ಮೊದಲನೇ ವಾಚನ: ಯೆಶಾಯ 40: 1-5, 9-11
ನಿಮ್ಮ ದೇವರು ಇಂತೆನ್ನುತ್ತಾರೆ: “ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ” ಇಗೋ, ಈ ವಾಣಿಯನ್ನು ಕೇಳಿ: “ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ಧಮಾಡಿ ಅರಣ್ಯದಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲಿ. ತುಂಬಬೇಕು ಎಲ್ಲ ಹಳ್ಳಕೊಳ್ಳಗಳನು ಮಟ್ಟಮಾಡಬೇಕು ಎಲ್ಲ ಬೆಟ್ಟ ಗುಡ್ಡಗಳನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗು ಮುಗ್ಗಾದ ಸ್ಥಳಗಳನು. ಗೋಚರವಾಗುವುದಾಗ ಸರ್ವೇಶ್ವರ ಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ.” ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು ‘ಇಗೋ, ನಿಮ್ಮ ದೇವರು’ ಎಂದು ಜೂದ ನಗರಗಳಿಗೆ ಸಾರು. ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ."
ಕೀರ್ತನೆ: 85: 9-10, 11-12, 13-14 (8)
ಶ್ಲೋಕ: ತೋರಿಸೆಮಗೆ ಪ್ರಭು ಕರುಣೆಯನು, ಅನುಗ್ರಹಿಸೆಮಗೆ ರಕ್ಷಣೆಯನು.
ಎರಡನೇ ವಾಚನ: 2 ಪೇತ್ರ 3: 8-14
ಪ್ರಿಯರೇ, ಮತ್ತೊಂದು ವಿಷಯವನ್ನು ಮರೆಯದಿರಿ: ಪ್ರಭುವಿನ ದೃಷ್ಟಿಯಲ್ಲಿ ಒಂದು ದಿನ ಸಾವಿರ ವರ್ಷಗಳಂತೆಯೂ ಮತ್ತು ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ. ಕೆಲವರು ಭಾವಿಸುವಂತೆ ಪ್ರಭು ತಮ್ಮ ವಾಗ್ದಾನಗಳನ್ನು ನೆರವೇರಿಸುವುದರಲ್ಲಿ ವಿಳಂಬ ಮಾಡುವವರಲ್ಲ; ಆದರೆ ಅವರು ನಿಮ್ಮ ವಿಷಯದಲ್ಲಿ ದೀರ್ಘಶಾಂತಿ, ಸಹನೆಯುಳ್ಳವರು. ಯಾರೊಬ್ಬನೂ ನಾಶವಾಗಬೇಕೆಂಬುದು ಅವರ ಇಚ್ಛೆಯಲ್ಲ; ಎಲ್ಲರೂ ಪಶ್ಚಾತ್ತಾಪಪಟ್ಟು ತಮಗೆ ಅಭಿಮುಖರಾಗಬೇಕೆಂಬುದೇ ಅವರ ಅಪೇಕ್ಷೆ. ಪ್ರಭುವಿನ ದಿನ ಬಂದೇ ತೀರುವುದು. ಅದು ಕಳ್ಳನಂತೆಯೇ ಬರುವುದು. ಆಗ, ಆಕಾಶ ಮಂಡಲವು ಸಿಡಿಲ ಗರ್ಜನೆಯೊಂದಿಗೆ ಅಳಿದು ಹೋಗುವುದು. ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಸುಟ್ಟು ಲಯವಾಗಿ ಹೋಗುವುವು. ಭೂಮಿಯೂ ಅದರಲ್ಲಿರುವ ಸಮಸ್ತವೂ ಉರಿದು ಭಸ್ಮವಾಗುವುವು. ಇವೆಲ್ಲವೂ ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿ ಜೀವಿಸಬೇಕು? ಪರಿಶುದ್ಧರಾಗಿಯೂ ಭಕ್ತಿಪೂರಿತರಾಗಿಯೂ ಬಾಳಬೇಕು. ದೇವರ ಆ ದಿನವನ್ನು ಎದುರು ನೋಡುತ್ತಾ ಅದು ಬೇಗನೆ ಬರಲೆಂದು ಹಾರೈಸಬೇಕು. ಆ ದಿನ, ಆಕಾಶಮಂಡಲವು ಅಗ್ನಿಯಿಂದ ಉರಿದು ಹೋಗುವುದು; ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಶಾಖದಿಂದ ಕರಗಿಹೋಗುವುವು. ನಾವಾದರೋ, ದೇವರ ವಾಗ್ದಾನದ ಪ್ರಕಾರ ನೀತಿಯ ನೆಲೆಯಾಗಿರುವ ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರು ನೋಡುತ್ತಿರುವೆವು. ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿ ಸಮಾಧಾನದಿಂದಿರಲು ಪ್ರಯತ್ನಿಸಿರಿ.
ಶುಭಸಂದೇಶ: ಮಾರ್ಕ 1: 1-8
ದೇವರ ಪುತ್ರರಾದ ಯೇಸುಕ್ರಿಸ್ತರ ಶುಭಸಂದೇಶ. ಇದು ಪ್ರವಾದಿ ಯೆಶಾಯನು ಮೊದಲೇ ಬರೆದಿಟ್ಟ ಪ್ರಕಾರ ಪ್ರಾರಂಭವಾಯಿತು. “ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳಿಸುವೆನು ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ಧಗೊಳಿಸುವನು,’ ಎಂದು ದೇವರೇ ನುಡಿದಿದ್ದಾರೆ.” “ ‘ಸರ್ವೇಶ್ವರನಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ; ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ,’ ಎಂದೊಬ್ಬನು ಘೋಷಿಸುತ್ತಿದ್ದಾನೆ, ಬೆಂಗಾಡಿನಲ್ಲಿ.” ಈ ಪ್ರವಾದನೆಗೆ ಅನುಗುಣವಾಗಿ ಯೊವಾನ್ನನು, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ; ಸ್ನಾನದೀಕ್ಷೆಯನ್ನು ಪಡೆದುಕೊಳ್ಳಿ. ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು,” ಎಂದು ಬೆಂಗಾಡಿನಲ್ಲಿ ಜನರಿಗೆ ಸಾರಿ ಹೇಳುತ್ತಾ ಸ್ನಾನದೀಕ್ಷೆ ಕೊಡುತ್ತಾ ಇದ್ದನು. ಜುದೇಯ ಪ್ರಾಂತ್ಯದ ಎಲ್ಲೆಡೆಗಳಿಂದಲೂ ಜೆರುಸಲೇಮಿನಿಂದಲೂ ಜನರು ಆತನ ಬಳಿಗೆ ಹೋಗುತ್ತಿದ್ದರು. ಅವರು ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡನ್ ನದಿಯಲ್ಲಿ ಆತನಿಂದ ಸ್ನಾನದೀಕ್ಷೆ ಪಡೆದುಕೊಳ್ಳುತ್ತಿದ್ದರು ಯೊವಾನ್ನನು ಒಂಟೆಯ ತುಪ್ಪಟದ ಹೊದಿಕೆಯನ್ನು ಹೊದ್ದು, ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳೂ ಕಾಡುಜೇನೂ ಆತನ ಆಹಾರವಾಗಿತ್ತು ಆತನು, “ನನ್ನಾನಂತರ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ; ಬಗ್ಗಿ ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಟ್ಟೆನು; ಅವರಾದರೋ ನಿಮಗೆ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಕೊಡುವರು,” ಎಂದು ಘೋಷಿಸುತ್ತಿದ್ದನು.
No comments:
Post a Comment