ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.01.2020

ಮೊದಲನೇ ವಾಚನ: 2 ಸಮುವೇಲ 5:1-7, 10

ಅನಂತರ ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನಾವು ನಿಮ್ಮ ರಕ್ತಸಂಬಂಧಿಗಳು; ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ,’ ಎಂದು ವಾಗ್ದಾನಮಾಡಿದ್ದಾರೆ,” ಎಂದರು. ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು. ದಾವೀದನು ಮೂವತ್ತು ವರ್ಷದವನಾಗಿದ್ದಾಗ ಅರಸನಾಗಿ ನಾಲ್ವತ್ತು ವರ್ಷ ಆಳಿದನು. ಅವನು ಹೆಬ್ರೋನಿನಲ್ಲಿದ್ದುಕೊಂಡು ಯೆಹೂದ ಕುಲ ಒಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು; ಜೆರುಸಲೇಮಿನಲ್ಲಿದ್ದುಕೊಂಡು ಯೆಹೂದ್ಯರನ್ನು ಹಾಗು ಇಸ್ರಯೇಲರನ್ನು ಆಳಿದ್ದು ಮೂವತ್ತ ಮೂರು ವರ್ಷ. ದಾವೀದನು ತನ್ನ ಜನರನ್ನು ಕರೆದುಕೊಂಡು ಜೆರುಸಲೇಮಿನ ಮೇಲೆ ದಾಳಿ ಮಾಡಲು ಹೊರಟನು. ನಾಡಿನ ಮೂಲನಿವಾಸಿಗಳಾದ ಯೆಬೂಸಿಯರು ಅಲ್ಲಿದ್ದರು. ಅವರು ದಾವೀದನು ಒಳಿಗೆ ಬರಲಾರನೆಂದು ನೆನೆಸಿ ಅವನಿಗೆ, “ನೀನು ಒಳಗೆ ಬರಕೂಡದು; ಬಂದರೆ ಕುರುಡರು, ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು,” ಎಂದು ಹೇಳಿದರು. ಆದರೂ ಅವನು, ಈಗ ‘ದಾವೀದ ನಗರ’ ಎನಿಸಿಕೊಳ್ಳುವ ಸಿಯೋನ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು. ಸೇನಾಧೀಶ್ವರ ಹಾಗು ಸರ್ವೇಶ್ವರರಾದ ದೇವರು ಅವನೊಂದಿಗೆ ಇದ್ದರು. ಆದ್ದರಿಂದ ಅವನು ಅಭಿವೃದ್ದಿ ಹೊಂದುತ್ತಾ ಬಂದನು.

ಕೀರ್ತನೆ: 89:20, 21-22, 25-26
ಶ್ಲೋಕ: ನನ್ನ ಪ್ರೀತಿ ಸತ್ಯತೆಗಳು ಇರುವುವು ಅವನೊಂದಿಗೆ.

ಶುಭಸಂದೇಶ: ಮಾರ್ಕ 3:22-30

ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವಬಿಡಿಸುತ್ತಾನೆ,” ಎನ್ನುತ್ತಿದ್ದರು. ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು: “ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆ ತಾನೇ ಸಾಧ್ಯ? ಒಂದು ರಾಜ್ಯದ ಪ್ರಜೆಗಳು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ರಾಜ್ಯ ಉಳಿಯದು. ಒಂದು ಕುಟುಂಬದ ಸದಸ್ಯರು ತಮ್ಮ ತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು. ಅದರಂತೆಯೇ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾದರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು. ಒಬ್ಬನು ಬಲಿಷ್ಠನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡಯಬೇಕು. ನಿಶ್ಚಯವಾಗಿ ನಿಮಗೆ ಹೇಳುತ್ತೇನೆ; ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು,” ಎಂದರು. (ದೆವ್ವ ಹಿಡಿದಿದೆ ಎಂದು ತಮ್ಮನ್ನು ಕೆಲವರು ನಿಂದಿಸುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು).

No comments:

Post a Comment