ಮೊದಲನೇ ವಾಚನ: 2 ಸಮ್ಯುವೇಲ l 7: 1-5, 8b-12, 14a, 16
ಸರ್ವೇಶ್ವರನ ಅನುಗ್ರಹದಿಂದ ಸುತಮುತ್ತ ಇದ್ದ ವೈರಿಗಳ ಭಯ ನಿಂತುಹೋಯಿತು. ದಾವೀದನು. ನೆಮ್ಮದಿಯಿಂದ ಅರಮನೆಯಲ್ಲಿ ವಾಸಿಸುತ್ತಿದ್ದನು. ಒಂದು ದಿನ ಅವನು ಪ್ರವಾದಿ ನಾತಾನನಿಗೆ, “ನೋಡು, ನಾನು ವಾಸಮಾಡುತ್ತಿರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ದೇವರ ಮಂಜೂಷ ಇರುವುದು ಬಟ್ಟೆಯ ಗುಡಾರದಲ್ಲಿ!” ಎಂದನು. ಅದಕ್ಕೆ ನಾತಾನನು ಸಮ್ಮತಿಸಿ, “ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,” ಎಂದನು. ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು: ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ? "ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆಯೆಂದು ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ. ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು. ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚಿಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಆಗದು. ನೀನು ಶತ್ರುಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ. ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. ಆದರೆ ನನ್ನ ಕೃಪೆ, ನಿನ್ನ ಕಣ್ಮುಂದೆಯೇ ಸೌಲನನ್ನು ಬಿಟ್ಟು ಹೋದಹಾಗೆ, ಅವನನ್ನು ಬಿಟ್ಟು ಹೋಗುವುದಿಲ್ಲ. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”
ಕೀರ್ತನೆ: 89: 2-3, 4-5, 27, 29 (2a)
ಶ್ಲೋಕ: ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು
ಎರಡನೇ ವಾಚನ: ರೋಮನರಿಗೆ 16: 25-27
ಅನಾದಿಯಿಂದಲೂ ಗುಪ್ತವಾಗಿದ್ದ ರಹಸ್ಯವು ಈಗ ಪ್ರಕಟವಾಗಿದೆ. ಶಾಶ್ವತ ದೇವರ ಆಜ್ಞೆಯ ಮೇರೆಗೆ ಅನ್ಯಧರ್ಮಿಯರೂ ವಿಧೇಯರಾಗಿ ವಿಶ್ವಾಸಿಸುವಂತೆ ಪ್ರವಾದನಾ ಗ್ರಂಥಗಳ ಮೂಲಕ ಆ ರಹಸ್ಯವನ್ನು ಈಗ ಅವರಿಗೆ ತಿಳಿಸಲಾಗುತ್ತಿದೆ. ಇದನ್ನು ಬೆಳಕಿಗೆ ತರುವ ನನ್ನ ಸಂದೇಶದ ಮೂಲಕ ಮತ್ತು ಯೇಸುಕ್ರಿಸ್ತರನ್ನು ಕುರಿತ ಬೋಧನೆಯ ಮೂಲಕ ದೇವರು ನಿಮ್ಮನ್ನು ವಿಶ್ವಾಸದಲ್ಲಿ ದೃಢಪಡಿಸಲು ಶಕ್ತರು. ಜ್ಞಾನಾಂಬುದಿಯಾದ ಆ ಏಕೈಕ ದೇವರಿಗೆ ಯೇಸುಕ್ರಿಸ್ತರ ಮುಖಾಂತರ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ ! ಆಮೆನ್.
ಶುಭಸಂದೇಶ: ಲೂಕ 1: 26-38
ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು. ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.
No comments:
Post a Comment