ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.01.2020 - "ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 22:3-16

ಪೌಲನು ಜನರುನ್ನುದ್ದೇಶಿಸಿ ಹೀಗೆಂದನು: “ನಾನೊಬ್ಬ ಯೆಹೂದ್ಯನು, ಸಿಲಿಸಿಯದ ತಾರ್ಸ ಎಂಬಲ್ಲಿ ಹುಟ್ಟಿದವನು. ಆದರೆ, ಇದೇ ಜೆರುಸಲೇಮಿನಲ್ಲಿ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಲಿತವನು. ಇಲ್ಲಿ ಇಂದು ನೆರೆದಿರುವ ನೀವೆಲ್ಲರೂ ದೈವಾಭಿಮಾನಿಗಳಾಗಿರುವಂತೆಯೇ ನಾನು ದೈವಾಭಿಮಾನಿಯಾಗಿದ್ದೆ. ಕ್ರಿಸ್ತ ಮಾರ್ಗವನ್ನು ಅನುಸರಿಸುವವರನ್ನು, ಸ್ತ್ರೀ ಪುರುಷರೆನ್ನದೆ ಬಂಧಿಸಿ, ಅವರನ್ನು ಸೆರೆಮನೆಗೆ ತಳ್ಳಿದೆ. ಅವರನ್ನು ಮರಣ ಪರಿಯಂತರ ಪೀಡಿಸಿ ಹಿಂಸಿಸಿದೆ. ಇದಕ್ಕೆ ಪ್ರಧಾನ ಯಾಜಕರು ಮತ್ತು ಪ್ರಮುಖರ ಇಡೀ ಸಭೆಯೇ ಸಾಕ್ಷಿ. ನಾನು ಅವರಿಂದಲೇ ದಮಸ್ಕಸಿನಲ್ಲಿರುವ ಯೆಹೂದ್ಯ ಬಾಂಧವರಿಗೆ ಪತ್ರಗಳನ್ನು ಪಡೆದು, ಆ ಪಟ್ಟಣಕ್ಕೆ ಹೊರಟೆ. ಅಲ್ಲಿಂದ ಕ್ರೈಸ್ತರನ್ನು ಬಂಧಿಸಿ, ಜೆರುಸಲೇಮಿಗೆ ತಂದು ಶಿಕ್ಷಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು. “ಹೀಗೆ ಪ್ರಯಾಣ ಮಾಡುತ್ತಾ ದಮಸ್ಕಸನ್ನು ಸವಿೂಪಿಸಿದೆ. ಆಗ ಸುಮಾರು ನಡು ಮಧ್ಯಾಹ್ನ. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕೊಂದು ನನ್ನ ಸುತ್ತಲೂ ಮಿಂಚಿತು. ನಾನು ನೆಲಕ್ಕುರುಳಿದೆ. ಆಗ ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?’ ಎಂಬ ವಾಣಿ ಕೇಳಿಸಿತು. ನಾನು ‘ಪ್ರಭೂ, ನೀವಾರು?’ ಎಂದು ಕೇಳಿದೆ. ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದರು ಅವರು. ನನ್ನೊಡನೆ ಇದ್ದವರಿಗೆ ಬೆಳಕೇನೋ ಕಾಣಿಸಿತು, ಆದರೆ ನನ್ನೊಡನೆ ಮಾತಾಡುತ್ತಿದ್ದ ವಾಣಿ ಅವರಿಗೆ ಕೇಳಿಸಲಿಲ್ಲ. ‘ನಾನೇನು ಮಾಡಬೇಕು ಪ್ರಭೂ?’ ಎಂದು ಕೇಳಿದೆ. ಅದಕ್ಕೆ ಪ್ರಭು, ‘ಏಳು, ದಮಸ್ಕಸಿಗೆ ಹೋಗು, ನೀನು ಏನು ಮಾಡಬೇಕೆಂದು ನಿಶ್ಚಯಿಸಲಾಗಿದೆಯೋ ಅದೆಲ್ಲವನ್ನೂ ನಿನಗೆ ತಿಳಿಸಲಾಗುವುದು,’ ಎಂದು ಹೇಳಿದರು. ಬೆಳಕಿನ ಪ್ರಕಾಶದ ನಿಮಿತ್ತ ನಾನು ದೃಷ್ಟಿಹೀನನಾದೆ. ಜೊತೆಯಲ್ಲಿದ್ದವರು ನನ್ನನ್ನು ದಮಸ್ಕಸಿಗೆ ಕೈ ಹಿಡಿದು ನಡೆಸಿಕೊಂಡು ಹೋದರು. “ದಮಸ್ಕಸಿನಲ್ಲಿ ಅನನೀಯ ಎಂಬ ಒಬ್ಬ ವ್ಯಕ್ತಿ ಇದ್ದನು. ಅವನು ಧರ್ಮಶಾಸ್ತ್ರಕ್ಕೆ ಪ್ರಾಮಾಣಿಕನಾಗಿ ಬಾಳಿದವನು. ಆ ಊರಿನ ಸಮಸ್ತ ಯೆಹೂದ್ಯರಿಂದ ಸನ್ಮಾನಿತನು. ಅವನು ಬಂದು ನನ್ನ ಬಳಿ ನಿಂತು, ‘ಸಹೋದರ ಸೌಲನೇ, ದೃಷ್ಟಿಯನ್ನು ಪಡೆ,’ ಎಂದನು. ಆ ಕ್ಷಣವೇ ನಾನು ದೃಷ್ಟಿ ಪಡೆದು ಅವನನ್ನು ನೋಡಿದೆ. ಆಗ ಅವನು, ‘ನಮ್ಮ ಪೂರ್ವಜರ ದೇವರು ತಮ್ಮ ಚಿತ್ತವನ್ನು ನೀನು ಅರಿಯಬೇಕೆಂದು, ತಮ್ಮ ಸತ್ಯ ಸ್ವರೂಪಿಯನ್ನು ನೀನು ನೋಡಬೇಕೆಂದು, ತಮ್ಮ ಕಂಠಸ್ವರವನ್ನು ನೀನು ಕೇಳಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ. ನೀನು ಕಂಡು ಕೇಳಿದ ವಿಷಯಗಳಿಗೆ ನೀನೇ ಎಲ್ಲ ಜನರಿಗೆ ಅವರ ಪರವಾಗಿ ಸಾಕ್ಷಿಯಾಗಬೇಕು. ಇನ್ನು ತಡಮಾಡುವುದೇಕೆ? ಏಳು, ಅವರ ನಾಮವನ್ನು ಜಪಿಸಿ, ದೀಕ್ಷಾಸ್ನಾನವನ್ನು ಪಡೆದು ನಿನ್ನ ಪಾಪಗಳನ್ನು ತೊಳೆದುಕೊ,’ ಎಂದನು.

ಕೀರ್ತನೆ: 117:1-2
ಶ್ಲೋಕ: ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶ ಪ್ರಬೋಧಿಸಿರಿ.

ಶುಭಸಂದೇಶ: ಮಾರ್ಕ 16:15-18


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು. ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು. ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು; ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣ ಹೊಂದುವರು.”

1 comment: