ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.12.20 - "ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ"

 ಮೊದಲನೇ ವಾಚನ: ಯೊವಾನ್ನ 1:5 - 2:2 

ದೇವರೇ ಬೆಳಕು. ಅವರಲ್ಲಿ ಕತ್ತಲು ಎಂಬುದೇ ಇಲ್ಲ. ಇವರ ಪುತ್ರನಿಂದಲೇ ನಾನು ಕೇಳಿದ ಈ ಸಂದೇಶವನ್ನು ನಿಮಗೆ ಸಾರುತ್ತಿದ್ದೇವೆ. ನಾವು ಕತ್ತಲಲ್ಲಿ ಬಾಳುತ್ತಾ ದೇವರೊಡನೆ ಅನ್ಯೋನ್ಯವಾಗಿದ್ದೇವೆಂದು ಹೇಳಿದರೆ ನಾವು ಸುಳ್ಳುಗಾರರು, ಸತ್ಯಕ್ಕನುಸಾರ ಬಾಳದವರು. ಬದಲಿಗೆ, ದೇವರು ಬೆಳಕಿನಲ್ಲಿರುವಂತೆ ನಾವೂ ಬೆಳಕಿನಲ್ಲಿ ನಡೆದರೆ ನಮ್ಮಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಅಗ ದೇವರ ಪುತ್ರನಾದ ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪಗಳಿಂದಲೂ ಶುದ್ಧಗೊಳಿಸುತ್ತದೆ. ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿಕೊಂಡರೆ, ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತೇವೆ. ಮತ್ತು ಸತ್ಯವೆಂಬುದೆ ನಮ್ಮಲ್ಲಿ ಇರುವುದಿಲ್ಲ. ಪ್ರತಿಯಾಗಿ, ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆಗ ನಂಬಿಕಸ್ಥರೂ ನೀತಿವಂತರೂ ಆದ ದೇವರು ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿ - ಆಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸುತ್ತಾರೆ. ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ದೇವರನ್ನು ಸುಳ್ಳುಗಾರರನ್ನಾಗಿಸುತ್ತೇವೆ ಮತ್ತು ಅವರ ವಾಣಿ ನಮ್ಮಲ್ಲಿ ಇರುವುದಿಲ್ಲ. ಪ್ರಿಯ ಮಕ್ಕಳೇ, ನೀವು ಪಾಪ ಮಾಡಬಾರದೆಂದೇ ನಾನಿದನ್ನು ನಿಮಗೆ ಬರೆಯುತ್ತಿದ್ದೇನೆ. ಒಂದು ವೇಳೆ ಯಾರಾದರೂ ಪಾಪಮಾಡಿದ್ದೇ ಆದರೆ ನಮ್ಮ ಪರವಾಗಿ ಪಿತನ ಬಳಿಯಲ್ಲಿ ಬಿನ್ನಯಿಸಲು ಒಬ್ಬರಿದ್ದಾರೆ. ಅವರೇ ಸತ್ಯಸ್ವರೂಪರಾದ ಯೇಸುಕ್ರಿಸ್ತರು. ಅವರೇ ನಮ್ಮ ಪಾಪಗಳನ್ನು ನಿವಾರಿಸುವ ಪರಿಹಾರ ಬಲಿಯಾಗಿದ್ದಾರೆ. ನಮ್ಮ ಪಾಪಗಳನ್ನು ಮಾತ್ರವಲ್ಲ. ಇಡೀ ಜಗತ್ತಿನ ಪಾಪಗಳನ್ನು ಅವರು ಪರಿಹರಿಸುತ್ತಾರೆ. 

ಕೀರ್ತನೆ: 124:2-5, 7-8 

ಶ್ಲೋಕ: ಬೇಟೆಬಲೆಯಿಂದ ಪಾರಾದ ಪಕ್ಷಿಯಂತಾದೆವು ಹರಿದುಹೋಯಿತಿದೋ ಬಲೆಯು, ಹಾರಿಹೋದೆವು ನಾವು 

ಶುಭಸಂದೇಶ: ಮತ್ತಾಯ  2:13-18 


ಜ್ಯೋತಿಷಿಗಳು ಹೊರಟು ಹೋದಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, "ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವ ತನಕ ಅಲ್ಲೇ ಇರು," ಎಂದನು. ಅದರಂತೆ ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು. ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಈ ಪ್ರಕಾರ, "ಈಜಿಪ್ಟ್ ದೇಶದಿಂದ ನನ್ನ ಕುಮಾರನನ್ನು ಕರೆದನು" ಎಂದು ಪ್ರವಾದಿಯ ಮುಖಾಂತರ ಸರ್ವೇಶ್ವರನು  ಹೇಳಿದ್ದ ಪ್ರವಚನ ಈಡೇರಿತು. ಜ್ಯೋತಿಷಿಗಳಿಂದ ತಾನು ವಂಚಿತನಾದೆ ಎಂದು ಅರಿತ ಹೆರೋದನು ರೋಷಾವೇಶಗೊಂಡನು. ಬೆತ್ಲೆಹೇಮಿಗೂ ಅದರ ಸುತ್ತಮುತ್ತಲಿಗೂ ಆಳುಗಳನ್ನು ಕಳುಹಿಸಿದನು. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲಿದ್ದ, ಎರಡು ವರ್ಷಗಳಿಗೆ ಮೀರದ, ಎಲ್ಲಾ ಗಂಡುಮಕ್ಕಳನ್ನು ಕೊಂದು ಹಾಕಿಸಿದನು. "ಕೇಳಿಬರುತಿದೆ ರಮಾ ಊರಿನೊಳು ರೋದನ, ಗೋಳಾಟ, ಅಘೋರ ಆಕ್ರಂದನ; ಕಳೆದುಕೊಂಡ ಮಕ್ಕಳಿಗಾಗಿ ಗೋಳಿಡುತಿಹಳು ರಾಖೇಲಳು ಇನ್ನಿಲ್ಲದವುಗಳಿಗಾಗಿ ಉಪಶಮನ ಒಲ್ಲೆನೆನುತಿಹಳು," ಪ್ರವಾದಿ ಯೆರೆಮಿಾಯನ ಈ ಪ್ರವಚನ ಅಂದು ಸತ್ಯವಾಯಿತು.

No comments:

Post a Comment