ಮೊದಲನೇ ವಾಚನ: ಯೆಶಾಯ 45: 6c-8, 18, 21c-25
ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು: ನನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು; ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು. ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲ.” ಕೇಳಿ, ಆಕಾಶಮಂಡಲವನ್ನು ಸೃಷ್ಟಿಸಿದ ಸರ್ವೇಶ್ವರನ ಮಾತನ್ನು: ಭೂಲೋಕವನು ನಿರ್ಮಿಸಿ, ರೂಪಿಸಿ, ಸ್ಥಾಪಿಸಿದ ದೇವರು ಆತನು. ಅದನ್ನು ಶೂನ್ಯಸ್ಥಾನವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದವನು ಆತನು. ಅಂಥವನು ಇಂತೆನ್ನುತ್ತಾನೆ: “ಸರ್ವೇಶ್ವರ ನಾನೇ; ನಾನಲ್ಲದೆ ಇನ್ನಾರೂ ಇಲ್ಲ. ಹೇಳಿ, ನ್ಯಾಯಸ್ಥಾನಕ್ಕೆ ಬಂದು ನಿಮ್ಮ ವಾದವನ್ನು ಮಂಡಿಸಿ; ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಪರ್ಯಾಲೋಚಿಸಿ ನೋಡಲಿ. ಪ್ರಾರಂಭದಿಂದಲೂ ಈ ವಿಷಯವನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮುಂಚೆಯೇ ತಿಳಿಸಿದವನು ನಾನಲ್ಲದೆ ಇನ್ಯಾರು? ನನ್ನ ಹೊರತು ಇನ್ನು ಯಾವ ದೇವರೂ ಇಲ್ಲ; ನಾನಲ್ಲದೆ ಸತ್ಯಸ್ವರೂಪವನು, ಉದ್ಧಾರಕನು ಆದ ದೇವನಿಲ್ಲವೇ ಇಲ್ಲ. “ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ. ಪ್ರತಿಯೊಬ್ಬರು ಮೊಣಕಾಲೂರುವರು ನನಗೆ ಎಲ್ಲರು ನಾನೇ ದೇವರೆಂದು ಮಾಡುವರು ಪ್ರತಿಜ್ಞೆ. ಆ ನುಡಿ ಹೊರಟಿದೆ ನನ್ನ ಸತ್ಯದ ಬಾಯಿಂದ ಅದನ್ನು ಹಿಂತೆಗೆಯೆನು ನನ್ನ ಮೇಲಿಟ್ಟ ಆಣೆಯಿಂದ. “ಜೀವೋದ್ಧಾರವು, ಶಕ್ತಿಯು ಸರ್ವೇಶ್ವರನಲ್ಲಿ ಮಾತ್ರ ಉಂಟು ಆತನ ವಿರೋಧಿಗಳೆಲ್ಲರೂ ಆತನನ್ನೇ ಮರೆಹೋಗುವರು ನಾಚಿಕೆಪಟ್ಟು. ಪಡೆವರು ಇಸ್ರಯೇಲಿನ ವಂಶಜರೆಲ್ಲರು ಸರ್ವೇಶ್ವರನಲ್ಲೇ ಜೀವೋದ್ಧಾರವನು, ಆನಂದವನು.”
ಕೀರ್ತನೆ: 85: 9ab and 10, 11-12, 13-14
ಶ್ಲೋಕ: ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ, ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ.
ಶುಭಸಂದೇಶ: ಲೂಕ 7: 18b-23
ಸ್ನಾನಿಕ ಯೊವಾನ್ನನ್ನು, ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವರು ನೀವೋ ಅಥವಾ ಬೇರೊಬ್ಬರಿಗಾಗಿ ನಾವು ಎದುರು ನೋಡಬೇಕೋ?” ಎಂದು ಯೇಸುಸ್ವಾಮಿಯನ್ನು ಕೇಳಲು ಅವರ ಬಳಿಗೆ ಕಳುಹಿಸಿದನು. ಆ ಶಿಷ್ಯರು ಯೇಸುವಿನ ಬಳಿಗೆ ಬಂದು, “ಬರಬೇಕಾದವರು ನೀವೋ ಅಥವಾ ನಾವು ಬೇರೊಬ್ಬರನ್ನು ಎದುರುನೋಡಬೇಕೋ ಎಂದು ವಿಚಾರಿಸಲು ಸ್ನಾನಿಕ ಯೊವನ್ನನು ನಮ್ಮನ್ನು ತಮ್ಮ ಬಳಿಗೆ ಕಳುಹಿಸಿದ್ದಾರೆ,”ಎಂದರು.ಅದೇ ಸಮಯದಲ್ಲಿ ಯೇಸು ರೋಗ ರುಜಿನಗಳಿಂದ ನರಳುತ್ತಿದ್ದ ಹಾಗೂ ದೆವ್ವಹಿಡಿದಿದ್ದ ಅನೇಕರನ್ನು ಗುಣಪಡಿಸುತ್ತಿದ್ದರು ಮತ್ತು ಹಲವು ಮಂದಿ ಕುರುಡರಿಗೆ ದೃಷ್ಟಿಯನ್ನು ದಯಪಾಲಿಸುತ್ತಿದ್ದರು. ಯೇಸು ಅವರಿಗೆ ಪ್ರತ್ಯುತ್ತರವಾಗಿ,“ನೀವು ಕಂಡದ್ದನ್ನೂ ಕೇಳಿದ್ದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ : ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ. ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು,” ಎಂದು ಹೇಳಿ ಕಳುಹಿಸಿದರು.
No comments:
Post a Comment