಜನರ ಸಂತತಿ ಪಡೆವುದು ಆಶೀರ್ವಚನ. ಶ್ಲೋಕ
ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ
ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ
ದೃಢವಿದೆ ಅವನ ಮನ, ಎದೆಗುಂದನವನು
ಕಾಣುವನು ದುರುಳರಿಗಾಗುವ ದಂಡನೆಯನು. ಶ್ಲೋಕ
ಉದಾರತೆಯಿಂದ ಕೊಡುವನು ಬಡವರಿಗೆ
ಫಲಿಸುವುದು ಅವನಾ ನೀತಿ ಸದಾಕಾಲಕೆ
ಮಹಿಮೆತರುವ ಕೋಡುಮೂಡುವುದು ಅವನಿಗೆ. ಶ್ಲೋಕ
ಶುಭಸಂದೇಶ: ಮಾರ್ಕ 12: 13-17
ಆಮೇಲೆ ಅವರು ಯೇಸುಸ್ವಾಮಿಯನ್ನು ಮಾತಿನಲ್ಲೇ ಸಿಕ್ಕಿಸುವ ಉದ್ದೇಶದಿಂದ ಕೆಲವು ಫರಿಸಾಯರನ್ನೂ ಹೆರೋದನ ಪಕ್ಷದ ಕೆಲವರನ್ನೂ ಅವರ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸ್ಥಾನಮಾನಕ್ಕೆ ಮಣಿಯದವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು ಎಂದು ನಾವು ಬಲ್ಲೆವು. ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ, ಅಲ್ಲವೋ? ನಾವದನ್ನು ಕೊಡಬೇಕೋ, ಬೇಡವೋ?” ಎಂದು ಕೇಳಿದರು. ಅವರ ಕಪಟತನವನ್ನು ಯೇಸು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತನ್ನಿ, ಅದನ್ನು ನೋಡೋಣ,” ಎಂದರು. ಅವರೊಂದು ನಾಣ್ಯವನ್ನು ತಂದರು. “ಇದರ ಮೇಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಯೇಸು ಕೇಳಿದರು. ಅದಕ್ಕೆ ಅವರು “ಅವು ರೋಮ್ ಚಕ್ರವರ್ತಿಯವು,” ಎಂದರು. ಆಗ ಯೇಸು, “ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದರು. ಇದನ್ನು ಕೇಳಿದ್ದೇ ಆ ಜನರು ಯೇಸುವಿನ ಬಗ್ಗೆ ಅತ್ಯಾಶ್ಚರ್ಯಪಟ್ಟರು.
No comments:
Post a Comment