ಮೊದಲನೇ ವಾಚನ: ಜಕರ್ಯ 2: 10-12
ಸರ್ವೇಶ್ವರ ಇಂತೆನ್ನುತ್ತಾರೆ: “ಎಲೈ ಸಿಯೋನ್ ನಗರವೇ ಸಂತೋಷಪಡು, ಜಯಕಾರ ಮಾಡು; ಇಗೋ, ನಾನೇ ಬಂದು ನಿನ್ನ ಮಧ್ಯೆ ವಾಸಿಸುವೆನು!” ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರ ಸ್ವಾಮಿಯನ್ನು ಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು. ಸೇನಾಧೀಶ್ವರರಾದ ಆ ಸ್ವಾಮಿಯೇ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುವುದು. ಪವಿತ್ರ ಭೂಮಿಯಲ್ಲಿ ಜುದೇಯ ನಾಡನ್ನು ಸ್ವಾಮಿ ತಮ್ಮ ಸೊತ್ತಾಗಿ ಮಾಡಿಕೊಳ್ಳುವರು. ಜೆರುಸಲೇಮನ್ನು ತಮಗಾಗಿ ಮರಳಿ ಆರಿಸಿಕೊಳ್ಳುವರು. ಸರ್ವೇಶ್ವರ ತಮ್ಮ ಪರಿಶುದ್ಧಾಲಯದಿಂದ ಹೊರಬರುತ್ತಿದ್ದಾರೆ. ನರಮಾನವರೇ, ಅವರ ಶ್ರೀಸನ್ನಿಧಿಯಲ್ಲಿ ನೀವೆಲ್ಲರು ಮೌನತಾಳಿರಿ.
ಜೂಡಿತ: 13: 18bcde, 19
ಶ್ಲೋಕ: ನೀನೇ ನಮ್ಮ ಜನಾಂಗದ ಹಿರಿಮೆ
ಶುಭಸಂದೇಶ: ಲೂಕ 1: 39-47
ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” ಆಗ ಹೀಗೆಂದು ಮರಿಯಳು ಹೊಗಳಿದಳು: “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ !!
No comments:
Post a Comment