ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

8.12.20 - “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು"

ಮೊದಲನೇ ವಾಚನ: ಆದಿಕಾಂಡ 3: 9-15, 20 


ಆದರೆ ಸರ್ವೇಶ್ವರನಾದ ದೇವರು, “ಎಲ್ಲಿರುತ್ತೀಯಾ?” ಎಂದು ಆದಾಮನನ್ನು ಕೂಗಿ ಕೇಳಿದರು. ಅದಕ್ಕೆ ಅವನು, “ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ,” ಎಂದನು. ನೀನು ಬೆತ್ತಲೆಯಾಗಿರುತ್ತಿಯೆಂದು ನಿನಗೆ ತಿಳಿಸಿದವರು ಯಾರು?” ಎಂದು ಕೇಳಿದರು. ಅದಕ್ಕೆ ಆದಾಮನು, “ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆ,” ಎಂದನು. ಸರ್ವೇಶ್ವರನಾದ ದೇವರು ಈ ಮಹಿಳೆಯನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಆಕೆ, “ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು,” ಎಂದು ಉತ್ತರ ಕೊಟ್ಟಳು. ಆಗ, ಸರ್ವೇಶ್ವರನಾದ ದೇವರು, ಇಂತೆಂದರು ಸರ್ಪಕ್ಕೆ: “ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶು ಪ್ರಾಣಿಗಳಿಗಿಂತ; ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ ತಿನ್ನುವೆ ಮಣ್ಣನೆ ಜೀವಮಾನ ಪರಿಯಂತ. ಹಗೆತನವಿರಿಸುವೆನು ನಿನಗೂ ಈ ಮಹಿಳೆಗೂ ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ. ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನುಕಚ್ಚುವೆ ನೀನಾ ಸಂತಾನದ ಹಿಮ್ಮಡಿಯನು.” ಆದಾಮನು ತನ್ನ ಹೆಂಡತಿಗೆ “ಹವ್ವ” ಎಂದು ಹೆಸರಿಟ್ಟನು. ಏಕೆಂದರೆ ಮಾವನಕುಲಕ್ಕೆ ಮೂಲಮಾತೆ ಆಕೆ.

ಕೀರ್ತನೆ: 98: 1, 2-3ab, 3cd-4 

ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು, ಎಸಗಿಹನಾತನು ಪವಾಡಕಾರ್ಯಗಳನು. 

ಎರಡನೇ ವಾಚನ: ಎಫೆಸಿಯರಿಗೆ 1: 3-6, 11-12 

ನಮ್ಮ ಪ್ರಭು ಯೇಸುಕ್ರಿಸ್ತರ ಪಿತನಾದ ದೇವರಿಗೆ ಸ್ತುತಿ ಸಲ್ಲಲಿ! ಪಿತದೇವರು ಸ್ವರ್ಗಲೋಕದಿಂದ ಎಲ್ಲಾ ಬಗೆಯ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕ್ರಿಸ್ತಯೇಸುವಿನಲ್ಲಿ ನಮಗೆ ಅನುಗ್ರಹಿಸಿದ್ದಾರೆ. ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು ಇಚ್ಛಿಸಿದರು. ನಮ್ಮ ಮೇಲಿನ ಪ್ರೀತಿಯಿಂದಾಗಿ ದೇವರು ಯೇಸುಕ್ರಿಸ್ತರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳಲು ಆಗಲೇ ನಿರ್ಧರಿಸಿದ್ದರು. ಇದು ಅವರ ಸಂಕಲ್ಪ ಹಾಗೂ ಚಿತ್ತವಾಗಿತ್ತು. ತಮ್ಮ ಪ್ರೀತಿಯ ಪುತ್ರನಲ್ಲೇ ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿಸಲ್ಲಿಸೋಣ. ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು.

ಶುಭಸಂದೇಶ: ಲೂಕ 1: 26-38 


ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು. ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

No comments:

Post a Comment