ಮೊದಲನೇ ವಾಚನ: ಯೆಶಾಯ 61: 1-2a, 10-11
ನನ್ನ ಮೇಲಿದೆ ಸರ್ವೇಶ್ವರ ಸ್ವಾಮಿಯ ಆತ್ಮ; ನನಗೆ ಅಭಿಷೇಕಮಾಡಿ, ಕಳುಹಿಸಿಹನು ಆತ: ದೀನದಲಿತರಿಗೆ ಶುಭಸಂದೇಶ ಬೋಧಿಸಲೆಂದೆ ಮನನೊಂದವರನು ಸಂತೈಸಿ ಗುಣಪಡಿಸಲೆಂದೆ ಬಂಧಿತರಿಗೆ ಬಿಡುಗಡೆಯನು ಪ್ರಕಟಿಸಲೆಂದೆ; ಸೆರೆಯಾಳುಗಳಿಗೆ ಬಂಧವಿಮುಕ್ತಿಯಾಗುವುದನು, ಸರ್ವೇಶ್ವರಸ್ವಾಮಿಯ ಅನುಗ್ರಹದ ವರುಷವನು, ನಮ್ಮ ದೇವರು ಮುಯ್ಯಿತೀರಿಸುವಾ ದಿನವನು ಘೋಷಿಸಲೆಂದೆ. ನಾನು ಪಡೆಯುವೆ ಸರ್ವೇಶ್ವರನಲ್ಲಿ ಪರಮಾನಂದ ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ. ಮದುವಣಿಗನಿಗೆ ಬಾಸಿಂಗವನು ತೊಡಿಸುವಂತೆ ವಧುವಿಗೆ ಆಭರಣಗಳಿಂದ ಅಲಂಕರಿಸುವಂತೆ ಹೊದಿಸಿಹನಾತ ನನಗೆ ಮುಕ್ತಿಯೆಂಬ ವಸ್ತ್ರವನು ತೊಡಿಸಿಹನು ನನಗೆ ನೀತಿಯೆಂಬ ನಿಲುವಂಗಿಯನು. ಬುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.
ಲೂಕ: 1: 46-48, 49-50, 53-54
ಶ್ಲೋಕ: ಹಿರಿಹಿಗ್ಗುವುದು ನನ್ನ ದೇವರಲ್ಲಿ ನನ್ನಾತ್ಮ.
ಎರಡನೇ ವಾಚನ: 1 ಥೆಸಲೋನಿಯರಿಗೆ 5: 16-24
ಸಹೋದರರೇ, ಸದಾ ಹರ್ಷಚಿತ್ತರಾಗಿರಿ. ಎಡೆಬಿಡದೆ ಪ್ರಾರ್ಥಿಸಿರಿ. ಎಲ್ಲಾ ಸಂದರ್ಭಗಳಲ್ಲೂ ಉಪಕಾರಸ್ಮರಣೆ ಮಾಡಿರಿ. ಕ್ರಿಸ್ತಯೇಸುವಿನಲ್ಲಿ ದೇವರು ನಿಮ್ಮಿಂದ ಇಚ್ಛಿಸುವುದು ಇದನ್ನೇ. ಪವಿತ್ರಾತ್ಮರನ್ನು ನಿಶ್ಚೇತನಗೊಳಿಸಬೇಡಿ. ಪ್ರವಾದನೆಗಳನ್ನು ಅಲ್ಲಗಳೆಯದಿರಿ ಅವುಗಳನ್ನೆಲ್ಲಾ ಪರಿಶೋಧಿಸಿ ಒಳ್ಳೆಯದನ್ನು ಅಂಗೀಕರಿಸಿ, ಕೆಟ್ಟದ್ದನ್ನೆಲ್ಲಾ ಬಿಟ್ಟುಬಿಡಿ. ಶಾಂತಿದಾಯಕ ದೇವರು ನಿಮ್ಮನ್ನು ಪೂರ್ಣವಾಗಿ ಪಾವನಗೊಳಿಸಲಿ. ನಮ್ಮ ಪ್ರಭುಯೇಸು ಪುನರಾಗಮಿಸುವಾಗ ನಿಮ್ಮ ಆತ್ಮ, ಪ್ರಾಣ, ದೇಹ - ಇವುಗಳು ದೋಷರಹಿತವಾಗಿಯೂ ಸ್ವಸ್ಥವಾಗಿಯೂ ಇರುವಂತೆ ನಿಮ್ಮನ್ನು ಕಾಪಾಡಲಿ. ನಿಮ್ಮನ್ನು ಕರೆದ ದೇವರು ಇದನ್ನು ಈಡೇರಿಸುವರು; ಏಕೆಂದರೆ, ದೇವರು ನಂಬಿಕಸ್ಥರು.
ಶುಭಸಂದೇಶ: ಯೊವಾನ್ನ 1: 6-8, 19-28
ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ. ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು. ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು. ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳಿಸಿದರು. ಇವರು, “ನೀನು ಯಾರು?” ಎಂದು ಪ್ರಶ್ನಿಸಿದರು. ಯೊವಾನ್ನನು ಅದಕ್ಕೆ ಉತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ,” ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. ಹಾಗಾದರೆ, “ನೀನು ಎಲೀಯನೋ?” ಎಂದು ಕೇಳಲು ‘ಅಲ್ಲ’ ಎಂದನು. “ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?” ಎಂದು ಅವರು ಮತ್ತೆ ಕೇಳಲು, “ಅದೂ ಅಲ್ಲ,” ಎಂದು ಮರುನುಡಿದನು. “ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತೀ?” ಎಂದು ಅವರು ಮತ್ತೊಮ್ಮೆ ಕೇಳಿದರು. ಅದಕ್ಕೆ ಯೊವಾನ್ನನು, “ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು,” ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು. ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, “ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?” ಎಂದು ಪ್ರಶ್ನಿಸಿದರು. ಪ್ರತ್ಯುತ್ತರವಾಗಿ ಯೊವಾನ್ನನು, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದನು. ಯೊವಾನ್ನನು ಸ್ನಾನದೀಕ್ಷೆ ಕೊಡತ್ತಿದ್ದ ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು.
No comments:
Post a Comment