ಮೊದಲನೇ ವಾಚನ: ಸಿರಾಖ 44:1, 9-13
ಪೂರ್ವಜರ ಸ್ತುತಿ ವಂದನೆ ಸಲ್ಲಿಸೋಣ ನಾವೀಗ ಪ್ರಸಿದ್ಧ ಪುರುಷರಿಗೆ ನಮ್ಮನ್ನು ಪಡೆದ ನಮ್ಮ ಕುಲದ ಮೂಲಪಿತೃಗಳಿಗೆ. ಇನ್ನು ಕೆಲವರು ಯಾವ ಸ್ಮಾರಕವೂ ಇಲ್ಲದೆ ಎಂದೂ ಇಲ್ಲದ್ದವರಂತೆ ಗತಿಸಿಹೋದರು ಹುಟ್ಟಲಿಲ್ಲವೇನೋ ಎಂಬಂತೆ ಕಣ್ಮರೆಯಾಗಿ ಹೋದರು ಅವರ ನಂತರ ಅವರ ಮಕ್ಕಳು ಸಹ ಅವರಂತೆ ಹೋಗಿಬಿಟ್ಟರು. ಆದರೆ ಅವರು ದಯಾಳುಗಳಾಗಿದ್ದರು ಮರೆತು ಹೋಗಲಿಲ್ಲ ಅವರ ಸತ್ಕಾರ್ಯಗಳು. ಒಳ್ಳೆಯ ಸೊತ್ತು ಸದಾ ಉಳಿಯುವುದು ಅವರ ಪೀಳಿಗೆಯಲ್ಲಿ ಅವರ ಮಕ್ಕಳು ಸ್ಥಿರವಾಗಿರುವರು ಒಡಂಬಡಿಕೆಯ ಅನುಸರಣೆಯಲ್ಲಿ. ಅವರ ಸಂತಾನ ಸ್ಥಿರವಾಗಿರುವುದು ಒಡಂಬಡಿಕೆಯ ಪಾಲನೆಯಲ್ಲಿ ಅವರ ಮಕ್ಕಳೂ ಸಹ ನೆಲೆಯಾಗಿ ನಿಲ್ಲುವರು ಅದರ ಅನ್ವೇಷಣೆಯಲ್ಲಿ. ಉಳಿಯುವುದು ಅವರ ಸಂತಾನ ಎಂದೆಂದಿಗು ಅವರ ಗೌರವ ಅಳಿಸಿಹೋಗದು.
ಕೀರ್ತನೆ: 149:1-2, 3-4, 5-6, 9
ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು.
ಶುಭಸಂದೇಶ: ಮಾರ್ಕ 11: 11-26
ಯೇಸು ಜೆರುಸಲೇಮನ್ನು ಸೇರಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ನೋಡುವಷ್ಟರಲ್ಲಿ ಕತ್ತಲಾಗುತ್ತಾ ಬಂದಿತು; ಆದುದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು, ಅವರು ಬೆಥಾನಿಯಕ್ಕೆ ಹೊರಟುಹೋದರು. ಮರುದಿನ ಅವರೆಲ್ಲರೂ ಬೆಥಾನಿಯದಿಂದ ಜೆರುಸಲೇಮಿಗೆ ಬರುತ್ತಿದ್ದಾಗ ಯೇಸುಸ್ವಾಮಿಗೆ ಹಸಿವಾಯಿತು. ದೂರದಲ್ಲಿ ಎಲೆ ತುಂಬಿದ ಅಂಜೂರದ ಮರವೊಂದು ಕಣ್ಣಿಗೆ ಬಿದ್ದಿತು. ಅದರಲ್ಲಿ ಹಣ್ಣೇನಾದರೂ ಸಿಕ್ಕೀತೆಂದು ಅಲ್ಲಿಗೆ ಹೋದರು. ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳೇ ಹೊರತು ಇನ್ನೇನೂ ಕಾಣಲಿಲ್ಲ. ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. ಯೇಸು ಆ ಮರಕ್ಕೆ, “ಇನ್ನು ಮುಂದೆ ನಿನ್ನ ಹಣ್ಣನ್ನು ಯಾರೂ ಎಂದಿಗೂ ತಿನ್ನದಂತಾಗಲಿ,” ಎಂದರು. ಶಿಷ್ಯರು ಈ ಮಾತುಗಳನ್ನು ಕೇಳಿಸಿಕೊಂಡರು. ತರುವಾಯ ಅವರು ಜೆರುಸಲೇಮಿಗೆ ಬಂದರು. ಯೇಸುಸ್ವಾಮಿ ಮಹಾದೇವಾಲಯಕ್ಕೆ ಹೋಗಿ, ಅಲ್ಲಿ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟತೊಡಗಿದರು; ನಾಣ್ಯ ವಿನಿಮಯ ಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿದರು; ಪಾರಿವಾಳಗಳನ್ನು ಮಾರುತ್ತಿದ್ದವರ ಮಣೆಗಳನ್ನು ಉರುಳಿಸಿದರು. ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದು ಹೋಗುವವರನ್ನು ತಡೆದರು. “ ‘ಸರ್ವಜನಾಂಗಗಳಿಗೂ ಪ್ರಾರ್ಥನಾಲಯ ನನ್ನೀ ಆಲಯ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ ಅಲ್ಲವೇ? ನೀವು ಅದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾಡಿದ್ದೀರಿ,” ಎಂದು ಯೇಸು ಅವರಿಗೆ ಬುದ್ಧಿಹೇಳಿದರು. ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ನಡೆದ ಈ ಸಂಗತಿಯನ್ನು ಕೇಳಿ ಯೇಸುವನ್ನು ಕೊಲ್ಲಿಸುವ ಮಾರ್ಗವನ್ನು ಹುಡುಕ ತೊಡಗಿದರು. ಏಕೆಂದರೆ, ಯೇಸುವನ್ನು ಕಂಡರೆ ಅವರಿಗೆ ಭಯವಿತ್ತು. ಕಾರಣ - ಜನರೆಲ್ಲರೂ ಅವರ ಬೋಧನೆಗೆ ಮಾರುಹೋಗಿದ್ದರು. ಸೂರ್ಯಾಸ್ತಮದ ಬಳಿಕ ಯೇಸು ಮತ್ತು ಶಿಷ್ಯರು ಪಟ್ಟಣದಿಂದ ಹೊರಗೆ ಹೋದರು. ಬೆಳಿಗ್ಗೆ ಅವರೆಲ್ಲರೂ ಅದೇ ಮಾರ್ಗವಾಗಿ ಹಿಂದಿರುಗುವಾಗ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು. ಪೇತ್ರನು ಹಿಂದಿನ ದಿನ ನಡೆದುದನ್ನು ಸ್ಮರಿಸಿಕೊಂಡು, ಯೇಸುಸ್ವಾಮಿಗೆ, “ಗುರುವೇ, ತಾವು ಶಪಿಸಿದ ಆ ಅಂಜೂರದ ಮರ ಈಗ ಒಣಗಿ ಹೋಗಿದೆ,” ಎಂದನು. ಅದಕ್ಕೆ ಯೇಸು, “ನಿಮಗೆ ದೇವರಲ್ಲಿ ವಿಶ್ವಾಸವಿರಲಿ, ಆಗ ಯಾವನಾದರೂ ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ, ಮನಸ್ಸಿನಲ್ಲಿ ಸಂದೇಹಪಡದೆ, ಅದು ಸಂಭವಿಸುವುದೆಂದು ವಿಶ್ವಾಸಿಸಿದರೆ, ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಅವನು ಹೇಳಿದಂತೆಯೇ ಆಗುವುದು. ಆದುದರಿಂದ ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಪಡೆದಾಯಿತೆಂದು ವಿಶ್ವಾಸಿಸಿರಿ; ಅದು ಲಭಿಸುವುದು ನಿಶ್ಚಯವೆಂದು ನಿಮಗೆ ಹೇಳುತ್ತೇನೆ. ಇದಲ್ಲದೆ, ನೀವು ಪ್ರಾರ್ಥನೆ ಮಾಡುವಾಗಲೆಲ್ಲ, ಯಾರಿಗಾದರೂ ವಿರೋಧವಾಗಿ ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ, ಅದನ್ನು ಕ್ಷಮಿಸಿಬಿಡಿ, ಆಗ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸಿ ಬಿಡುವರು.”
No comments:
Post a Comment