ಮೊದಲನೇ ವಾಚನ: ಸಿರಾಖ 51:12-20
ವಿನಾಶದಿಂದ ನನ್ನನ್ನು ರಕ್ಷಿಸಿದಿರಿ ಕಷ್ಟಕಾಲದಲ್ಲಿ ಎನ್ನನ್ನು ಕಾಪಾಡಿದಿರಿ ಎಂದೇ ಕೃತಜ್ಞತಾಸ್ತುತಿ ಸಲ್ಲಿಸುವೆ; ನಿಮ್ಮ ನಾಮವನ್ನು ಸರ್ವೇಶ್ವರಾ, ಕೊಂಡಾಡುವೆ. ಸುಜ್ಞಾನದ ಅನ್ವೇಷಣೆ ನಾನಿನ್ನೂ ಎಳೆಯವನಾಗಿದ್ದಾಗ, ದೇಶಾಂತರ ಹೋಗುವುದಕ್ಕೆ ಮುನ್ನ ಬಹಿರಂಗ ಪ್ರಾರ್ಥನೆಯಲ್ಲಿ ಜ್ಞಾನವನ್ನರಸಿದೆನಯ್ಯಾ. ಮಹಾಮಂದಿರದ ಎದುರಿನಲ್ಲಿ ನಾನದನ್ನು ಕೇಳಿಕೊಂಡೆ ಕಡೆಯವರೆಗೂ ಅದನ್ನು ಹುಡುಕಿದೆ. ದ್ರಾಕ್ಷಿ ಹೂಬಿಡುವ ಕಾಲದಿಂದ ಫಲಬಿಡುವ ತನಕ ಜ್ಞಾನದಲ್ಲಿ ಆನಂದಿಸಿತು ನನ್ನ ಹೃದಯ ಸರಳತೆಯಲ್ಲೇ ನಡೆಯಿತು ನನ್ನ ಪಾದ ನಾನದನ್ನು ಅರಸುತ್ತಾ ಬಂದೆ ಯೌವನದಿಂದ. ನನ್ನ ಕಿವಿಯನ್ನು ಕೊಂಚ ಬಾಗಿಸಿ, ಅದನ್ನು ಸ್ವೀಕರಿಸಿದೆ ಅದರಿಂದ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡೆ. ಆದುದರಿಂದ ನಾ ಮುಂದುವರಿದೆ ಸುಜ್ಞಾನ ನೀಡುವಾತನನ್ನು ನಾ ಕೊಂಡಾಡುವೆ. ಅದನ್ನು ಅಭ್ಯಾಸಿಸಲು ನಿಶ್ಚಯಮಾಡಿದೆ ಒಳಿತನ್ನು ಕುರಿತು ಆಸಕ್ತನಾದೆ ನಾನೆಂದಿಗೂ ಆಶಾಭಂಗಪಡೆ. ಹೋರಾಡಿತು ನನ್ನಾತ್ಮ ಅದನ್ನು ಗಳಿಸಲು ನಿಷ್ಠೆಯಿಂದಿದ್ದೆ ನನ್ನ ಕಾರ್ಯಕಷ್ಟದೊಳು ನನ್ನ ಕೈಯೆತ್ತಿದೆ ಆಕಾಶದ ಕಡೆಗೆ ನನ್ನ ಅಜ್ಞಾನಕ್ಕಾಗಿ ನಾನೇ ಹಲುಬಿಕೊಂಡೆ. ಇಚ್ಛೆಯಿಂದ ನಾನದರ ಮೇಲೆ ಮನಸ್ಸಿಟ್ಟೆ ನಿರ್ಮಲತೆಯಲ್ಲಿ ಅದನ್ನು ಕಂಡುಕೊಂಡೆ ಮೊದಲಿನಿಂದಲೇ ಅದರೊಂದಿಗೆ ಸೇರುವ ಬುದ್ಧಿಯನ್ನು ಪಡೆದೆ ಇನ್ನು ನಾನೆಂದಿಗೂ ಅದನ್ನು ಕೈಬಿಡಲಾರೆ.
ಕೀರ್ತನೆ: 19:7-9, 10
ಶ್ಲೋಕ: ಪ್ರಭುವೇ, ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ.
ಶುಭಸಂದೇಶ: ಮಾರ್ಕ 11: 27-33
ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು?” ಎಂದು ಕೇಳಿದರು. ಅದಕ್ಕೆ ಯೇಸು, “ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ; ಅದಕ್ಕೆ ಉತ್ತರ ಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ,” ಎಂದರು. ಇದನ್ನು ಕೇಳಿದ ಅವರು ತಮ್ಮ ತಮ್ಮೊಳಗೇ ತರ್ಕ ಮಾಡುತ್ತಾ, “ದೇವರಿಂದ ಬಂದಿತೆಂದು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವನು. ‘ಮನುಷ್ಯರಿಂದ ಬಂದಿತು’ ಎಂದು ಹೇಳೋಣ ಎಂದರೆ ಅದೂ ಆಗದು,” ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು. ಆದುದರಿಂದ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
No comments:
Post a Comment