ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.05.21

ಮೊದಲನೇ ವಾಚನ: ಸಿರಾಖ 42: 15-25

ಸರ್ವೇಶ್ವರನ ಕೆಲಸಗಳನ್ನು ಕುರಿತು ಈಗ ನೆನಪು ಮಾಡಿಕೊಡುತ್ತೇನೆ: ನಾನು ಕಂಡ ಸಂಗತಿಗಳನ್ನು ವಿವರಿಸುತ್ತೇನೆ: ಸರ್ವೇಶ್ವರನ ವಾಣಿಯ ಪ್ರಕಾರ ಆತನ ಕಾರ್ಯ ನೆರವೇರಿದೆ ಸೃಷ್ಟಿಸಮಸ್ತವೂ ಆತನ ಆಜ್ಞೆಗಳನ್ನು ಅನುಸರಿಸುತ್ತವೆ. ಪ್ರಕಾಶಕೊಡುವ ಸೂರ್ಯ ಎಲ್ಲವನ್ನು ದೃಷ್ಟಿಸುವನು ಸರ್ವೇಶ್ವರನ ಕೆಲಸ ಆತನ ಮಹಿಮೆಯಿಂದ ತುಂಬಿರುವುದು. ಸರ್ವೇಶ್ವರನ ಮಹತ್ಕಾರ್ಯಗಳನ್ನು ವಿವರಿಸುವ ಶಕ್ತಿಯನ್ನು ಆತ ಕೊಟ್ಟಿಲ್ಲ ತನ್ನ ದೇವದೂತರಿಗೂ. ಎಲ್ಲವೂ ತನ್ನ ಮಹಿಮೆಯಲ್ಲೇ ನೆಲೆಗೊಂಡಿರುವಂತೆ ಸ್ಥಾಪಿಸಿದವ ಸರ್ವಶಕ್ತನಾದ ಸರ್ವೇಶ್ವರನೇ. ಮಹೋನ್ನತ ಸರ್ವೇಶ್ವರ ತಿಳಿದಿರುವನು ಸರ್ವಜ್ಞಾನವನು, ಯುಗದ ಲಕ್ಷಣವನು; ಎಂದೇ ಪರಿಶೋಧಿಸಿಹನು ಪ್ರಪಾತವನು, ಹೃದಯವನು; ಬಲ್ಲನಾತನು ಅವುಗಳ ತಂತ್ರಕುತಂತ್ರಗಳನು. ಪ್ರಕಟಪಡಿಸುವನು ಹಿಂದೆ ನಡೆದವುಗಳನು ಮುಂದೆ ನಡೆಯುವಂಥವುಗಳನು ಶ್ರುತಪಡಿಸಬಲ್ಲನಾತನು ಗುಪ್ತವಾದುವುಗಳ ಸುಳಿವನು. ಯಾವ ಕಲ್ಪನೆಯೂ ಆತನಿಂದ ತಪ್ಪಿಸಿಕೊಳ್ಳದು ಯಾವ ಮಾತೂ ಆತನಿಗೆ ಮರೆಯಾಗಿರದು. ಯುಗಯುಗಾಂತರಕ್ಕೂ ಇರುವಾತನವನು ತನ್ನ ಜ್ಞಾನದ ಮಹತ್ಕಾರ್ಯಗಳನು ಕ್ರಮಪಡಿಸಿದರುವನು ಅದಕ್ಕೆ ಯಾವುದನ್ನು ಕೂಡಿಸಲಿಲ್ಲ, ಯಾವುದನ್ನು ಅದರಿಂದ ಕಳೆದಿಲ್ಲ ಸಲಹೆಗಾರನ ಅಗತ್ಯವೂ ಆತನಿಗಿರಲಿಲ್ಲ. ಆಹಾ, ಆತನ ಕಾರ್ಯಗಳು ಎಷ್ಟು ಅಪೇಕ್ಷಣೀಯ! ಆತನ ಕೆಲಸಗಳು ಎಷ್ಟು ತೇಜೋಮಯ! ಇವೆಲ್ಲವು ಅವುಗಳ ಪ್ರಯೋಜನಕ್ಕನುಸಾರ ಜೀವಿಸುತ್ತವೆ ನಿತ್ಯಕ್ಕೂ ಉಳಿಯುತ್ತವೆ, ಆತನಿಗೆ ವಿಧೇಯವಾಗಿರುತ್ತವೆ. ಎಲ್ಲ ಸಂಗತಿಗಳಿರುವುವು ದ್ವಂದ್ವವಾಗಿ ಒಂದು ಇನ್ನೊಂದಕ್ಕೆ ಎದುರಾಗಿ ಆತ ಯಾವುದನ್ನೂ ಮಾಡಿಲ್ಲ ಅಪೂರ್ಣವಾಗಿ. ವೈಶಿಷ್ಟ್ಯತೆಯಲ್ಲಿ ಒಂದು ಪರಿಪೂರ್ಣಗೊಳ್ಳುತ್ತದೆ ಇನ್ನೊಂದರಿಂದ. ಆತನ ಮಹಿಮೆಯನ್ನು ಪೂರ್ತಿಯಾಗಿ ಗ್ರಹಿಸಲು ಯಾರಿಂದ ಸಾಧ್ಯ?

ಕೀರ್ತನೆ: 33: 2-3, 4-5, 6-7, 8-9
ಶ್ಲೋಕ: ಸೃಷ್ಟಿಯಾಯಿತು ಗಗನಮಂಡಲ ಆತನ ನುಡಿಯೊಂದಕೆ. 

ಶುಭಸಂದೇಶ: ಮಾರ್ಕ 10: 46-52

ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡಗುಂಪು ಅವರನ್ನು ಹಿಂಬಾಲಿಸಿತು. ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್‍ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ, ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. ಅನೇಕರು ‘ಸುಮ್ಮನಿರು’ ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಇನ್ನಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, “ಅವನನ್ನು ಕರೆದುಕೊಂಡು ಬನ್ನಿ,” ಎಂದು ಅಪ್ಪಣೆಮಾಡಿದರು. ಅವರು ಹೋಗಿ, “ಏಳು, ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದಾರೆ,” ಎಂದು ಹೇಳಿದರು. ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೇ ಬಿಟ್ಟು ತಟ್ಟನೆ ಎದ್ದು, ಯೇಸುವಿನ ಬಳಿಗೆ ಬಂದನು. ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಕೇಳಿದರು. ಅದಕ್ಕೆ ಅವನು, “ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, “ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು.

No comments:

Post a Comment