ಮೊದಲನೇ ವಾಚನ: ಸಿರಾಖ 36: 1-2, 5-6, 11-17
ಇಸ್ರಯೇಲಿಗಾಗಿ ಪ್ರಾರ್ಥನೆ ಎಲ್ಲರ ದೇವರಾದ ಒಡೆಯಾ, ನಮ್ಮನು ಕರುಣಿಸು, ಕಟಾಕ್ಷಿಸು ಎಲ್ಲ ಜನಾಂಗಗಳಲ್ಲು ನಿನ್ನ ಭಯಭಕ್ತಿಯನು ಹುಟ್ಟಿಸು. ಇಸ್ರಯೇಲಿಗಾಗಿ ಪ್ರಾರ್ಥನೆ ಎಲ್ಲರ ದೇವರಾದ ಒಡೆಯಾ, ನಮ್ಮನು ಕರುಣಿಸು, ಕಟಾಕ್ಷಿಸು ಎಲ್ಲ ಜನಾಂಗಗಳಲ್ಲು ನಿನ್ನ ಭಯಭಕ್ತಿಯನು ಹುಟ್ಟಿಸು. ಸರ್ವೇಶ್ವರಾ ನೀನೊಬ್ಬನೇ ಹೊರತು ಬೇರೆ ದೇವರಿಲ್ಲ ನಾವು ನಿನ್ನನು ಅರಿತುಕೊಂಡಂತೆ ಅರಿತುಕೊಳ್ಳಲಿ ಅವರೆಲ್ಲ. ಹೊಸ ಹೊಸ ಸೂಚಕಕಾರ್ಯಗಳನ್ನು ತೋರಿಸು ತರತರದ ಅದ್ಭುತಕಾರ್ಯಗಳನ್ನು ನಡೆಸು ನಿನ್ನ ಹಸ್ತದ, ನಿನ್ನ ಭುಜಬಲದ ಶಕ್ತಿಯನ್ನು ಪ್ರದರ್ಶಿಸು. ಒಟ್ಟುಗೂಡಿಸು ಯಕೋಬನ ಕುಲಗಳನ್ನೆಲ್ಲಾ ಮೊದಲಿನಂತೆ ಸ್ವಾಸ್ತ್ಯವಾಗಿ ತೆಗೆದುಕೊ ಅವರನ್ನೆಲ್ಲಾ. ಸರ್ವೇಶ್ವರಾ, ಕರುಣಿಸು ನಿನ್ನ ಹೆಸರಿನಿಂದ ಕರೆಯಲಾಗುವ ಜನರನು ಚೊಚ್ಚಲು ಮಗನಿಗೆ ಹೋಲಿಸಿದ ಇಸ್ರಯೇಲನು. ದಯೆತೋರು ನಿನ್ನ ಪವಿತ್ರಾಲಯವಿರುವ ಪಟ್ಟಣದ ಮೇಲೆ ಹೌದು, ನಿನ್ನ ವಾಸಸ್ಥಾನವಾಗಿರುವ ಜೆರುಸಲೇಮಿನ ಮೇಲೆ. ಸಿಯೋನ್ ನಗರ ತುಂಬಿರಲಿ ನಿನ್ನ ಪರಾಕ್ರಮ ಕೃತ್ಯಗಳ ಸುದ್ದಿಯಿಂದ ನಿನ್ನ ಜನರು ಬೆಳಗಲಿ ನಿನ್ನ ಮಹಿಮಾ ಪ್ರಭಾವದಿಂದ. ಆದಿಯಲ್ಲೇ ಸೃಷ್ಟಿಯಾದವರಿಗೆ ನಿನ್ನ ಕುರಿತ ಸಾಕ್ಷಿ ದೊರಕಲಿ ನಿನ್ನ ಪ್ರವಾದಿಗಳು ನುಡಿದದ್ದೆಲ್ಲ ಈಡೇರಲಿ. ನಿನ್ನನು ನಿರೀಕ್ಷಿಸಿದವರಿಗೆ ಪ್ರತಿಫಲ ದೊರಕಲಿ ಜನರು ನಿನ್ನ ಪ್ರವಾದಿಗಳಲಿ ಭರವಸೆಯಿಡಲಿ. ನಿನ್ನ ಜನರನು ಆರೋನನು ಆಶೀರ್ವದಿಸಿದಂತೆ ಸರ್ವೇಶ್ವರಾ, ನಿನಗೆ ಸೇರಲಿ ಮೊರೆಯಿಡುವವರ ಪ್ರಾರ್ಥನೆ. ಆಗ ಭೂನಿವಾಸಿಗಳೆಲ್ಲ ಅರಿಯುವರು ನೀ ಸರ್ವೇಶ್ವರನೆಂದು ನೀನೇ ಸರ್ವಯುಗಗಳ ದೇವರೆಂದು.
ಕೀರ್ತನೆ: 79:8, 9, 11, 13 ಸಿರಾಖ 36:1
ಶ್ಲೋಕ: ಪ್ರಭು ನಮ್ಮನ್ನು ಕರುಣಿಸು, ಕಟಾಕ್ಷಿಸು.
ಶುಭಸಂದೇಶ: ಮಾರ್ಕ 10: 32-45
ಜೆರುಸಲೇಮಿಗೆ ಪ್ರಯಾಣ ಮಾಡುತ್ತ ಇದ್ದಾಗ ಯೇಸುಸ್ವಾಮಿ ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು: “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯ ಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ, ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು; ಆತನ ಮೇಲೆ ಉಗುಳುವರು; ಕೊರಡೆಯಿಂದ ಹೊಡೆಯುವರು; ಅನಂತರ ಕೊಂದುಹಾಕುವರು. ಆತನಾದರೋ ಮೂರು ದಿನದ ಮೇಲೆ ಪುನರುತ್ಥಾನ ಹೊಂದುವನು,” ಎಂದರು. ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮದೊಂದು ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು,” ಎಂದು ವಿಜ್ಞಾಪಿಸಿಕೊಂಡರು “ನನ್ನಿಂದ ನಿಮಗೇನಾಗಬೇಕು?” ಎಂದು ಯೇಸು ಕೇಳಿದರು. “ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು,” ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು. ಅದಕ್ಕೆ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ನಾನವನ್ನು ಪಡೆಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು ಆಗುತ್ತದೆ,” ಎಂದು ಅವರು ಮರು ನುಡಿದರು. ಆಗ ಯೇಸು, “ನಾನು ಕುಡಿಯುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವು ಪಡೆಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು,” ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ, ಯೊವಾನ್ನರ ಮೇಲೆ ಸಿಟ್ಟುಗೊಂಡರು. ಆಗ ಯೇಸು ಶಿಷ್ಯರೆಲ್ಲರನ್ನು ತನ್ನ ಬಳಿಗೆ ಕರೆದು, “ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು. ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಟನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. ನರಪುತ್ರನು ಸಹ ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಬೋಧಿಸಿದರು.
No comments:
Post a Comment