ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

26.01.2020 - ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು

ಮೊದಲನೇ ವಾಚನ: ಯೆಶಾಯ 8:23-9:3

ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟ ಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.  ಆದರೂ ಕಷ್ಟ ಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆ ಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆ ಗೌರವ ಬಂದೊದಗುವುದು. ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದಾ ನಡಿಗರಿಗೆ. ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.

ಕೀರ್ತನೆ: 27:1, 4, 13-14

ಶ್ಲೋಕ: ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು

ಎರಡನೇ ವಾಚನ: 1 ಕೊರಿಂಥಿಯರಿಗೆ 1:10-13, 17

ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: ವಾದ ವಿವಾದವಿಲ್ಲದೆ, ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ. ಸಹೋದರರೇ, ನೀವು ಜಗಳವಾಡುತ್ತಿದ್ದೀರಿ ಎಂಬುದು ಖ್ಲೋಯೇಯನ ಮನೆಯವರಿಂದ ತಿಳಿದು ಬಂದಿದೆ. ನಿಮ್ಮ ಪೈಕಿ, ತಾನು ಪೌಲನ ಕಡೆಯವನು ಎಂದು ಒಬ್ಬ, ತಾನು ಅಪೊಲೋಸನ ಕಡೆಯವನು ಎಂದು ಇನ್ನೊಬ್ಬ, ತಾನು ಕೇಫನ ಕಡೆಯವನು ಎಂದು ಮತ್ತೊಬ್ಬ, ತಾನು ಕ್ರಿಸ್ತನ ಕಡೆಯವನು ಎಂದು ಮಗದೊಬ್ಬ. ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಹೇಳಿಕೊಳ್ಳುತ್ತಾರಂತೆ. ಕ್ರಿಸ್ತಯೇಸು ಭಾಗ ಭಾಗವಾಗಿ ವಿಂಗಡಿಸಿ ಹೋಗಿದ್ದಾರೆಯೇ? ನಿಮಗೋಸ್ಕರ ಶಿಲುಬೆಯ ಮೇಲೆ ಮಡಿದವನು ಪೌಲನೇ? ನೀವು ದೀಕ್ಷಾಸ್ನಾನ ಪಡೆದದ್ದು ಪೌಲನ ಹೆಸರಿನಲ್ಲೇ? ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಶುಭಸಂದೇಶವನ್ನು ಸಾರುವುದಕ್ಕೆ. ಅದೂ ವಾಕ್‍ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು.

ಶುಭಸಂದೇಶ: ಮತ್ತಾಯ 4:12-23


ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು. ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸವಿೂಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು. ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ. ಹೀಗೆ: "ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿಬೀದಿಯೇ, ಜೋರ್ಡನಿನ ಹೊರವಲಯವೇ, ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯ ಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು,"ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು. ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು.

ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ ‘ಪೇತ್ರ’ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನ್ನು ಕರೆದರು. ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು. ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು.

No comments:

Post a Comment