ಮೊದಲನೇ ವಾಚನ: ಜೆಫನ್ಯ 3: 14-18
ಹರ್ಷಧ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು, ಜೆರುಸಲೇಮ್ ನಗರವೇ. ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ. ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: “ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು.” ಪ್ರಸನ್ನವಾಗಿಹನು ದೇವ, ಸರ್ವೇಶ ನಿನ್ನ ಮಧ್ಯೆ ಕೊಡುವನಾ ಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ ಪುನಶ್ಚೇತನಗೊಳಿಸುವನು ನಿನ್ನನು ಪ್ರಶಾಂತ ಪ್ರೀತಿಯಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ. ತಡೆದುಬಿಡುವನು ಸರ್ವವಿನಾಶವನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನು.
ಯೆಶಾಯ 12: 2-6
ಶ್ಲೋಕ: ಹಾಡಿರಿ ಮಾಡಿರಿ ಭಜನ, ಇಸ್ರಯೇಲಿನಾ ಸ್ವಾಮಿ ಪರಮ ಪಾವನ
ದೇವರೇ ಉದ್ಧಾರಕನೆನಗೆ ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ.
ದೇವಾದಿದೇವನೇ ಎನಗೆ ಶಕ್ತಿ
ಆತನೆನ್ನ ಕೀರ್ತನೆಯ ವ್ಯಕ್ತಿ ತಂದಿಹನಾತ ಎನಗೆ ಮುಕ್ತಿ.”
ಉದ್ಧರಿಸುವಾ ಒರತೆಗಳಿಂದ ಸೇದುವಿರಿ ನೀರನು ಹರುಷದಿಂದ. // ಶ್ಲೋಕ
“ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು
ಸ್ಮರಿಸಿರಿ ಆತನ ಶ್ರೀನಾಮವನು
ಸಾರಿರಿ ಜನತೆಗೆ ಆತನ ಕಾರ್ಯಗಳನು
ಘೋಷಿಸಿರಿ ಆತನ ನಾಮ ಘನತೆಯನು. // ಶ್ಲೋಕ
ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು
ಎಸಗಿಹನಾತ ಮಹಿಮಾ ಕಾರ್ಯಗಳನು
ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು.
ಸಿಯೋನಿನ ನಿವಾಸಿಗಳೇ, ಹಾಡಿರಿ, ಮಾಡಿರಿ ಭಜನ
ನಿಮ್ಮ ಮಧ್ಯೆಯಿರುವ ಆ ಘನವಂತನ
ಇಸ್ರಯೇಲಿನಾ ಸ್ವಾಮಿ ಪರಮಪಾವನ.” // ಶ್ಲೋಕ
ಶುಭಸಂದೇಶ: ಲೂಕ 1: 39-56
ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” ಮರಿಯಳ ಸ್ತುತಿಗೀತೆ ಆಗ ಹೀಗೆಂದು ಮರಿಯಳು ಹೊಗಳಿದಳು: “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ !! ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ ! ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ !! ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ !! ಆತನಲ್ಲಿ ಭಯಭಕ್ತಿಯುಳ್ಳವರಿಗೆ ! ಆತನ ಪ್ರೀತಿ ತಲತಲಾಂತರದವರೆಗೆ !! ಗರ್ವಹೃದಯಿಗಳನಾತ ಚದರಿಸಿರುವನು ! ಪ್ರದರ್ಶಿಸಿರುವನು ತನ್ನ ಬಾಹುಬಲವನು !! ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ! ಏರಿಸಿರುವನು ಉನ್ನತಿಗೆ ದೀನದಲಿತರನು !! ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ ! ಹೊರದೂಡಿರುವನು ಸಿರಿವಂತರನು ಬರೀಗೈಯಲಿ !! ನೆರವಾದನು ತನ್ನ ದಾಸ ಇಸ್ರಯೇಲನಿಗೆ ! ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ !! ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ! ಅವನ ಸಂತತಿಗೆ, ಯುಗಯುಗಾಂತರದವರೆಗೆ !! ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.
No comments:
Post a Comment